ಶಿಕ್ಷಕನ ಅಮಾನತು ಖಂಡಿಸಿ ೨ನೇ ದಿನವೂ ಪ್ರತಿಭಟನೆ

KannadaprabhaNewsNetwork |  
Published : Feb 06, 2025, 11:47 PM IST
ಶಿಕ್ಷಕ ಅಮಾನತು: ೨ ನೇ ದಿನವೂ ತರಗತಿಗೆ ಗೈರಾದ ವಿದ್ಯಾರ್ಥಿಗಳು, ಒರ್ವ ವಿದ್ಯಾರ್ಥಿನಿ ಅಸ್ವಸ್ಥ !  | Kannada Prabha

ಸಾರಾಂಶ

ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಗುರುವಾರ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್ ಎಸ್‌ಡಿಎಂಸಿ ಸದಸ್ಯರು, ಪೋಷಕರೊಂದಿಗೆ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಯಳಂದೂರುಗುಂಬಳ್ಳಿ ಪ್ರೌಢಶಾಲೆಯ ಶಿಕ್ಷಕ ಎಂ.ವೀರಭದ್ರಸ್ವಾಮಿ ಅವರನ್ನು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅಮಾನತುಗೊಳಿಸಿರುವ ಕ್ರಮವನ್ನು ಖಂಡಿಸಿ ವಿದ್ಯಾರ್ಥಿಗಳು ಪೋಷಕರು ನಡೆಸುತ್ತಿರುವ ಪ್ರತಿಭಟನೆ ೨ ನೇ ದಿನವೂ ಮುಂದುವರೆದಿದ್ದು ವಿದ್ಯಾರ್ಥಿಗಳು ಗುರುವಾರವೂ ಶಾಲೆಗೆ ಗೈರಾಗಿ ಧರಣಿ ನಡೆಸಿದರು.ಶಾಲೆಯ ಶಿಕ್ಷಕರು ಪ್ರವಾಸದ ವೇಳೆ ಬಸ್ ಓಡಿಸಿರುವುದು ಚಾಲಕ ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲು ಅವರು ಬಸ್ ಚಾಲನೆ ಮಾಡಿದ್ದಾರೆ. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿ, ಶಾಲಾ ಮಕ್ಕಳು ಹಾಗೂ ಇತರೆ ಶಿಕ್ಷಕರ ಹೇಳಿಕೆಯನ್ನು ಪಡೆಯದೇ ಉಪ ನಿರ್ದೇಶಕರಿಗೆ ಈ ಬಗ್ಗೆ ವರದಿ ಸಲ್ಲಿಸಿದ್ದಾರೆ. ಈ ವರದಿಯ ಆಧಾರದ ಮೇಲೆ ಏಕಾಏಕಿ ಉಪ ನಿರ್ದೇಶಕರು ಇವರನ್ನು ಅಮಾನತುಗೊಳಿಸಿದ್ದಾರೆ. ಇವರು ಮಾನವೀಯತೆ ತೋರಿ, ಮಕ್ಕಳ ಪ್ರಾಣ ರಕ್ಷಣೆ ಮಾಡಿರುವುದು ತಪ್ಪೇ ಎಂದು ಪೋಷಕರು, ವಿದ್ಯಾರ್ಥಿಗಳು ಹಾಗೂ ಎಸ್‌ಡಿಎಂಸಿ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದ್ದರು. ಇದು ಗುರುವಾರವೂ ಮುಂದುವರೆದು ವಿದ್ಯಾರ್ಥಿಗಳು ಶಾಲೆಗೆ ಗೈರಾಗಿದ್ದರು.ಸ್ಥಳಕ್ಕೆ ಶಿಕ್ಷಣ ಇಲಾಖೆಯ ಉಪ ನಿರ್ದೆಶಕ ರಾಮಚಂದ್ರ ರಾಜೇ ಅರಸ್ ಗುರುವಾರ ಶಾಲೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಾಜಣ್ಣ ಸದಸ್ಯರು ಹಾಗೂ ಪೋಷಕರು ಮತ್ತು ಗ್ರಾಮಸ್ಥರು ಹಾಜರಿದ್ದರು. ಏಕಾಏಕಿ ವೀರಭದ್ರಸ್ವಾಮಿರನ್ನು ಅಮಾನತು ಮಾಡಿರುವ ಬಗ್ಗೆ ಸ್ಪಷ್ಟನೆ ನೀಡಬೇಕು. ಈ ಆದೇಶವನ್ನು ಹಿಂಪಡೆಯಬೇಕು ಎಂ.ವೀರಭದ್ರಸ್ವಾಮಿ ಮತ್ತೆ ಈ ಶಾಲೆಗೆ ಬರಬೇಕು ಎಂದು ಪಟ್ಟು ಹಿಡಿದರು. ಅಸ್ವಸ್ತಗೊಂಡ ವಿದ್ಯಾರ್ಥಿನಿ:

