ಕ್ವಿಂಟಲ್ ಭತ್ತಕ್ಕೆ 3 ಸಾವಿರ ರು. ಬೆಂಬಲ ಬೆಲೆ ನೀಡುವಂತೆ ಭರತ್ ರಾಜ್ ಒತ್ತಾಯ

KannadaprabhaNewsNetwork |  
Published : Dec 29, 2024, 01:17 AM IST
28ಕೆಎಂಎನ್ ಡಿ14 | Kannada Prabha

ಸಾರಾಂಶ

ಭತ್ತ ಖರೀದಿ ಏಜೆನ್ಸಿಯನ್ನು ರಾಜ್ಯ ಸಹಕಾರ ಮಹಾ ಮಂಡಳಕ್ಕೆ ವಹಿಸಲಾಗಿದೆ. ಆದರೆ, ಅವರು ಹೇಳುವ ಪ್ರಕಾರ ಖರೀದಿಗೆ ಸಂಬಂಧಪಟ್ಟಂತೆ ಸಾಪ್ಟ್ ವೇರ್ ಇನ್ನೂ ತಯಾರಿಸಿಲ್ಲ, ಸಾಗಾಣಿಕೆಗೆ ಟೆಂಡರ್ ಆಗಿಲ್ಲ, ಹಮಾಲಿಗಳು ನಿಗದಿಯಾಗಿಲ್ಲ ಎನ್ನುತ್ತಾರೆ. ಇವುಗಳ ಜೊತೆಗೆ ಭತ್ತ ಖರೀದಿ ಮಾಡಿದ 15 ದಿನದ ಒಳಗಡೆ ಹಣ ಪಾವತಿ ಮಾಡಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಭತ್ತ ಖರೀದಿ ಕೇಂದ್ರ ತೆರೆಯುವುದು ಸೇರಿದಂತೆ ಸರ್ಕಾರ 700 ರು. ಪ್ರೋತ್ಸಾಹ ಧನನೀಡಿ ಕ್ವಿಂಟಲ್ ಭತ್ತಕ್ಕೆ 3 ಸಾವಿರ ರು. ಬೆಂಬಲ ಬೆಲೆ ನೀಡುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್. ಭರತ್‌ರಾಜ್ ಒತ್ತಾಯಿಸಿದರು.

ಪಟ್ಟಣದ ಪ್ರಾಂತ ರೈತ ಸಂಘದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭತ್ತ ಕಟಾವು ಕಾರ್ಯವು ಮುಕ್ತಾಯದ ಹಂತಕ್ಕೆ ಬಂದಿದ್ದರೂ ಕೂಡ ಭತ್ತ ಖರೀದಿ ಕೇಂದ್ರ ಆರಂಭಿಸಿಲ್ಲ. ಈಗಾಗಲೇ ದಲ್ಲಾಳಿಗಳು ಹಳ್ಳಿಗಳಲ್ಲಿ ಲಗ್ಗೆ ಇಟ್ಟು ಭತ್ತವನ್ನು ಖರೀದಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನವೆಂಬರ್ ತಿಂಗಳಲ್ಲೆ ಭತ್ತ ಖರೀದಿ ಕೇಂದ್ರ ತೆರೆಯಬೇಕಾಗಿತ್ತು. ಆದರೆ, ಜನವರಿಯಾದರೂ ಭತ್ತ ಖರೀದಿ ಕೇಂದ್ರ ತೆರೆದಿಲ್ಲ. ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳು ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಭತ್ತ ಖರೀದಿ ಏಜೆನ್ಸಿಯನ್ನು ರಾಜ್ಯ ಸಹಕಾರ ಮಹಾ ಮಂಡಳಕ್ಕೆ ವಹಿಸಲಾಗಿದೆ. ಆದರೆ, ಅವರು ಹೇಳುವ ಪ್ರಕಾರ ಖರೀದಿಗೆ ಸಂಬಂಧಪಟ್ಟಂತೆ ಸಾಪ್ಟ್ ವೇರ್ ಇನ್ನೂ ತಯಾರಿಸಿಲ್ಲ, ಸಾಗಾಣಿಕೆಗೆ ಟೆಂಡರ್ ಆಗಿಲ್ಲ, ಹಮಾಲಿಗಳು ನಿಗದಿಯಾಗಿಲ್ಲ ಎನ್ನುತ್ತಾರೆ. ಇವುಗಳ ಜೊತೆಗೆ ಭತ್ತ ಖರೀದಿ ಮಾಡಿದ 15 ದಿನದ ಒಳಗಡೆ ಹಣ ಪಾವತಿ ಮಾಡಬೇಕು. ಆದರೆ, ಈಗಿನ ವ್ಯವಸ್ಥೆ ನೋಡಿದರೆ ಸರ್ಕಾರ ಭತ್ತ ಬೆಳೆಗಾರರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ ಎಂದು ದೂರಿದರು.

