ಕನ್ನಡಪ್ರಭ ವಾರ್ತೆ ಪಾಂಡವಪುರ
ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಯಲ್ಲಿ ತಾಲೂಕಿನ ಎಲೆಕೆರೆ ಸರ್ಕಾರಿ ಆದರ್ಶ ವಿದ್ಯಾಲಯದ ಮಕ್ಕಳು ದ್ವಿತೀಯ ಸ್ಥಾನ ಪಡೆದುಕೊಂಡು ಶಾಲೆಗೆ, ತಾಲೂಕು, ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು, ಉಪನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಚಿತ್ರದುರ್ಗ ಆಶ್ರಯದಲ್ಲಿ ಶ್ರೀಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಫೆ.7 ಮತ್ತು 8ರಂದು ನಡೆದ 2025 ನೇ ಸಾಲಿನ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ಒಟ್ಟು ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ನಡುವೆ ಸ್ಪರ್ಧೆ ನಡೆದು ಜಾನಪದ ಜಾತ್ರೆ ಎಂಬ ಶೀರ್ಷಿಕೆಯೊಂದಿಗೆ ರಾಜ್ಯದ ವಿವಿಧ ಜಿಲ್ಲೆಗಳ ಜಾನಪದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ನೃತ್ಯ ಪ್ರಕಾರಗಳಾದ ಪೂಜೆ ಕುಣಿತ, ವೀರಗಾಸೆ ಕುಣಿತ, ವೀರ ಮಕ್ಕಳ ಕುಣಿತ, ಮರಗಾಲು ಕುಣಿತ, ನಂದಿಧ್ವಜ ಕುಣಿತ, ಬೇಡರ ವೇಷ ಕುಣಿತ, ಪಾಠ ಕುಣಿತ, ಕರಗ ಕುಣಿತ, ಸೋಮನ ಕುಣಿತ, ಕೀಲು ಕುದುರೆ ಕುಣಿತ, ಮಾರಿ ಕುಣಿತ ಹೀಗೆ ವಿವಿಧ ಪ್ರಕಾರದ ಜಾನಪದ ನೃತ್ಯಗಳಲ್ಲಿ ನಿಗದಿಪಡಿಸಿದ ಕಾಲಾವಧಿಯಲ್ಲಿ ಅದ್ಭುತವಾಗಿ ಪ್ರದರ್ಶನ ಕೊಟ್ಟು ನೆರೆದಿದ್ದ ಎಲ್ಲ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಜಾನಪದ ನೃತ್ಯದಲ್ಲಿ ಭಾಗವಹಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಶ್ರೇಯ, ಜ್ಞಾನವಿ, ವರಲಕ್ಷ್ಮಿ, ಭೂಮಿಕ, ಇಂಚರ, ಅಂಕಿತ ಪ್ರತಾಪ್, ಕಿಶೋರ್, ಹರ್ಷಿತ್, ಧನುಷ್, ದಿಗಂತ್, ಆಕಾಶ್ ಹಾಗೂ ಮಕ್ಕಳಿಗೆ ನೃತ್ಯ ಸಂಯೋಜನೆಯನ್ನು ಮಾಡಿದ ವಿಶ್ವನಾಥ್ ಎಲ್.ಚಂಗಚಹಳ್ಳಿ ಅವರು ಹೆಸರಾಂತ ಜಾನಪದ ಕಲಾವಿದರು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರು ಹಾಗೂ ವಿವಿಧ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಕ್ಕಳ ಸಾಧನೆಗೆ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಹಾಗೂ ಬಿಇಒ ರವಿಕುಮಾರ್ ಅಭಿನಂದಿಸಿದ್ದಾರೆ. ಶಾಲೆ ಮುಖ್ಯ ಶಿಕ್ಷಕ ಮಹೇಶ್ವರಪ್ಪ ಹಾಗೂ ಎಲ್ಲ ಶಿಕ್ಷಕ ವೃಂಧದವರು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯೋಗೀಶ್ ಹಾಗೂ ಸದಸ್ಯರು ಮತ್ತು ಎಲೆಕರೆ ಗ್ರಾಮದ ಹಿರಿಯರಾದ ಪೆಟ್ರೋಲ್ ಬಂಕ್ ಚಂದ್ರಣ್ಣ ಅವರು ಮಕ್ಕಳ ಈ ಸಾಧನೆಗೆ ಅಭಿನಂದಿಸಿದ್ದಾರೆ.