ಏಪ್ರಿಲ್‌ ಅಂತ್ಯಕ್ಕೆ 3ಸಾವಿರ ಲೈನ್‌ಮೆನ್‌ ನೇಮಕ: ಇಂಧನ ಸಚಿವ ಕೆ.ಜೆ ಜಾರ್ಜ್‌

KannadaprabhaNewsNetwork |  
Published : Jan 24, 2025, 12:45 AM IST
ಚಿತ್ರ 23ಬಿಡಿಆರ್8ಬೀದರ್‌ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಗುರುವಾರ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸಚಿವ ಕೆ.ಜೆ ಜಾರ್ಜ್‌ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಸಧ್ಯ ದಿನಕ್ಕೆ 16ರಿಂದ 17 ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಬೇಡಿಕೆಯಿದೆ. ಈ ವರ್ಷ ಯಾವುದೇ ಲೋಡ್‌ ಶೆಡ್ಡಿಂಗ್‌ ಮಾಡುವುದಿಲ್ಲ. ಬೇಸಿಗೆಯಲ್ಲಿ ಬೇಡಿಕೆ ಹೆಚ್ಚಾದರೆ ವಿದ್ಯುತ್‌ ಖರೀದಿಗೂ ಸಹ ಸಿದ್ಧವಾಗಿದ್ದೇವೆ ಎಂದು ಇಂದನ ಸಚಿವ ಜಾರ್ಜ್‌ ಹೇಳಿದರು.

ಕನ್ನಡಪ್ರಭ ವಾರ್ತೆ, ಬೀದರ್‌

ರಾಜ್ಯದಾದ್ಯಂತ ಲೈನ್‌ಮೆನ್‌ಗಳ ಕೊರತೆ ನೀಗಿಸಲು ಇದೇ ಏಪ್ರಿಲ್ ಅಂತ್ಯದೊಳಗೆ 3 ಸಾವಿರ ಲೈನ್‌ಮೆನ್‌ಗಳನ್ನು ನೇಮಕ ಮಾಡಲಾಗುವುದು ಎಂದು ಇಂಧನ ಸಚಿವ ಕೆ.ಜೆ ಜಾರ್ಜ್‌ ತಿಳಿಸಿದರು.ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಗುರುವಾರ ಜರುಗಿದ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದಲ್ಲಿ ಸಧ್ಯ ದಿನಕ್ಕೆ 16ರಿಂದ 17 ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಬೇಡಿಕೆಯಿದೆ. ಈ ವರ್ಷ ಯಾವುದೇ ಲೋಡ್‌ ಶೆಡ್ಡಿಂಗ್‌ ಮಾಡುವುದಿಲ್ಲ. ಬೇಸಿಗೆಯಲ್ಲಿ ಬೇಡಿಕೆ ಹೆಚ್ಚಾದರೆ ವಿದ್ಯುತ್‌ ಖರೀದಿಗೂ ಸಹ ಸಿದ್ಧವಾಗಿದ್ದೇವೆ ಎಂದರು.ಅಕ್ರಮ ಸಕ್ರಮ ಸಮಸ್ಯೆಯನ್ನು ಸಹ ಶೀಘ್ರವೇ ಪರಿಹರಿಸಲಾಗುವುದೆಂದ ಅವರು ಬೀದರ್‌ ಜಿಲ್ಲೆಯಲ್ಲಿ ಒಟ್ಟು 1480 ಪ್ರಕರಣಗಳಿದ್ದು, ಸಚಿವ ಸಂಪುಟದಲ್ಲಿ ಈ ಸಮಸ್ಯೆ ಚರ್ಚಿಸಲಾಗುವುದೆಂದು ಸಚಿವರು ತಿಳಿಸಿದರು.ರೈತರ ಟ್ರಾನ್ಸಫಾರ್ಮರ್‌ ದುರುಸ್ತಿ, ಸಾಗಾಟ, ವಿದ್ಯುತ್‌ ತಂತಿ / ಕಂಬ ದುರಸ್ತಿ ಸಂಪರ್ಕ ಸೇರಿದಂತೆ ವಿವಿಧ ವಿದ್ಯುತ್‌ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಸಮಸ್ಯೆ ಪರಿಹರಿಸಬೇಕೆಂದು ಜೆಸ್ಕಾಂ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಕಳೆದ ವರ್ಷ ಬರಗಾಲವಿದ್ದರೂ ಬೇಸಿಗೆಯಲ್ಲಿ ಸಹ ಯಾವುದೇ ರೀತಿಯ ತೊಂದರೆಯಾಗದಂತೆ ಸಮರ್ಪಕವಾಗಿ ವಿದ್ಯುತ್‌ ಪೂರೈಸಲಾಗಿದ್ದು, ಈ ಬಾರಿ ಸಹ ಗ್ರಾಹಕರಿಗೆ ವಿದ್ಯುತ್‌ ಪೂರೈಸಲು ಇಲಾಖೆಯು ಸನ್ನದ್ಧವಾಗಿದೆ. ವಿದ್ಯುತ್‌ ಸಂಬಂಧಿಸಿದಂತೆ ಕೆಲ ತಾಂತ್ರಿಕ ದೋಷಗಳು ಆದಾಗ ಕಂಡು ಬರುತ್ತಿರು ವುದರಿಂದ ಕೆಲವೊಂದಿಷ್ಟು ಸಮಸ್ಯೆಗಳ ನಿವಾರಣೆಗೆ ಸಮಯ ಬೇಕಾಗುತ್ತದೆ. ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳನ್ನು ಭೇಟಿಯಾಗಿ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸಿಕೊಳ್ಳಬೇಕೆಂದರು.ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಜಿಲ್ಲೆಯಲ್ಲಿ ವಿದ್ಯುತ್‌ ಅವಘಡದಲ್ಲಿ ಮರಣ ಹೊಂದಿದ 9 ಜನರ ಕುಟುಂಬಕ್ಕೆ ಈವರೆಗೂ ಪರಿಹಾರ ನೀಡಿದ ಕುರಿತು ಸಚಿವರಾದ ಕೆ.ಜೆ ಜಾರ್ಜ್‌ ಸಮ್ಮುಖದಲ್ಲಿಯೇ ಅಧಿಕಾರಿಗಳನ್ನು ಸಚಿವ ಈಶ್ವರ ಖಂಡ್ರೆ ಪ್ರಶ್ನಿಸಿದಾಗ ಮೂರು ದಿನದೊಳಗಾಗಿ ಪರಿಹಾರ ತಲುಪಿಸುವಂತೆ ಕೆ.ಜೆ.ಜಾರ್ಜ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲೆಯಲ್ಲಿ 13 ಉಪ ಕೇಂದ್ರಗಳ ಸ್ಥಾಪನೆಗೆ ಜಾಗದ ಸಮಸ್ಯೆಗಳಿದ್ದಲ್ಲಿ ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅಧಿಕಾರಿಗಳು ತಕ್ಷಣ ಕಾರ್ಯ ಪ್ರವೃತ್ತರಾಗುವಂತೆ ಈಶ್ವರ ಖಂಡ್ರೆ ಸೂಚಿಸಿದರು.ಅಪಾಯಕಾರಿ ವಿದ್ಯುತ್‌ ತಂತಿ ಹಾಗೂ ಕಂಬಗಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಹಲವಾರು ತಿಂಗಳ ಹಿಂದೆ ಹೇಳಲಾಗಿದೆ. ಅಧಿಕಾರಿಗಳು ನಿರ್ಲಕ್ಷ ತೋರದೆ ಒಟ್ಟು ಅಪಾಯಕಾರಿ ಸ್ಥಿತಿಗತಿ ವರದಿ ನೀಡುವಂತೆ ಹಾಗೂ ತುರ್ತು ಅಗತ್ಯವಿದ್ದಲ್ಲಿ ತಕ್ಷಣವೇ ಕಂಬ/ತಂತಿ ಸರಿಪಡಿಸುವಂತೆ ಸೂಚಿಸಿದರು.ಅನಧಿಕೃತ ಬಡಾವಣೆಗಳಿಗೂ ವಿದ್ಯುತ್‌:

