ಹರಪನಹಳ್ಳಿ: ಹೋಳಿ ಹುಣ್ಣುಮೆ ಅಂಗವಾಗಿ ತಾಲೂಕಿನ ವಿವಿಧೆಡೆ ಕಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಮಾ. 4ರಂದು ಕಾಮದಹನ ಮಾಡಿ ನಂತರ ಬಣ್ಣ ಎರಚಲು ಹಾಗೂ ರೇನ್ ಡ್ಯಾನ್ಸ್‌ಗೆ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಸನ್ನದ್ದರಾಗಿದ್ದಾರೆ.ಮಂಗಳವಾರ ಕಾಮನಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಬುಧವಾರ ಬೆಳಗಿನ ಜಾವ ಕಾಮದಹನದ ನಂತರ ಪರಸ್ಪರ ಬಣ್ಣ ಎರಚುವ ಕಾರ್ಯಕ್ರಮ ನಡೆಯಲಿದೆ. ತಾಲೂಕಿನಲ್ಲಿ ವಿವಿಧೆಡೆ ಒಟ್ಟು 29 ಕಡೆ ಕಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಹರಪನಹಳ್ಳಿ ನಗರದಲ್ಲಿ 7 ಕಡೆ, ಚಿಗಟೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 8 ಕಡೆ, ಹಲುವಾಗಲು ವ್ಯಾಪ್ತಿಯಲ್ಲಿ 11 ಕಡೆ, ಅರಸೀಕೆರೆ ಭಾಗದಲ್ಲಿ 7 ಹೀಗೆ ಒಟ್ಟು 29 ಕಡೆ ಕಾಮನ ಮೂರ್ತಿ ಸ್ಥಾಪಿಸಲಾಗಿದೆ.
ಹೋಳಿ ಹಿನ್ನೆಲೆಯಲ್ಲಿ ಶಾಂತಿ ಸಭೆ ಮಾಡಿರುವ ಡಿವೈಎಸ್ಪಿ ಸಂತೋಷ ಚವ್ಹಾಣ, ಸಿಪಿಐ ಮಹಾಂತೇಶ ಸಜ್ಜನ
ಕಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಸ್ಥಳಗಲ್ಲಿ ಸಿಸಿ ಕ್ಯಾಮೆರ ಅಳವಡಿಕೆ, ಗಲಾಟೆ, ಗದ್ದಲಕ್ಕೆ ಅವಕಾಶ ವಿಲ್ಲದಂತೆ ಶಾಂತಿಯುತವಾಗಿ ಇನ್ನೊಬ್ಬರಿಗೆ ತೊಂದರೆಯಾಗದಂತೆ ಹೋಳಿ ಹಬ್ಬವನ್ನು ಮಧ್ಯಾಹ್ನ ಒಂದು ಗಂಟೆಗೆ ವರೆಗೆ ಆಚರಿಸಲು ಸಂಘಟಕರಿಗೆ ಸೂಚಿಸಿದ್ದಾರೆ. ಒಟ್ಟಿನಲ್ಲಿ ರಂಗು ರಂಗಿನ ಹೋಳಿ ಹಬ್ಬಕ್ಕೆ ಹರಪನಹಳ್ಳಿ ಸಿದ್ಧಗೊಂಡಿದೆ. ಹಗರಿಬೊಮ್ಮನಹಳ್ಳಿಯಲ್ಲಿ ಹೋಳಿ ಸಂಭ್ರಮಹಗರಿಬೊಮ್ಮನಹಳ್ಳಿ: ಪಟ್ಟಣದ ವಿವಿಧೆಡೆ ಬಣ್ಣದ ಹಬ್ಬ ಹೋಳಿಯನ್ನು ಮಂಗಳವಾರ ಸಡಗರದಿಂದ ಆಚರಿಸಲಾಯಿತು. ಬಿರು ಬಿಸಿಲಿನ ನಡುವೆಯೂ ಮಕ್ಕಳು, ಯುವಕ ಯುವತಿಯರು ಸಂಜೆ ವರೆಗೂ ಪರಸ್ಪರ ನಾನಾ ಬಣ್ಣಗಳನ್ನು ಎರಚಿ ಸಂಭ್ರಮಿಸಿದರು.
ಪಟ್ಟಣದ ಕೂಡ್ಲಿಗಿ ಸರ್ಕಲ್‌ನಲ್ಲಿ ಪ್ರತಿ ವರ್ಷದಂತೆ ಸಾವಿರಾರು ಯುವಕ-ಯುವತಿಯರು ಪಾಲ್ಗೊಂಡಿದ್ದ ಕಲರ್ಸ್ ವಿತ್ ಕಾರಂಜಿ ಹೋಳಿ ಹಬ್ಬಕ್ಕೆ ಮೆರಗು ನೀಡಿತು. ಬಣ್ಣದಾಟ ಸೌಹಾರ್ದ ಚೌಕಟ್ಟಿನಲ್ಲಿ ಆಚರಣೆಯಾಗಲಿ ಎಂದು ಪೊಲೀಸ್ ಇಲಾಖೆ ಶಾಂತಿ ಸಭೆ ನಡೆಸಿತ್ತು.ಹೋಳಿಹಬ್ಬದ ರಂಗಿನಾಟಕ್ಕೆ ಕ್ಷಣಗಣನೆ
ಹೊಸಪೇಟೆ: ಹೋಳಿ ಹಬ್ಬದ ಬಣ್ಣದಾಟಕ್ಕೆ ವಿಜಯನಗರ ಜಿಲ್ಲೆ ಸಂಪೂರ್ಣ ಸಜ್ಜಾಗಿದ್ದು, ಮಾರುಕಟ್ಟೆಯಲ್ಲಿ ಬಣ್ಣಗಳ ಮಾರಾಟ ಜೋರಾಗಿದೆ. ಮಂಗಳವಾರ ರಾತ್ರಿ ಕಾಮದಹನದ ನಂತರ ಬುಧವಾರ ಬೆಳಗ್ಗೆ ರಂಗಿನಾಟದಲ್ಲಿ ತೊಡಗಿಕೊಳ್ಳಲು ಸಕಲ ಸಿದ್ದತೆಗಳು ನಡೆದಿವೆ. ಈಗಾಗಲೇ ಹೊಸಪೇಟೆ ನಗರದ ಎಲ್ಲ ಬಡಾವಣೆಗಳಲ್ಲಿ ಹಾಗೂ ರಸ್ತೆ ಪಕ್ಕದಲ್ಲಿ ರತಿ-ಕಾಮಣ್ಣನನ್ನು ಪ್ರತಿಷ್ಠಾಪಿಸಲಾಗಿದೆ. ಅಂಗಡಿಗಳಲ್ಲಿ ತರಹೇವಾರಿ ಬಣ್ಣಗಳು, ಪಿಚಕಾರಿಗಳು ಸೇರಿದಂತೆ ಬಣ್ಣದಾಟಕ್ಕೆ ಬೇಕಾಗುವ ಸಾಮಗ್ರಿಗಳ ಮಾರಾಟ ಜೋರಾಗಿದೆ.