ಸಾರಾಂಶ
ಪರಿಸರಸ್ನೇಹಿ ವಾಹನಗಳ ಬಳಕೆಗೆ ಉತ್ತೇಜನ ನೀಡುವುದು ಸಾರಿಗೆ ಇಲಾಖೆ ಕಾರ್ಯವಾಗಿದೆ. ಅದರ ಜತೆಗೆ ರಾಜ್ಯ ಸಾರಿಗೆ ಇಲಾಖೆ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಕಟ್ಟಡಗಳಲ್ಲಿ ನವೀಕರಿಸಬಹುದಾದ ವಿದ್ಯುತ್ ಬಳಕೆಗೆ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ಮುಂದಾಗಿದೆ
ಗಿರೀಶ್ ಗರಗ
ಬೆಂಗಳೂರು : ಪರಿಸರಕ್ಕೆ ಹಾನಿಯುಂಟು ಮಾಡುವ ವಾಹನಗಳ ಮೇಲೆ ಕ್ರಮ ಕೈಗೊಳ್ಳುವುದು, ಎಲೆಕ್ಟ್ರಿಕ್ ವಾಹನ ಸೇರಿದಂತೆ ಪರಿಸರಸ್ನೇಹಿ ವಾಹನಗಳ ಬಳಕೆಗೆ ಉತ್ತೇಜನ ನೀಡುವುದು ಸಾರಿಗೆ ಇಲಾಖೆ ಕಾರ್ಯವಾಗಿದೆ. ಅದರ ಜತೆಗೆ ರಾಜ್ಯ ಸಾರಿಗೆ ಇಲಾಖೆ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಕಟ್ಟಡಗಳಲ್ಲಿ ನವೀಕರಿಸಬಹುದಾದ ವಿದ್ಯುತ್ ಬಳಕೆಗೆ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ಮುಂದಾಗಿದೆ.
ರಾಜ್ಯದಲ್ಲಿ ಸದ್ಯ 3.30 ಕೋಟಿ ವಾಹನಗಳು ನೋಂದಣಿಯಾಗಿವೆ. ಅದರಲ್ಲಿ ಬೆಂಗಳೂರಿನಲ್ಲಿಯೇ 1.20 ಕೋಟಿಗೂ ಹೆಚ್ಚಿನ ವಾಹನಗಳಿವೆ. ಅಲ್ಲದೆ, ರಾಜ್ಯದಲ್ಲಿನ ಮಾಲಿನ್ಯದ ಪ್ರಮಾಣದಲ್ಲಿ ಶೇ.25ಕ್ಕಿಂತ ಅಧಿಕ ವಾಹನಗಳಿಂದ ಉಂಟಾಗುತ್ತಿದೆ. ಅದನ್ನು ತಡೆಯುವ ಹೊಣೆ ಸಾರಿಗೆ ಇಲಾಖೆಯದ್ದಾಗಿದೆ. ಅದಕ್ಕಾಗಿಯೇ ಸಾರಿಗೆ ಇಲಾಖೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜಿಸುತ್ತಿದೆ. ಅದರ ಜತೆಗೆ ಇದೀಗ ಬೇರೆಯವರಿಗೆ ಮಾದರಿಯಾಗುವಂತೆ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆ ಮುಂದಾಗಿದ್ದು, ಇಲಾಖೆಗೆ ಸೇರಿದ 14 ಕಟ್ಟಡಗಳಲ್ಲಿ ಸಾಂಪ್ರದಾಯಿಕ ವಿದ್ಯುತ್ ಬಳಕೆಯನ್ನು ನಿಷೇಧಿಸಿ, ನವೀಕರಿಸಬಹುದಾದ ವಿದ್ಯುತ್ ಬಳಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
400 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆ:ರಾಜ್ಯದಲ್ಲಿ ಸಾರಿಗೆ ಇಲಾಖೆಗೆ ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸೇರಿದಂತೆ 35ಕ್ಕೂ ಹೆಚ್ಚಿನ ಸ್ವಂತ ಕಟ್ಟಡಗಳಿವೆ. ಅವುಗಳಲ್ಲಿ ಪ್ರತಿ ತಿಂಗಳು ಅಂದಾಜು 3 ಸಾವಿರ ಕಿಲೋ ವ್ಯಾಟ್‌ಗೂ ಹಚ್ಚಿನ ವಿದ್ಯುತ್ ಬಳಕೆಯಾಗುತ್ತಿದೆ. ಅದನ್ನು ತಪ್ಪಿಸುವ ಉದ್ದೇಶದೊಂದಿಗೆ ಹಂತಹಂತವಾಗಿ ಸಾರಿಗೆ ಇಲಾಖೆ ಕಟ್ಟಡಗಳಲ್ಲಿ ಸೋಲಾರ್ ವಿದ್ಯುತ್ ಬಳಕೆಗೆ ಉತ್ತೇಜಿಸಲು ನಿರ್ಧರಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಸೋಲಾರ್ ಪ್ಯಾನೆಲ್ ಅಳವಡಿಕೆಗೆ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಅದರ ಮೊದಲ ಹಂತವಾಗಿ ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಬೆಳಗಾವಿ, ಮೈಸೂರು ಸಾರಿಗೆ ವಿಭಾಗ ವ್ಯಾಪ್ತಿಯ 14 ಆರ್‌ಟಿಒ, ಎಆರ್‌ಟಿಒ ಕಚೇರಿಗಳ ಕಟ್ಟಡಗಳಲ್ಲಿ ಸೋಲಾರ್ ವಿದ್ಯುತ್ ಪ್ಯಾನೆಲ್‌ಗಳ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅದರಿಂದಾಗಿ ವಿದ್ಯುತ್ ಬಳಕೆ ಶುಲ್ಕ ಪಾವತಿಯನ್ನು ಉಳಿಸುವುದರ ಜತೆಗೆ ನವೀಕರಿಸಬಹುದಾದ ವಿದ್ಯುತ್ ಬಳಕೆಗೆ ಉತ್ತೇಜಿಸುವ ಉದ್ದೇಶವನ್ನು ಸಾರಿಗೆ ಇಲಾಖೆ ಹೊಂದಿದೆ.ಹಸಿರು ಸೆಸ್‌ನಿಂದ ವೆಚ್ಚ:ಸಾರಿಗೆ ಇಲಾಖೆ ರೂಪಿಸಿರುವ ಯೋಜನೆ ಅನುಷ್ಠಾನಕ್ಕೆ ವಾಹನ ನೋಂದಣಿ ವೇಳೆ ಸಂಗ್ರಹಿಸಲಾಗುವ ಹಸಿರು ಸೆಸ್ ಮೊತ್ತವನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಸೋಲಾರ್ ಪ್ಯಾನೆಲ್ ಅಳವಡಿಕೆಯು ಪರಿಸರ ಸ್ನೇಹಿ ಕಾರ್ಯವಾದ ಕಾರಣ ಹಸಿರು ಸೆಸ್ ಬಳಕೆ ಮಾಡಲಾಗುತ್ತದೆ. ಅಲ್ಲದೆ, ಮಾಹಿತಿಯಂತೆ ಕಳೆದ 5 ವರ್ಷಗಳಲ್ಲಿ (2025ರ ಮಾರ್ಚ್ ಅಂತ್ಯದವರೆಗೆ) ರಾಜ್ಯದಲ್ಲಿ 420 ಕೋಟಿ ರು.ಗೂ ಹೆಚ್ಚಿನ ಮೊತ್ತವನ್ನು ಹಸಿರು ಸೆಸ್ ರೂಪದಲ್ಲಿ ಸಂಗ್ರಹಿಸಲಾಗಿದೆ.
ಅದರಲ್ಲಿ ಸುಮಾರು 51 ಕೋಟಿ ರು.ಗಳನ್ನು ಮಾತ್ರ ಪರಿಸರ ಸ್ನೇಹಿ ಕಾರ್ಯಕ್ಕೆ ಬಳಸಲಾಗಿದೆ. ಇದರ ಬಗ್ಗೆ ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗಿದ್ದವು. ಹೀಗಾಗಿ ಸಾರಿಗೆ ಇಲಾಖೆ ಇದೀಗ ಹಸಿರು ಸೆಸ್ ಮೊತ್ತದಲ್ಲಿ ನವೀಕರಿಸಬಹುದಾದ ಇಂಧನವಾದ ಸೋಲಾರ್ ವಿದ್ಯುತ್ ಬಳಸಿ ಹಸಿರು ಸೆಸ್ ಅನ್ನು ಪರಿಸರ ಸ್ನೇಹಿ ಕಾರ್ಯಕ್ಕೆ ವ್ಯಯಿಸಲಾಗುತ್ತಿದೆ ಎಂದು ತೋರಿಸಲು ನಿರ್ಧರಿಸಲಾಗಿದೆ.ಸೋಲಾರ್ ವಿದ್ಯುತ್ ಎಲ್ಲೆಲ್ಲಿ? ರಾಮನಗರ, ಚಿಕ್ಕಬಳ್ಳಾಪುರ, ತಿಪಟೂರು, ಮಡಿಕೇರಿ, ಸಾಗರ, ಚಿಕ್ಕಮಗಳೂರು, ಉಡುಪಿ, ಬೆಳಗಾವಿ, ಧಾರವಾಡ ಪೂರ್ವ, ಚಿಕ್ಕೋಡಿ, ಕಾರವಾರ, ದಾಂಡೇಲಿ, ಅಥಣಿ, ಹಾವೇರಿ ಸಾರಿಗೆ ಕಚೇರಿಗಳಲ್ಲಿ.