ಗಡಿ ಭಾಗದಲ್ಲಿ ಹಾಗೂ ಇತರೆಡೆ ಅನಧಿಕೃತ ಬಡಾವಣೆಗಳು ನಿರ್ಮಾಣಗೊಂಡಿವೆ. ಅವರಿಗೂ ಸಹ ವಿದ್ಯುತ್‌ ಸಂಪರ್ಕ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.ಸಂಸದರಾದ ಸಾಗರ ಈಶ್ವರ ಖಂಡ್ರೆ ಮಾತನಾಡಿ, ಭಾಲ್ಕಿ ಸುತ್ತಲಿನ ಕೆಲ ಗ್ರಾಮಸ್ಥರು ಅಹವಾಲು ನೀಡಿದ್ದು, ಟೀಸಿ ಬದಲಾವಣೆಗೆ ಹಾಗೂ ವಾಹನ ಸಾಗಾಟಕ್ಕೆ ಅಧಿಕಾರಿಗಳು ತೀರ ವಿಳಂಬ ಅನುಸರಿಸುತ್ತಿದ್ದು, ಗ್ರಾಮಸ್ಥರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಸ್ಪಂದಿಸಲಿ ಎಂದರು.ಈ ಸಂದರ್ಭದಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗರ, ಹುಮನಾಬಾದ್‌ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್‌, ವಿಧಾನ ಪರಿಷತ್‌ ಸದಸ್ಯ ಡಾ. ಚಂದ್ರಶೇಖರ ಪಾಟೀಲ್‌, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್‌, ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪಂಕಜಕುಮಾರ ಪಾಂಡೆ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಿಂಗಣ್ಣನವರ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ, ಕೆಪಿಟಿಸಿಎಲ್‌ ಮುಖ್ಯ ಅಭಿಯಂತರ ಪ್ರಕಾಶ ಬಿ., ಜೆಸ್ಕಾಂ ಮುಖ್ಯ ಅಭಿಯಂತತರ ವೆಂಕಟೇಶ ಅಳ್ಳೆ, ಜೆಸ್ಕಾಂ ಅಧೀಕ್ಷಕ ಅಭಿಯಂತರ ವೀರಭದ್ರ, ಕೆಪಿಟಿಸಿಎಲ್‌ ಚಂದ್ರಕಾಂತ ಪಾಟೀಲ್‌ ಸೇರಿದಂತೆ ಇಲಾಖೆಯ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