ಕನ್ನಡಪ್ರಭ ವಾರ್ತೆ, ತುರುವೇಕೆರೆ
ತುರುವೇಕೆರೆ ತಾಲೂಕಿನಲ್ಲಿ ಸೋಮವಾರ ರಾತ್ರಿ ೨೯೧ ಮಿಲಿ ಮೀಟರ್ ಮಳೆಯಾಗಿದೆ. ಮುಂಗಾರು ಹಂಗಾಮು ಬೆಳೆ ಬಿತ್ತನೆ ಮಾಡಿದ ರೈತರ ಮೊಗದಲ್ಲಿ ಮಂದಹಾಸ ಬೀರಿದೆ.ಕಳೆದ ಎರಡು ಮೂರು ತಿಂಗಳುಗಳಿಂದ ಮಳೆ ಬೀಳದೆ ಮುಂಗಾರು ಬಿತ್ತನೆ ಮಾಡಿದ ರೈತರಲ್ಲಿ ಆತಂಕ ಆವರಿಸಿತ್ತು. ಕೆಲ ರೈತರು ತಮ್ಮ ಕೊಳವೆ ಬಾವಿಗಳಿಂದ ರಾಗಿ ಬೆಳೆಗೆ ನೀರನ್ನು ಹಾಯಿಸುತ್ತಿದ್ದರು. ಮತ್ತೆ ಕೆಲ ರೈತರು ಟ್ಯಾಂಕರ್‌ಗಳ ಮೂಲಕ ರಾಗಿ ಹೊಲಕ್ಕೆ ನೀರುಣಿಸುವ ಮೂಲಕ ನೀರು ಹಾಯಿಸಿ ಬೆಳೆಗಳನ್ನು ಕಾಪಾಡಿಕೊಳ್ಳುತ್ತಿದ್ದರು.
ನೀರಿನ ಸೌಕರ್ಯವಿಲ್ಲದ ರೈತರು ಬೆಳೆದಿದ್ದ ರಾಗಿ, ತೊಗರಿ, ಅವರೆ, ಜೋಳ, ಇಬ್ಬನಿ ಜೋಳ, ಹುರುಳಿ, ಸಾಸಿವೆ, ಮೊದಲಾದ ಬೆಳೆಗಳು ಒಣಗುವ ಹಂತಕ್ಕೆ ತಲುಪಿದ್ದವು. ಸಾವಿರಾರು ರುಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತೆ ಆಗಿತ್ತು.ನಿನ್ನೆ ಸುರಿದ ಮಳೆಯಿಂದಾಗಿ ತಾಲೂಕಿನ ಹಲವಾರು ಕೆರೆ, ಕಟ್ಟೆ, ಗುಂಡಿಗಳಲ್ಲಿ ನೀರು ಸಂಗ್ರಹವಾಗಿದೆ. ತೆಂಗು, ಅಡಿಕೆ, ಬಾಳೆ ಮತ್ತು ತೋಟಗಳ ಸಾಲು, ಹೊಲ, ಗದ್ದೆ ಬಯಲುಗಳಲ್ಲಿ ನೀರು ನಿಂತು ಮುಂಗಾರು ಮತ್ತು ವಾಣಿಜ್ಯ ಬೆಳೆಗಳು ಹಸಿರಿನಿಂದ ಕಂಗೊಳಿಸುತ್ತಿವೆ.
ಪಟ್ಟಣದಲ್ಲಿ ೩೯.೦, ದಂಡಿನಶಿವರ ೧೮.೪, ಮಾಯಸಂದ್ರ ೧೦೫.೬, ದಬ್ಬೇಘಟ್ಟ ೮೮, ಸಂಪಿಗೆ ೪೦.೮ ಮಿ.ಮೀಟರ್ ಮಳೆಯಾಗಿದೆ.ಫೋಟೊ......
೭ ಟಿವಿಕೆ ೨ -ತುರುವೇಕೆರೆ ತಾಲೂಕಿನ ಮುನಿಯೂರು ಗದ್ದೆ ಬಯಲಿನಲ್ಲಿರುವ ರಾಗಿ ಬೆಳೆ ತೆನೆಯೊಡೆದು ಹಸಿರಿನಿಂದ ಕಂಗೊಳಿಸುತ್ತಿದೆ.