ಕೈ ಕೊಟ್ಟ ಏತ ನೀರಾವರಿ, 3 ಸಾವಿರ ಎಕರೆ ಬೆಳೆ ಹಾನಿ

KannadaprabhaNewsNetwork | Published : Sep 9, 2024 1:39 AM

ಸಾರಾಂಶ

ನೀರಾವರಿ ಕಾಲುವೆ 14ನೇ ಹಂಚಿಕೆಯ ಹದಲಿ-ಗಂಗಾಪುರ ಮತ್ತು ಹದಲಿ-ಮದುಗುಣಿಕಿ ಗ್ರಾಮಗಳು ಕೊನೆಯ ಭಾಗದ ಕೃಷಿಭೂಮಿ

ಎಸ್.ಜಿ. ತೆಗ್ಗಿನಮನಿ ನರಗುಂದ

ಬೆಣ್ಣೆಹಳ್ಳದ ಹದಲಿ-ಗಂಗಾಪುರ ಮತ್ತು ಹದಲಿ-ಮದುಗುಣಿಕಿ ಏತ ನೀರಾವರಿ ಯೋಜನೆಯ ಎರಡು ಜಾಕ್‌ವೆಲ್‌ಗಳಲ್ಲಿನ 11 ಕೆವಿ ವಿದ್ಯುತ್ ಸ್ಥಾವರದ ಪರಿವರ್ತಕದ ತಾಮ್ರದ ವೈಂಡಿಂಗ್‌ ತಂತಿಗಳು ಕಳ್ಳತನವಾಗಿದ್ದು, ಇಲ್ಲಿಯವರೆಗೂ ಪರಿವರ್ತಕ ದುರಸ್ತಿಯಾಗಿಲ್ಲ. ಪರಿಣಾಮ ಮೂರು ಸಾವಿರ ಎಕರೆಗಳಷ್ಟು ಬೆಳೆಗಳಿಗೆ ನೀರಿಲ್ಲದಂತಾಗಿದೆ.

ತಾಲೂಕಿನ ಕಟ್ಟಕಡೆಯ ಕೃಷಿಭೂಮಿಗಳಿಗೆ ನೀರು ಒದಗಿಸುವುದು ಈ ಏತ ನೀರಾವರಿಯ ಮುಖ್ಯ ಉದ್ದೇಶ. ಆದರೆ ₹ 3 ಲಕ್ಷ ಮೌಲ್ಯದ ವೈಂಡಿಂಗ್ ವೈರ್‌ ಜೂ. 14 ಮತ್ತು ಜೂ. 29ರಂದು ಕಳ್ಳತನವಾಗಿದೆ. ಎರಡು ಜಾಕ್‌ವೆಲ್‌ಗಳು ಎರಡು ತಿಂಗಳಿಂದ ಬಂದ್‌ ಆಗಿದೆ. ಈ ಏತ ನೀರಾವರಿ ಅವಲಂಬಿಸಿದ ಕೆಳಭಾಗದ ಭೂಮಿಯ ಬೆಳೆಗಳು ನೀರಿಗಾಗಿ ಕಾಯುತ್ತಿವೆ.

ತಾಲೂಕಿನಲ್ಲಿ ಮಲಪ್ರಭಾ ನದಿ ಹಾಗೂ ಬೆಣ್ಣೆ ಹಳ್ಳಕ್ಕೆ ಒಟ್ಟು ಏಳು ಏತ ನೀರಾವರಿ ಯೋಜನೆ ಇದೆ. ಈ ಏತ ನೀರಾವರಿ ವ್ಯಾಪ್ತಿಯಲ್ಲಿನ ಬೆಳೆಗಳಿಗೆ ನೀರು ಹಾಯಿಸಬೇಕೆಂದರೆ ಜಾಕ್‌ವೆಲ್ ಮೂಲಕ ಕಾಲುವೆ ಕೆಳಭಾಗದ ಭೂಮಿಗಳಿಗೆ ನೀರನ್ನು ಹಾಯಿಸಬೇಕು.

ವೈರ್‌ ಕಳ್ಳತನ: ನೀರಾವರಿ ಕಾಲುವೆ 14ನೇ ಹಂಚಿಕೆಯ ಹದಲಿ-ಗಂಗಾಪುರ ಮತ್ತು ಹದಲಿ-ಮದುಗುಣಿಕಿ ಗ್ರಾಮಗಳು ಕೊನೆಯ ಭಾಗದ ಕೃಷಿಭೂಮಿ. ಈ ಗ್ರಾಮದ ಕೆಲವು ರೈತರ ಭೂಮಿಗೆ ಏತ ನೀರಾವರಿ ಜಾಕ್‌ವೆಲ್‌ನಿಂದ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಈಗ ಸಾಧ್ಯವಾಗುತ್ತಿಲ್ಲ.

