ಒಂದು ವರ್ಷದಲ್ಲಿ 28 ಸಾವಿರ ಪೌತಿ ಖಾತೆ ಮಾಡಿ ರೈತರಿಗೆ ಪಹಣಿ ವಿತರಣೆ: ಎಸಿ ಶ್ರೀನಿವಾಸ್

KannadaprabhaNewsNetwork |  
Published : Feb 25, 2026, 01:45 AM IST
24ಕೆಎಂಎನ್ ಡಿ17  | Kannada Prabha

ಸಾರಾಂಶ

ಪ್ರತಿ ವಾರ 1 ಸಾವಿರ ಪೌತಿ ಖಾತೆಗಳಾಗುತ್ತಿವೆ. ಪೌತಿ ಖಾತೆ ಮಾಡಿಸಿಕೊಳ್ಳಲು ತಾಲೂಕಿನ ರೈತರು ಹೆಚ್ಚು ಹಣ ಖರ್ಚು ಮಾಡಿ ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಗ್ರಾಮ ಆಡಳಿತ ಅಧಿಕಾರಿಗಳು ರೈತರ ಮನೆಬಾಗಿಲಿಗೆ ಬರಲಿದ್ದಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಕಂದಾಯ ಇಲಾಖೆಯಲ್ಲಿ ಬಾಕಿ ಇದ್ದ 1.8 ಲಕ್ಷ ಪೌತಿ ಖಾತೆಗಳ ಪೈಕಿ ಕಳೆದ ಒಂದು ವರ್ಷದಲ್ಲಿ ಸುಮಾರು 28 ಸಾವಿರ ಪೌತಿ ಖಾತೆಗಳನ್ನು ಮಾಡಿ ರೈತರಿಗೆ ಪಹಣಿ ವಿತರಿಸಲಾಗಿದೆ ಎಂದು ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಂದಾಯ ಇಲಾಖೆ ಪ್ರಗತಿ ಕುರಿತು ಮಂಗಳವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಪ್ರತಿನಿತ್ಯ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ. ಐದು ವರ್ಷದಲ್ಲಿ ಆಗದಂತಹ ಕೆಲಸ ಕಾರ್ಯಗಳನ್ನು ಕೇವಲ ಒಂದು ವರ್ಷದಲ್ಲಿ ಮಾಡಲಾಗಿದೆ ಎಂದರು.

ಉಳಿದಿರುವ 75 ಸಾವಿರಕ್ಕೂ ಹೆಚ್ಚು ಪೌತಿ ಖಾತೆಗಳನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚಿಸಲಾಗಿದೆ. ಪ್ರತಿ ವಾರ 1 ಸಾವಿರ ಪೌತಿ ಖಾತೆಗಳಾಗುತ್ತಿವೆ. ಪೌತಿ ಖಾತೆ ಮಾಡಿಸಿಕೊಳ್ಳಲು ತಾಲೂಕಿನ ರೈತರು ಹೆಚ್ಚು ಹಣ ಖರ್ಚು ಮಾಡಿ ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಗ್ರಾಮ ಆಡಳಿತ ಅಧಿಕಾರಿಗಳು ರೈತರ ಮನೆಬಾಗಿಲಿಗೆ ಬರಲಿದ್ದಾರೆ ಎಂದರು.

ಆ ವೇಳೆ ಮೃತ ಖಾತೆದಾರರ ಮರಣ ಪ್ರಮಾಣ ಪತ್ರವಿಲ್ಲದಿದ್ದರೆ ಗ್ರಾಮದಲ್ಲಿಯೇ ಮಹಜರ್ ಮಾಡುವರು. ಆಧಾರ್‌ಕಾರ್ಡ್ ಜೆರಾಕ್ಸ್, ಪಹಣಿ, ಎಂಆರ್‌ ಮತ್ತು ಹಕ್ಕು ಖುಲಾಸೆ ಪತ್ರ ಒದಗಿಸಿಕೊಟ್ಟಲ್ಲಿ ಕೇವಲ 15 ದಿನದಲ್ಲಿ ಪೌತಿಖಾತೆಯಾಗುತ್ತದೆ. ರೈತರು ಈ ಸೌಲಭ್ಯವನ್ನು ಸದ್ಬಳಕೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕಳೆದ ಒಂದು ವರ್ಷದಲ್ಲಿ ಪಾಂಡವಪುರ ಉಪ ವಿಭಾಗ ವ್ಯಾಪ್ತಿಯಲ್ಲಿ 9 ಸಾವಿರ ಪಹಣಿ ತಿದ್ದುಪಡಿ ಮಾಡಲಾಗಿದೆ. ತಾಲೂಕಿನಲ್ಲಿ ತಹಸೀಲ್ದಾರ್ ಹಂತದಲ್ಲಿ 3800 ಪಹಣಿ ತಿದ್ದುಪಡಿ ಮಾಡಲಾಗಿದೆ. ಎಸಿ ನ್ಯಾಯಾಲಯದಲ್ಲಿ ಬಾಕಿ ಇದ್ದ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದರು.

