ಮಳೆಗೆ ಮತ್ತೆ 3 ಬಲಿ; ಅಪಾರ ಬೆಳೆ ಹಾನಿ

KannadaprabhaNewsNetwork | Published : May 13, 2024 12:00 AM

ಸಾರಾಂಶ

ಭಾನುವಾರ ಕೂಡ 11ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಸಿಡಿಲಬ್ಬರದ ಮಳೆಗೆ ಮತ್ತೆ ಮೂವರು ಮೃತಪಟ್ಟಿದ್ದಾರೆ. ಕಾರಿನ ಮೇಲೆ ಮರ ಬಿದ್ದು ಓರ್ವ, ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಕೃತ್ತಿಕಾ ಮಳೆಯ ಅಬ್ಬರ ಮುಂದುವರಿದಿದೆ. ಭಾನುವಾರ ಕೂಡ 11ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಸಿಡಿಲಬ್ಬರದ ಮಳೆಗೆ ಮತ್ತೆ ಮೂವರು ಮೃತಪಟ್ಟಿದ್ದಾರೆ. ಕಾರಿನ ಮೇಲೆ ಮರ ಬಿದ್ದು ಓರ್ವ, ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಕೋಣನಗುಡ್ಡದಲ್ಲಿ ಮರವೊಂದು ಕಾರಿನ ಮೇಲೆ ಉರುಳಿ ಬಿದ್ದು, ಕಾರು ಹತ್ತುತ್ತಿದ್ದ ಸುನೀತ (48) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನ ಒಳಗಿದ್ದ ಮತ್ತೆ ನಾಲ್ವರಿಗೆ ಗಾಯಗಳಾಗಿವೆ. ಸಮೀಪದ ಕೋಣನಗುಡ್ಡದ ಮನೆ ದೇವರು ಚೌಡೇಶ್ವರಿ ದೇವಿ ಪೂಜೆಗೆ ಇವರು ಕುಟುಂಬ ಸಮೇತ ಆಗಮಿಸಿದ್ದರು.

ಬಾಗಲಕೋಟೆ ತಾಲೂಕಿನ ಹಳ್ಳೂರು ಗ್ರಾಮದಲ್ಲಿ ಸಿಡಿಲು ಬಡಿದು ಬೈಕ್ ಸವಾರ ಪ್ರಕಾಶ್‌ ವಗ್ಗರ್‌ (21) ಎಂಬುವರು ಮೃತಪಟ್ಟಿದ್ದಾರೆ. ಮತ್ತೊಬ್ಬ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಅಡವಿ ಮಲ್ಲಾಪುರದಲ್ಲಿ ಸಿಡಿಲು ಬಡಿದು ಚೌಡಪ್ಪ (33) ಎಂಬುವರು ಮೃತಪಟ್ಟಿದ್ದಾರೆ. ಕಣದಲ್ಲಿ ಮೇವಿನ ಬಣವೆಗೆ ಹೊದಿಕೆ ಹಾಕಲು ಹೋದ ವೇಳೆ ಸಿಡಿಲು ಬಡಿಯಿತು. ಇದೇ ವೇಳೆ, ಹೊಸಪೇಟೆ ತಾಲೂಕಿನ ವಿವಿಧೆಡೆ ಅಂದಾಜು 230ಕ್ಕೂ ಹೆಚ್ಚು ಎಕರೆಯಲ್ಲಿ ಬೆಳೆದಿದ್ದ ಬಾಳೆ ಹಾಗೂ ಭತ್ತ ನೆಲಕಚ್ಚಿದೆ. ಬೆಂಗಳೂರಿನ ಬೊಮ್ಮನಹಳ್ಳಿ ಹಾಗೂ ಆರ್‌ ಆರ್‌ ನಗರ ಭಾಗದಲ್ಲಿ ಸಂಜೆ ಸುರಿದ ಧಾರಾಕಾರ ಮಳೆಗೆ 20ಕ್ಕೂ ಹೆಚ್ಚು ಮರಗಳು ನೆಲಕ್ಕೆ ಉರುಳಿವೆ. ಬೆಳಗಾವಿಯಲ್ಲಿ ಭಾನುವಾರವೂ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ಬೈಲಹೊಂಗಲದಲ್ಲಿ ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಹೊತ್ತಿ ಉರಿದಿದೆ. ಚಿಕ್ಕೋಡಿ, ಹುಕ್ಕೇರಿ, ನಿಪ್ಪಾಣಿ ತಾಲೂಕಿನ ಹಲವೆಡೆ ವಿದ್ಯುತ್‌ ಕಂಬಗಳು ಧಾರಾಶಾಹಿಯಾಗಿವೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಲವೆಡೆ 100ಕ್ಕೂ ಅಧಿಕ ಲಿಂಬೆ ಗಿಡಗಳು ನಾಶಗೊಂಡಿವೆ.

ಚಾಮರಾಜನಗರ ಜಿಲ್ಲೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದಂಚಿನ ಕಳ್ಳೀಪುರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಳೆಗೆ ಲಕ್ಷಾಂತರ ರು. ಬೆಲೆಬಾಳುವ ಈರುಳ್ಳಿ, ಬೆಳ್ಳುಳ್ಳಿ ಬೆಳೆಗಳು ನಾಶವಾಗಿವೆ. ಬೀದರ್‌ ಜಿಲ್ಲೆ ಔರಾದ್ ತಾಲೂಕಿನ ವಿವಿಧೆಡೆ ಭಾನುವಾರ ಮಧ್ಯಾಹ್ನ ಉತ್ತಮ ಮಳೆಯಾಗಿದ್ದು, 30ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನಲ್ಲಿ 2 ಮನೆಗಳಿಗೆ ಹಾನಿ ಸಂಭವಿಸಿದೆ. ಕೋಲಾರ ತಾಲೂಕಿನ ಜಂಗಂಬಸಾಪುರದಲ್ಲಿ ಮೂರು ಎಕರೆಯಲ್ಲಿ ಬೆಳೆದ ಬಾಳೆ ಬೆಳೆ ಹಾನಿಯಾಗಿದ್ದು, ಲಕ್ಷಾಂತರ ರೂ. ಹಾನಿ ಸಂಭವಿಸಿದೆ.

Share this article