ಸುವರ್ಣ ವಿಧಾನಸಭೆ : ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದರೆ, ಅದನ್ನು ಅಪರಾಧವೆಂದು ಪರಿಗಣಿಸಿ 1 ಲಕ್ಷ ರು. ದಂಡ ಹಾಗೂ 3 ವರ್ಷದವರೆಗೆ ಜೈಲು ಶಿಕ್ಷೆಗೆ ಗುರಿಪಡಿಸಲು ಅವಕಾಶವಿರುವ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ 2025’ಅನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಈ ವಿಧೇಯಕ ಮಂಡಿಸಿದರು. ಮುಂದಿನ ಕಲಾಪದ ದಿನಗಳಲ್ಲಿ ಈ ವಿಧೇಯಕದ ಪರ್ಯಾಲೋಚನೆ ನಡೆದು ಅಂಗೀಕಾರ ಪಡೆಯಬೇಕಿದೆ.
‘ಸಾಮಾಜಿಕ ಸುಧಾರಣೆ, ಜನ ಸಾಮಾನ್ಯರ ಕಲ್ಯಾಣದ ದೃಷ್ಟಿಯಿಂದ ಸಾಮಾಜಿಕ ಬಹಿಷ್ಕಾರ ನಿಷೇಧಿಸುವುದು ಅಗತ್ಯ. ಬಹಿಷ್ಕಾರ ಸಂವಿಧಾನ ಬಾಹಿರ ಎಂದು ಪರಿಗಣಿಸಿ ಸರ್ಕಾರ ಈ ವಿಧೇಯಕ ಜಾರಿಗೆ ಮುಂದಾಗಿದೆ. ವಿಧೇಯಕದ ಮೂಲಕ ಸಾಮಾಜಿಕ ಬಹಿಷ್ಕಾರವನ್ನು ಸಂಪೂರ್ಣ ನಿಷೇಧಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಬಹಿಷ್ಕಾರ ತೀರ್ಮಾನ ತೆಗೆದುಕೊಂಡವರು, ಈ ನಿಟ್ಟಿನಲ್ಲಿ ಸಭೆ, ಪಂಚಾಯಿತಿ, ಜಮಾವಣೆ, ಮತ, ಅಭಿಪ್ರಾಯ ಸಂಗ್ರಹ ನಡೆಸುವುದು, ಬಹಿಷ್ಕಾರಕ್ಕೆ ಪ್ರತ್ಯೇಕ್ಷ ಪರೋಕ್ಷ ಸಹಾಯ, ಒತ್ತಡ, ಪ್ರಚೋದನೆ ನೀಡುವವರನ್ನೂ ಅಪರಾಧಿಗಳೆಂದು ಪರಿಗಣಿಸಿ ಶಿಕ್ಷೆಗೆ ಗುರಿ ಮಾಡಿಸಲಾಗುತ್ತದೆ. ಅಪರಾಧಿಗಳಿಗೆ ಮೂರು ವರ್ಷಗಳವರೆಗೆ ಜೈಲು, 1 ಲಕ್ಷ ರು. ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ಇದೆ.
ಬಹಿಷ್ಕಾರಕ್ಕೆ ಒಳಗಾಗುವವರು ಪೊಲೀಸ್ ಠಾಣೆ ಅಥವಾ ನ್ಯಾಯಾಧೀಶರಿಗೆ ನೇರವಾಗಿ ದೂರು ಸಲ್ಲಿಸಬಹುದು. ಪ್ರಥಮ ದರ್ಜೆ ನ್ಯಾಯಾಧೀಶರಿಗೆ ವಿಚಾರಣೆ ಅಧಿಕಾರ ನೀಡಲಾಗಿದೆ. ನೇರವಾಗಿ ಸಲ್ಲಿಕೆಯಾದ ದೂರಿನ ತನಿಖೆ ನಡೆಸುವಂತೆ ನ್ಯಾಯಾಧೀಶರು ಆದೇಶಿಸಬಹುದು. ಪೀಡಿತರಿಗೆ ಸಹಾಯ ಒದಗಿಸಲೂ ಸೂಚಿಸಬಹುದು. ದಂಡದ ಮೊತ್ತವನ್ನು ಪೀಡಿತರಿಗೆ ಪರಿಹಾರವಾಗಿ ನೀಡಲು ನಿರ್ದೇಶನ ನೀಡಬಹುದು. ಸಾಮಾಜಿಕ ಬಹಿಷ್ಕಾರದಂತಹ ನಿರ್ಧಾರ ತೆಗೆದುಕೊಳ್ಳಲು ನಡೆಸುವ ಸಭೆಗಳ ಕುರಿತು ಮಾಹಿತಿ ಬಂದರೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ನಿಷೇಧಿಸಿ ಆದೇಶಿಸಬಹುದು. ಗ್ರೂಪ್-ಎ ಅಧಿಕಾರಿಗಳನ್ನು ಸಾಮಾಜಿಕ ಬಹಿಷ್ಕಾರ ತಡೆ ಅಧಿಕಾರಿಗಳನ್ನಾಗಿ ನಿಯೋಜಿಸಬಹುದು ಎಂಬ ಅಂಶಗಳನ್ನು ವಿಧೇಯಕ ಒಳಗೊಂಡಿದೆ.
ಗ್ರಾಮ ಅಥವಾ ಸಮುದಾಯದಿಂದ ಹೊರಹಾಕುವುದು, ಧಾರ್ಮಿಕ, ಸಾರ್ವಜನಿಕ ಸ್ಥಳಗಳ ಬಳಕೆಗೆ ನಿರ್ಬಂಧಿಸುವುದು, ಪೂಜಾ ಸ್ಥಳಗಳ ಪ್ರವೇಶಕ್ಕೆ ಅಡ್ಡಿಪಡಿಸುವುದು. ಸಾಮಾಜಿಕ-ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ತಡೆಯೊಡ್ಡುವುದು, ವ್ಯವಹಾರ ಅಥವಾ ಉದ್ಯೋಗ ತಿರಸ್ಕರಿಸುವುದು, ಸೇವೆಗಳು, ಅವಕಾಶಗಳನ್ನು ನಿರಾಕರಿಸುವುದು, ಶಾಲೆ, ಆಸ್ಪತ್ರೆ, ಸಮುದಾಯ ಭವನಗಳ ಪ್ರವೇಶ ತಡೆಯುವುದು, ಸೇವೆಗಳು, ಅವಕಾಶಗಳನ್ನು ನಿರಾಕರಿಸುವುದು, ಮದುವೆ, ಅಂತ್ಯಕ್ರಿಯೆಗಳಲ್ಲಿ ಭಾಗವಹಿಸುವುದಕ್ಕೆ ತಡೆಯೊಡ್ಡುವುದು, ಸಂಬಂಧ ಕಡಿತಗೊಳಿಸಲು ಪ್ರಚೋದನೆ ನೀಡುವುದು, ಲಿಂಗತ್ವದ ಆಧಾರ ಮೇಲೆ ಭೇದ ಮಾಡುವುದು, ಮಕ್ಕಳನ್ನು ಒಟ್ಟಿಗೆ ಆಡಲು ಅಡ್ಡಿ ಪಡಿಸುವುದು, ಬಟ್ಟೆ, ಭಾಷೆ, ಸಾಂಸ್ಕೃತಿಕ ಭೇದ ಮಾಡುವುದನ್ನು ನಿಷೇಧಿಸಲಾಗಿದೆ.