ತಾಲೂಕಿಗೆ ಸಂಬಂಧಿಸಿದ 500ಕ್ಕೂ ಹೆಚ್ಚು ಪ್ರಕರಣಗಳು ಬಗೆಹರಿದಿವೆ. ಜಮೀನು ಪೋಡಿಗೆ ಸಂಬಂಧಿಸಿದ 1150 ಪ್ರಕರಣ ವಿಲೇವಾರಿಯಾಗಿ 1100 ಪ್ರಕರಣ ಬಾಕಿಯಿವೆ. ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ತಿಂಗಳಲ್ಲಿ ಇತ್ಯರ್ಥಗೊಳಿಸಲು ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಪೌತಿ ಖಾತೆ ಸಂದರ್ಭದಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾಗಿದ್ದ 660 ತಕರಾರು ಪ್ರಕರಣಗಳನ್ನೂ ಸಹ ಇತ್ಯರ್ಥ ಪಡಿಸಲಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ ಜಿಲ್ಲೆಯ ಡೀಸಿ, ಎಸಿ ಮತ್ತು ತಹಸೀಲ್ದಾರ್ ನ್ಯಾಯಾಲಯಗಳಲ್ಲಿ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವಿಲೇವಾರಿಯಾಗಿವೆ. ರೈತರು ಪೌತಿ ಖಾತೆ ಮಾಡಿಸಿಕೊಂಡು ಪಿಎಂಕಿಸಾನ್ ಯೋಜನೆಗೆ ಆಧಾರ್ ಜೋಡಣೆ ಮಾಡಿಸಿದರೆ ಪ್ರತಿವರ್ಷ 6 ಸಾವಿರ ಹಣ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಅಲ್ಲದೆ ಕೃಷಿ ಇಲಾಖೆಯಲ್ಲಿ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದರು.

ಪಹಣಿ ತಿದ್ದುಪಡಿ ಸಪ್ತಾಹ:

ಮುಂದಿನ ಒಂದು ವಾರ ಕಾಲ ತಾಲೂಕಿನಲ್ಲಿ ಪಹಣಿ ತಿದ್ದುಪಡಿ ಸಪ್ತಾಹ ಹಮ್ಮಿಕೊಳ್ಳಲಾಗುವುದು. ಈ ವೇಳೆ ರೈತರ ಪಹಣಿ ತಿದ್ದುಪಡಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ರೈತರಿಗೆ ಮಂಜೂರಾಗಿ ದುರಸ್ಥಿಯಾಗದ ಸರ್ಕಾರಿ ಭೂಮಿಯನ್ನು ತ್ವರಿತಗತಿಯಲ್ಲಿ ದುರಸ್ತು ಮಾಡಲು ಜಿಲ್ಲಾ ಉಸ್ತುವಾರಿ ಸಚಿವರು ಹೆಚ್ಚು ಒತ್ತು ಕೊಟ್ಟಿರುವುದರಿಂದ ಈಗಾಗಲೇ ದುರಸ್ತು ಮಾಡಿ 212 ರೈತರಿಗೆ ಪಹಣಿ ನೀಡಲಾಗಿದೆ ಎಂದರು.

ತಾಲೂಕಿನಲ್ಲಿ 400 ಕ್ಕೂ ಹೆಚ್ಚು ಸರ್ವೆ ನಂಬರ್‌ಗಳನ್ನು ಸ್ಕ್ಯಾನ್ ಮಾಡಿ ಡೇಟಾ ಅಪ್‌ಡೇಟ್‌ ಮಾಡಲಾಗಿದೆ. ಸಣ್ಣಪುಟ್ಟ ತಿದ್ದುಪಡಿ ಹಂತದಲ್ಲಿರುವುದು ಬಗೆಹರಿದರೆ ಮುಂದಿನ 6 ತಿಂಗಳಲ್ಲಿ ದುರಸ್ತು ಮಾಡಿ ಪಹಣಿ ಕೊಡಬಹುದು. ಇದರಿಂದ ಸಾವಿರಾರು ರೈತರಿಗೆ ಅನುಕೂಲವಾಗಲಿದೆ ಎಂದರು.

ಈ ವೇಳೆ ತಹಸೀಲ್ದಾರ್ ಜಿ.ಆದರ್ಶ, ಆರ್‌ಆರ್‌ಟಿ ಶಿರಸ್ತೇದಾರ್ ಮಲ್ಲಿಕಾರ್ಜುನಸ್ವಾಮಿ, ರಾಜಸ್ವ ನಿರೀಕ್ಷಕರಾದ ಕೆ.ಎನ್.ಮಧುಸೂಧನ್, ಗೋವಿಂದರಾಜು, ಮಹದೇಶಕುಮಾರ್, ತಾಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಈರಣ್ಣ ದಾನಸೂರ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಚಿತ ಆರೋಗ್ಯ ಶಿಬಿರ: 300 ಶಿಬಿರಾರ್ಥಿಗಳಿಗೆ ತಪಾಸಣೆ
ಸವಿತಾ ಸಮಾಜದವರು ವೈಯಕ್ತಿಕ ಆರೋಗ್ಯದತ್ತ ಗಮನಹರಿಸಿ: ಡಾ. ಪುಷ್ಪಲತಾ