ಕನ್ನಡಪ್ರಭ ವಾರ್ತೆ ಕಾಗವಾಡ
ಸಾರ್ವಜನಿಕರ ಆರೋಗ್ಯ ಮತ್ತು ಅನುಕೂಲತೆ, ಕುಡಿಯುವ ನೀರು, ರಸ್ತೆ, ಚರಂಡಿ, ಉದ್ಯಾನ ಹಾಗೂ ಅಭಿವೃದ್ಧಿ ಕಾಮಗಾರಿಗಳು ಹಾಗೂ ಇತರೆ ವೆಚ್ಚಗಳಿಗಾಗಿ ₹3.84 ಕೋಟಿ ಖರ್ಚು ಮಾಡಲು ಅಂದಾಜಿಸಲಾಗಿದೆ ಎಂದು ಐನಾಪುರ ಪಪಂ ಅಧ್ಯಕ್ಷೆ ಸರೋಜನಿ ಸುರೇಶ ಗಾಣಿಗೇರ ತಿಳಿಸಿದರು.ಫೆ.28ರಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2025-26ನೇ ಸಾಲಿನ ಐನಾಪುರ ಪಪಂ ಆಯವ್ಯಯದಲ್ಲಿ ₹3.84 ಕೋಟಿ ಬಜೆಟ್ ಮಂಡಿಸಿದ ಅವರು, ರಸ್ತೆ, ಒಳಚರಂಡಿ, ಬೀದಿದೀಪ, ಸ್ವಚ್ಛತೆ, ಆಸ್ತಿ, ಕುಡಿಯುವ ನೀರು, ಉದ್ದಿಮೆ ಪರವಾನಗಿ, ಆಸ್ತಿ ವರ್ಗಾವಣೆ, ಮಳಿಗೆಗಳ ಬಾಡಿಗೆ, ಭೂ ಪರಿವರ್ತನೆಗಳ ಶುಲ್ಕ ಹಾಗೂ ಸರಕಾರದಿಂದ ಅಭಿವೃದ್ಧಿ ಕೆಲಸಗಳಿಗೆ ಬಿಡುಗಡೆಯಾದ ಇತರೆ ಅನುದಾನಗಳು ಮುಂತಾದವುಗಳಿಂದ ಆದಾಯ ಆದಾಯ ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ಮುಖ್ಯಾಧಿಕಾರಿ ಮಹಾಂತೇಶ ಕವಲಾಪೂರ ಮಾತನಾಡಿ, ರಸ್ತೆ ಹಾಗೂ ಫುಟಪಾತ್ ನಿರ್ಮಾಣಕ್ಕೆ ₹65 ಲಕ್ಷ, ಉದ್ಯಾನ ಅಭಿವೃದ್ಧಿ ₹5 ಲಕ್ಷ, ವಾಣಿಜ್ಯ ಮಳಿಗೆ, ರಸ್ತೆ, ಚರಂಡಿ ನಿರ್ಮಾಣಕ್ಕೆ ₹15.5 ಲಕ್ಷ, ವಾಹನ ಖರೀದಿ ₹5 ಲಕ್ಷ, ಕಚೇರಿ ಪೀಠೋಪಕರಣ ಖರೀದಿಗೆ ₹8 ಲಕ್ಷ, ಚರಂಡಿ ನಿರ್ಮಾಣಕ್ಕೆ ₹58,50 ಲಕ್ಷ, ಬೀದಿದೀಪಕ್ಕಾಗಿ ₹4,50 ಲಕ್ಷ, ಸಾರ್ವಜನಿಕ ಶೌಚಾಲಯಯಕ್ಕಾಗಿ ₹3 ಲಕ್ಷ, ಘನತ್ಯಾಜ ವಸ್ತು ಹಾಗೂ ನಿರ್ವಹಣೆಗಾಗಿ ₹37.30 ಲಕ್ಷ, ಯಂತ್ರೋಪಕರಣ ಹಾಗೂ ವಾಹಾನಗಳು ₹45 ಲಕ್ಷ, ನೀರು ಸರಬರಾಜು ಮತ್ತು ಇತರೆಗಾಗಿ ₹11 ಲಕ್ಷ, ನೀರು ಸರಬರಾಜು ಮೂಲಗಳು ಮತ್ತು ವಿತರಣೆಗಾಗಿ ₹1.60 ಲಕ್ಷ, ಇತರೆ ಸ್ಥಿರಾಸ್ತಿಗಳು ₹21 ಲಕ್ಷ, ಕುಡಿಯುವ ನೀರಿನ ಅನುದಾನ ₹15 ಲಕ್ಷ, ಎಸ್ಎಫ್‌ಸಿ ಮುಕ್ತನಿಧಿ ₹1.38 ಲಕ್ಷ ಹೀಗೆ ಒಟ್ಟು ₹3.84 ಕೋಟಿ ಕಲ್ಪಿಸಿದ್ದು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡಿ ಬಜೆಟ್ ತಯಾರಿಸಲಾಗಿದೆ ಎಂದು ಸಭೆಗೆ ವಿವರಿಸಿದರು.ಸಭೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಸಮ್ಮತಿ ಸೂಚಿಸಿ 2025-26ನೇ ಸಾಲಿನ ವಾರ್ಷಿಕ ಮುಂಗಡ ಬಜೆಟೆಗೆ ಅನುಮೋದನೆ ನೀಡಿ ಠರಾವು ಪಾಸು ಮಾಡಿದರು. ಈ ವೇಳೆ ಪಪಂ ಎಂಜನಿಯರ್ ವ್ಹಿ.ಎನ್.ನಾಗನಕೆರಿ ಪಟ್ಟಣದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿ ಕುರಿತು ಸದಸ್ಯರಿಗೆ ಮಾಗಹಿತಿ ನೀಡಿದರು. ಆಗ ಸದಸ್ಯರು ಕೆಲ ಕಾಮಗಾರಿಗಳು ಮಂದಗತಿಯಿಂದ ಸಾಗಿದ್ದು, ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಸದಸ್ಯ ರಾಜೇಂದ್ರ ಪೋತದಾರ ಮಾತನಾಡಿ, ಸತತವಾಗಿ 3 ಪಪಂ ಸಭೆಗೆ ಗೈರಾದ ಸದಸ್ಯರ ಸದಸ್ಯತ್ವ ರದ್ದುಗೊಳಿಸಲು ಠರಾವು ಪಾಸುಮಾಡುವಂತೆ ಆಗ್ರಹಿಸಿದರು. ಅರುಣ ಗಾಣಿಗೇರ ಮಾತನಾಡಿ, ಠರಾವು ಬರೆಯುವ ಅವಶ್ಯಕತೆ ಇಲ್ಲ, ಸತತ 3 ಸಭೆಗೆ ಗೈರಾದರೆ ಕಾನೂನಿನ ಪ್ರಕಾರ ಸದಸ್ಯತ್ವ ರದ್ದಾಗುತ್ತದೆ ಎಂದರು.ಈ ವೇಳೆ ಪಪಂಗೆ ನೂತನವಾಗಿ ನಾಮ ನಿರ್ದೇಶನಗೊಂಡ ದಾದಾ ಜಂತೆನ್ನವರ, ಸಂಜಯ ಕುಸನಾಳೆ, ಇಸಾಕ ರಾವತ್‌ರನ್ನು ಸನ್ಮಾನಿಸಲಾಯಿತು. ಪಪಂ ಉಪಾದ್ಯಕ್ಷೆ ರತ್ನವ್ವ ಮಾದರ, ಸದಸ್ಯರಾದ ಪ್ರವೀಣ ಗಾಣಿಗೇರ, ಸಂಜಯ ಬಿರಡಿ, ಕುಮಾರ ಜಯಕರ, ರಾಜೇಂದ್ರ ಪೋತದಾರ, ರಾಜು ಹರಳೆ, ರೇಖಾ ಪಾರಶೆಟ್ಟಿ, ಜಯಶ್ರೀ ಹರಳೆ,ಕಸ್ತೂರಿ ಮಡಿವಾಳ, ಪ್ರಕಾಶ ನಿಡೋಣಿ, ಲಕ್ಕವ್ವ ಸುರೇಶ ಅಡಿಸೇರಿ ಇತರರಿದ್ದರು.
ಐನಾಪುರ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಯೊಬ್ಬರು ತಮ್ಮ ಮನೆ, ಅಂಗಡಿ ಹಾಗೂ ನೀರಿನ ಕರ ತುಂಬಬೇಕು. ಕಸವನ್ನು ಎಲ್ಲೆಡೆ ಬೀಸಾಡದೆ ಪಪಂನ ಕಸದ ಗಾಡಿಯಲ್ಲಿಯೇ ಹಾಕಿ ಸ್ವಚ್ಛ ಹಾಗೂ ಸುಂದರ ನಗರವನ್ನಾಗಿಸಲು ಸಹಕರಿಸಬೇಕು. ಮಹಾಂತೇಶ ಕವಲಾಪೂರ, ಮುಖ್ಯಾಧಿಕಾರಿ ಪಪಂ ಐನಾಪುರ