ಮಳವಳ್ಳಿ ತಾಲೂಕಿನಲ್ಲಿ ಸುಮಾರು 23500 ಎಕರೆಯಲ್ಲಿ ಭತ್ತ ಬೆಳೆದಿದ್ದಾರೆ. ಸುಮಾರು 7 ಲಕ್ಷ ಕ್ವಿಂಟಲ್ ಭತ್ತ ಬರುವ ನಿರೀಕ್ಷೆ ಇದೆ. ಈ ಭತ್ತ ಬೆಳೆಯಲು ರೈತರು ಬಹಳ ಕಷ್ಟಕ್ಕೆ ಒಳಗಾಗಿದ್ದಾರೆ. ಅಕಾಲಿಕ ಮಳೆಯಿಂದ ಭತ್ತ ಕಟಾವು ಮಾಡಲು ಆಗುತ್ತಿಲ್ಲ. ಕೂಲಿ ಕಾರ್ಮಿಕರ ಅಭಾವ ಮತ್ತು ಕಟಾವು ಯಂತ್ರಗಳಿಗೆ ದುಬಾರಿ ಬಾಡಿಗೆ ನೀಡಬೇಕಾಗಿದೆ ಎಂದರು.

ಕಟಾವು ವಿಳಂಬವಾಗಿ ಭತ್ತ ಗದ್ದೆಯಲ್ಲಿ ಉದುರಿ ನಷ್ಟವಾಗುತ್ತಿದೆ. ಮಳೆಯಿಂದ ಹುಲ್ಲು ಸಹ ಹಾಳಾಗಿ ನಷ್ಟದ ಜೊತೆಗೆ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಲಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತ, ಕೃಷಿ ಇಲಾಖೆ ರೈತರ ನೆರವಿಗೆ ಬಾರದೆ ಬೇಜವಾಬ್ದಾರಿಯಾಗಿ ವರ್ತಿಸುತ್ತಿದೆ. ಇದರ ಬಗ್ಗೆ ತಹಸೀಲ್ದಾರ್ ಸಮೀಕ್ಷೆ ನಡೆಸಿ ನಷ್ಟದ ವಿವರವನ್ನು ಸರ್ಕಾರಕ್ಕೆ ಸಲ್ಲಿಸದೆ ನಮಗೆ ಸಂಬಂಧವೇ ಇಲ್ಲ ಎಂದು ಸುಮ್ಮನೆ ಕುಳಿತಿದ್ದಾರೆಂದು ಆರೋಪಿಸಿದರು.

ಬಹುತೇಕ ಗ್ರಾಮೀಣ ಭಾಗದಲ್ಲಿ ವಿಭಕ್ತ ಕುಟುಂಬಗಳು ಹೆಚ್ಚಾಗಿರುವುದರಿಂದ ಭತ್ತವನ್ನು ಶೇಖರಿಸಿ ಇಟ್ಟುಕೊಳ್ಳಲು ಸ್ಥಳಾವಕಾಶ ಇಲ್ಲವಾಗಿದೆ. ಕಳೆದ ವರ್ಷ ಖಾಸಗಿ ಮಾರುಕಟ್ಟೆಯಲ್ಲಿ ಭತ್ತದ ಧಾರಣೆ 3000 ದಿಂದ 3500 ರವರೆಗೆ ಇತ್ತು. ಆದರೆ, ಈಗ ಬೆಂಬಲ ಬೆಲೆಗೂ ಯಾರು ಖರೀದಿ ಮಾಡುತ್ತಿಲ್ಲ. ಹಾಗಾಗಿ ಬಿಸಿಲಿನ ಅಭಾವದಿಂದ ಒಣಗಿಸಲು ಕಷ್ಟವಾಗಿದೆ ಎಂದರು.

ಭತ್ತ ಖರೀದಿ ನಂತರ ಉಗ್ರಾಣಗಳಲ್ಲಿ ಬಿಸಿ ಗಾಳಿ ಮೂಲಕ ಭತ್ತವನ್ನು ಒಣಗಿಸಿ ರಕ್ಷಿಸುವ ಪ್ರಕ್ರಿಯೆಯನ್ನು ಖರೀದಿ ಏಜೆನ್ಸಿಗಳೇ ಮಾಡಬೇಕು. ಎಕರೆಗೆ ಮತ್ತು ರೈತನಿಗೆ ಇಷ್ಟು ಎಂಬ ಮಿತಿಯನ್ನು ರದ್ದು ಪಡಿಸಿ ರೈತರು ಬೆಳೆದು ಮಾರಲು ಇಚ್ಚುಸುವ ಎಲ್ಲ ಭತ್ತವನ್ನ ಖರೀದಿ ಮಾಡಬೇಕು. ಮಳವಳ್ಳಿ, ಹಲಗೂರು, ಕಿರಗಾವಲು ಸೇರಿದಂತೆ ಹೋಬಳಿ ಕೇಂದ್ರಗಳಲ್ಲಿ ಖರೀದಿ ಕೇಂದ್ರ ತೆರೆಯಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಕಾರ್ಯದರ್ಶಿ ಎನ್‌.ಲಿಂಗರಾಜಮೂರ್ತಿ, ಹಲಗೂರು ಹೋಬಳಿ ಅಧ್ಯಕ್ಷ ಎಂ.ಇ ಮಹಾದೇವು ಮುಖಂಡರಾದ ಹಿಪ್ಜುಲ್ಲಾ, ಸತೀಶ್‌ ಗುಳಗಟ್ಟ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