ಪ್ರಕರಣ ದಾಖಲು:ನೀರು ಎತ್ತುವ ಯಂತ್ರದ ವೈರ್ ಕಳ್ಳತನದ ಬಗ್ಗೆ ನೀರಾವರಿ ಇಲಾಖಾಧಿಕಾರಿಗಳು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜಾಕ್‌ವೆಲ್‌ಗಳು ಬಂದಾಗಿರುವ ಪರಿಣಾಮ ಸಾವಿರಾರು ಎಕರೆ ಭೂಮಿಗೆ ನೀರಿಲ್ಲದೇ ಕೃಷಿ ಚಟುವಟಿಕೆಗೆ ಬಾರಿ ಹೊಡೆತ ಬಿದ್ದಿದೆ. ಅಲ್ಪಸ್ವಲ್ಪ ಮಳೆಯಿಂದ ಭೂಮಿ ಮೇಲ್ಭಾಗದಲ್ಲಿ ಮಾತ್ರ ಹಸಿ ಇದೆ. ಮೇಲ್ಮಟ್ಟದ ತೇವಾಂಶದಲ್ಲಿಯೇ ಗೋವಿನಜೋಳ, ಬಿಟಿ ಹತ್ತಿ, ಸೂರ್ಯಕಾಂತಿ, ಇತರ ಬೆಳೆಗಳನ್ನು ರೈತರು ಬೆಳೆದಿದ್ದಾರೆ. ಸದ್ಯ ಮಳೆ ಇಲ್ಲದೆ, ಏತ ನೀರಾವರಿಯ ನೀರೂ ಸಿಗದೆ ಬೆಳೆಗಳು ಬಾಡಿವೆ.

ಜಲಾಶಯ ಭರ್ತಿಯಾದರೂ ನೀರಲ್ಲ:

ಮಲಪ್ರಭಾ ಜಲಾಶಯ ಸಂಪೂರ್ಣ ಭರ್ತಿಯಾದ ಆನಂತರ ಹೆಚ್ಚುವರಿ ನೀರು ಕಾಲುವೆಗೆ ಬರುತ್ತಿದೆ. ಬಿಟಿ ಹತ್ತಿ, ಗೋವಿನ ಜೋಳ ಮತ್ತು ಇತರೆ ಬೆಳೆ ಹಾಕಿದ ಮೇಲ್ಭಾಗದ ರೈತರು ಈಗಾಗಲೇ ನೀರನ್ನು ಹಾಯಿಸುತ್ತಿದ್ದಾರೆ. ಕೆಳಭಾಗದ ಏತ ನೀರಾವರಿ ಅವಲಂಬಿಸಿದ ರೈತರು ಬೆಳೆಗಳಿಗೆ ಏತ ನೀರಾವರಿ ಮೂಲಕವೇ ನೀರನ್ನು ಹಾಯಿಸಬೇಕಾಗಿದೆ. ಆದರೆ ಟ್ರಾನ್ಸ್‌ಫಾರ್ಮರ್‌ ರಿಪೇರಿಯಾಗಲು ಎರಡ್ಮೂರು ತಿಂಗಳು ಬೇಕಾಗುತ್ತದೆ ಎಂದು ಅಧಿಕಾರಗಳು ಹೇಳಿದ್ದಾರೆ.

ಹದಲಿ-ಮದುಗುಣಿಕಿ ಜಾಕ್‌ವೆಲ್‌ನ ಟ್ರಾನ್ಸಫಾರ್ಮರ್‌ ರಿಪೇರಿಗೆ ₹ 20 ಲಕ್ಷ ಮತ್ತು ಹದಲಿ-ಗಂಗಾಪುರ ಜಾಕ್‌ವೆಲ್‌ ಟ್ರಾನ್ಸಫಾರ್ಮರ್‌ ರಿಪೇರಿಗೆ ₹ 24 ಲಕ್ಷ ಖರ್ಚಾಗುತ್ತದೆ. ಟ್ರಾನ್ಸ್‌ಫಾರ್ಮರ್‌ ದುರಸ್ತಿಗಾಗಿ ಎಸ್ಟಿಮೇಟ್ ಸಿದ್ಧಗೊಳಿಸಲಾಗಿದೆ. ಎಸ್ಟಿಮೇಟ್ ಮಂಜೂರಾದ ಆನಂತರ ಟೆಂಡರ ಕರೆಯಬೇಕಾಗುತ್ತದೆ. ಆನಂತರ ಟ್ರಾನ್ಸ್‌ಫಾರ್ಮರ್‌ ರಿಪೇರಿ ಕಾರ್ಯ ಪ್ರಾರಂಭಗೊಳ್ಳಲಿದೆ ಎಂದು ತಾಲೂಕು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಂ.ಎಸ್. ಓಲೇಕಾರ ತಿಳಿಸಿದ್ದಾರೆ.ಜಾಕ್‌ವೆಲ್ ನೀರನ್ನೇ ಅವಲಂಬಿಸಿದ ಮೂರು ಸಾವಿರ ಎಕರೆಗಳಷ್ಟು ಭೂಮಿಯಲ್ಲಿನ ಬೆಳೆಗಳು ನೀರಿಲ್ಲದೇ ನಾಶವಾಗುವ ಸಂಭವವಿದೆ. ಮೇಲ್ಮೈ ಹಸಿ ಮಾತ್ರ ಆಗಿದೆ. ನೀರಾವರಿ ಅಧಿಕಾರಿಗಳು ಜಾಕ್‌ವೆಲ್‌ನಲ್ಲಿ ಪರ್ಯಾಯ ವ್ಯವಸ್ಥೆ ಮಾಡಿ, ಕೃಷಿಗೆ ನೀರನ್ನು ಒದಗಿಸುವ ಕೆಲಸ ಮಾಡಬೇಕು. ವಿಳಂಬವಾದರೆ ರೈತರ ಶಾಪಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಭಾರತೀಯ ಕಿಸಾನ್‌ ಸಂಘದ ಜಿಲ್ಲಾ ಮುಖಂಡ ಎಸ್.ಎಸ್. ಪಾಟೀಲ ಹೇಳಿದರು.

Share this article