ಉಡುಪಿ: ‘ಸೋಲಾರ್‌ ಗ್ರಾಮ ಯೋಜನೆ’ಗೆ ಜಿಲ್ಲೆ 5 ಗ್ರಾಮ ಪಂಚಾಯಿತಿ ಹೆಸರು ಶಿಫಾರಸ್ಸು- ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ

| Published : May 17 2025, 02:48 AM IST

ಉಡುಪಿ: ‘ಸೋಲಾರ್‌ ಗ್ರಾಮ ಯೋಜನೆ’ಗೆ ಜಿಲ್ಲೆ 5 ಗ್ರಾಮ ಪಂಚಾಯಿತಿ ಹೆಸರು ಶಿಫಾರಸ್ಸು- ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ ಉಡುಪಿ ಜಿಲ್ಲೆಯ 4 ಗ್ರಾಮ ಪಂಚಾಯಿತಿಗಳನ್ನು ಸೋಲಾರ್ ಪಂಚಾಯಿತಿಗಳಾಗಿ ಆಯ್ಕೆಗೆ ಶಿಫಾರಸ್ಸು ಮಾಡಲಾಗಿದೆ ಎಂದು ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ ಉಡುಪಿ ಜಿಲ್ಲೆಯ 4 ಗ್ರಾಮ ಪಂಚಾಯಿತಿಗಳನ್ನು ಸೋಲಾರ್ ಪಂಚಾಯಿತಿಗಳಾಗಿ ಆಯ್ಕೆಗೆ ಶಿಫಾರಸ್ಸು ಮಾಡಲಾಗಿದೆ ಎಂದು ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಬಗ್ಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಟತಟ್ಟು, ಬೈಂದೂರು ಕ್ಷೇತ್ರದ ಕಿರಿಮಂಜೇಶ್ವರ, ಕಾರ್ಕಳ ಕ್ಷೇತ್ರದ ನಿಟ್ಟೆ, ಕಾಪು ಕ್ಷೇತ್ರದ ಮಜೂರು, ಉಡುಪಿ ಕ್ಷೇತ್ರದ ಉಪ್ಪೂರು ಪಂಚಾಯಿತಿಗಳನ್ನು ಸೂರ್ಯ ಘರ್ ಯೋಜನೆಯಡಿ ಮಾದರಿ ಸೋಲಾರ್ ಗ್ರಾ.ಪಂ.ಗಳನ್ನಾಗಿ ಮಾಡಲು ಶಿಫಾರಸ್ಸು ಮಾಡಲಾಗಿದೆ ಎಂದರು.ಸೂರ್ಯಘರ್ ಯೋಜನೆಯಡಿ ಪ್ರತಿಮನೆಯಲ್ಲಿ ೩೦೦ ಯೂನಿಟ್ ಸೌರ ವಿದ್ಯುತ್ ಉತ್ಪಾದನೆ ಮಾಡಲು ೨,೨೦,೦೦೦ ರು. ಸಾಲವನ್ನು ರಾಷ್ಟ್ರೀಕೃತ ಬ್ಯಾಂಕುಗಳು ನೀಡುತ್ತಿದ್ದು, ಅದರಲ್ಲಿ ೭೮,೦೦೦ ರು. ಸಬ್ಸಿಡಿ ನೀಡಲಾಗುತ್ತಿದೆ ಎಂದು ಸಂಸದರು ತಿಳಿಸಿದರು.ಪ್ರಥಮ ಹಂತದಲ್ಲಿ ಆಯ್ಕೆ ಮಾಡಲಾದ ೫ ಪಂಚಾಯಿತಿಗಳ ಯಶಸ್ಸನ್ನು ಪರಿಗಣಿಸಿ, ಇತರ ಪಂಚಾಯಿತಿಗಳಿಗೆ ವಿಸ್ತರಿಸಲಾಗುವುದು ಮತ್ತು ಆಯ್ಕೆಯಾದ ಗ್ರಾಮ ಪಂಚಾಯಿತಿಗಳಿಗೆ ವಿಶೇಷ ಅನುದಾನ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದ ಸಂಸದ ಕೋಟ ಹೇಳಿದರು. ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ, ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್, ಉಡುಪಿ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಪಿ. ದಿನೇಶ್ ಉಪಾಧ್ಯಾಯ ಮುಂತಾದವರು ಹಾಜರಿದ್ದರು.