ಇದೆ ಶಾಲೆಯ ವಿಕಲಚೇತನ, ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಗೆದ್ದು ಶಾಲೆಗೆ ಕೀರ್ತಿ ತಂದಿದ್ದ ವಿದ್ಯಾರ್ಥಿನಿ ಐಶ್ವರ್ಯ ಉಪ ನಿರ್ದೇಶಕರ ಮುಂದೆ ಅತ್ತು ವೀರಭದ್ರಸ್ವಾಮಿಯವರ ಅಮಾನತು ಆದೇಶ ವಾಪಸ್ಸು ಪಡೆಯಬೇಕು ಎಂದು ಗೊಗರೆಯುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. ಈ ಸಂದರ್ಭದಲ್ಲಿ ಈಕೆಯನ್ನು ಸಂತೈಸಲು ಶಿಕ್ಷಕರು ಯತ್ನಿಸಿದರೂ ಅವರಿಗೆ ಯಶ ಸಿಗಲಿಲ್ಲ. ನಂತರ ಈಕೆ ಅಸ್ವಸ್ತಳಾಗಿ ಶಾಲೆಯ ಹೊರಭಾಗದಲ್ಲಿ ಕುಸಿದು ಬಿದ್ದಳು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಹಾಗೂ ಈಕೆಯ ಪೋಷಕರು ಇವಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವಾಹನದಲ್ಲೇ ಯಳಂದೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ ಘಟನೆ ನಡೆಯಿತು.ಕ್ಷೇತ್ರ ಶಿಕ್ಷಣಾಧಿಕಾರಿ ನೀಡಿರುವ ವರದಿಯಲ್ಲಿ ಲೋಪವಿದೆ. ಒಂದು ವಾರದೊಳಗೆ ಈ ಸಮಸ್ಯೆಗೆ ಪರಿಹಾರ ಸೂಚಿಸಬೇಕು. ವೀರಭದ್ರಸ್ವಾಮಿ ಅಮಾನತು ಆದೇಶ ವಾಪಸ್ಸು ಪಡೆಯಬೇಕು. ಇದಕ್ಕೆ ಒಂದು ವಾರದೊಳಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಒಂದು ವಾರದೊಳಗೆ ಈ ಸಮಸ್ಯೆಗೆ ಪರಿಹರವನ್ನು ಸೂಚಿಸಬೇಕು. ಇಲ್ಲವಾದಲ್ಲಿ ಮಕ್ಕಳು ಶಾಲೆಗೆ ಬರುವುದಿಲ್ಲ. ನಮ್ಮ ಪ್ರತಿಭಟನೆ ಮುಂದುವರೆಯುತ್ತದೆ ಎಂದು ಪೋಷಕರು ಎಚ್ಚರಿಕೆ ನೀಡಿದರು. ಇದಕ್ಕೆ ಉಪ ನಿರ್ದೇಶಕರು ಮೇಲ್ಮಟ್ಟದ ಅಧಿಕಾರಿಗಳಿಗೆ ನಾನು ವರದಿ ನೀಡಿ ಇದಕ್ಕೆ ಸೂಕ್ತ ಕ್ರಮ ವಹಿಸುವ ಭರವಸೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ, ಬಿಆರ್‌ಸಿ ನಂಜುಂಡಯ್ಯ, ಬಿಆರ್‌ಪಿ ರೇಚಣ್ಣ ಎಸ್‌ಡಿಎಂಸಿ ಅಧ್ಯಕ್ಷ ರಾಜಣ್ಣ ಸದಸ್ಯರು ಮುಖ್ಯ ಶಿಕ್ಷಕರ ಸಹ ಶಿಕ್ಷಕರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!