ಜುಲೈ 28ರ ಸಾಧನಾ ಸಮಾವೇಶಕ್ಕೆ 30 ಸಾವಿರ ಕಾರ್ಯಕರ್ತರು ಭಾಗಿ: ಶಾಸಕ ಕೆ.ಎಂ.ಉದಯ್

KannadaprabhaNewsNetwork |  
Published : Jul 11, 2025, 11:48 PM IST
11ಕೆಎಂಎನ್ ಡಿ24 | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಎರಡು ವರ್ಷಗಳನ್ನು ಪೂರೈಸಿದೆ. ರಾಜ್ಯದ ಮೂರ್ನಾಲ್ಕು ಭಾಗಗಳಲ್ಲಿ ಸಾಧನಾ ಸಮಾವೇಶ ಯಶಸ್ವಿಯಾಗಿ ನಡೆಸಿದೆ. ಈ ತಿಂಗಳು 28ರಂದು ಮದ್ದೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 1200 ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಸೋಮನಹಳ್ಳಿ ಬಳಿ ಜುಲೈ 28ರಂದು ನಡೆಯುವ ಕಾಂಗ್ರೆಸ್ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕ್ಷೇತ್ರದಿಂದ ಕನಿಷ್ಠ 30 ಸಾವಿರ ಕಾರ್ಯಕರ್ತರು ಭಾಗವಹಿಸುವಂತೆ ಶಾಸಕ ಕೆ.ಎಂ.ಉದಯ್ ಶುಕ್ರವಾರ ಮನವಿ ಮಾಡಿದರು.

ಪಟ್ಟಣದ ಶಿವಪುರದ ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮದ್ದೂರು ಮತ್ತು ಭಾರತೀ ನಗರ ಬ್ಲಾಕ್ ಕಾಂಗ್ರೆಸ್‌ನಿಂದ ಸಾಧನಾ ಸಮಾವೇಶದ ಅಂಗವಾಗಿ ನಡೆದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಎರಡು ವರ್ಷಗಳನ್ನು ಪೂರೈಸಿದೆ. ರಾಜ್ಯದ ಮೂರ್ನಾಲ್ಕು ಭಾಗಗಳಲ್ಲಿ ಸಾಧನಾ ಸಮಾವೇಶ ಯಶಸ್ವಿಯಾಗಿ ನಡೆಸಿದೆ. ಈ ತಿಂಗಳು 28ರಂದು ಮದ್ದೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 1200 ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದರು.

ಸಮಾವೇಶದಲ್ಲಿ ಕ್ಷೇತ್ರದಿಂದ ಕನಿಷ್ಠ 30 ಸಾವಿರ ಮಂದಿ ಭಾಗವಹಿಸಬೇಕು. ಪಕ್ಷದ ವಿವಿಧ ಘಟಕಗಳ ಮುಂಚೂಣಿ ನಾಯಕರು, ಮುಖಂಡರು ಮತ್ತು ಕಾರ್ಯಕರ್ತರು ಕ್ಷೇತ್ರದ ಪ್ರತಿ ಬೂತ್ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಶಾಸಕ ದಿನೇಶ್‌ ಗೂಳಿಗೌಡ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅಂದು 1300 ಕೋಟಿಗೂ ಅಧಿಕ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಸೇರಿದಂತೆ 10ಕ್ಕೂ ಹೆಚ್ಚು ಸಚಿವರು ಭಾಗವಹಿಸಲಿದ್ದಾರೆ ಎಂದರು.

ಮದ್ದೂರು ಕ್ಷೇತ್ರಕ್ಕೆ ದೊಡ್ಡ ಪ್ರಮಾಣದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವುದು ಇದೇ ಮೊದಲ ಬಾರಿ. ಶಾಸಕ ಉದಯ್‌ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮದ್ದೂರು ಕ್ಷೇತ್ರಕ್ಕೆ ಕಾವೇರಿ ನಿಗಮ, ಚಾಮುಂಡೇಶ್ವರಿ ವಿದ್ಯುತ್ ನಿಗಮ, ಸಣ್ಣ ನೀರಾವರಿ ನಿಗಮ, ಗ್ರಾಮೀಣ ಮತ್ತು ಪಂಚಾಯ್ತಿ ಇಲಾಖೆ ಸೇರಿದಂತೆ ವಿವಿಧ ಮೂಲಗಳಿಂದ ಸಾವಿರಾರು ಕೋಟಿ ರು. ಅನುದಾನ ತರುವಲ್ಲಿ ಶಾಸಕ ಉದಯ್‌ ಪರಿಶ್ರಮ ಅಪಾರವಾಗಿದೆ ಎಂದರು.

ಮುಂಬರುವ ಜಿಪಂ, ತಾಪಂ ಚುನಾವಣೆಗಳಿಗೆ ಸಿದ್ಧತೆಯ ಸಮಾವೇಶವೂ ಆಗಿದೆ. ಮದ್ದೂರಿನಲ್ಲಿ ಸ್ಪರ್ಧಿಸುವ ಎಲ್ಲಾ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದು, ಶಾಸಕರಿಗೆ ಶಕ್ತಿ ತುಂಬಬೇಕು. ಶಾಸಕರು ಕೋಟಿಗಟ್ಟಲೆ ಬೆಲೆಬಾಳುವ ಆಸ್ತಿಯನ್ನು ಕೆಪಿಸಿಸಿಗೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.

ಸರ್ಕಾರ ಯಶಸ್ವಿಯಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿದ್ದರೂ ಬಿಜೆಪಿ ಮತ್ತು ಜೆಡಿಎಸ್‌ನವರು ವಿಧಾನಸೌಧದ ಒಳಗೆ ಮತ್ತು ಹೊರಗೆ ಟೀಕೆ ಮಾಡುತ್ತಿವೆ. ಆದರೆ, ಅದಕ್ಕೆಲ್ಲ ನಮ್ಮ ಯೋಜನೆಗಳೇ ಉತ್ತರ ನೀಡುತ್ತಿದೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.

ಸಭೆಯಲ್ಲಿ ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಚೆಲುವರಾಜು, ಭಾರತಿನಗರ ಬ್ಲಾಕ್ ಅಧ್ಯಕ್ಷ ರಾಜೀವ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶಂಕರೇ ಗೌಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಶೋಷಿತ ಸಮುದಾಯಗಳ ರಾಜ್ಯಾಧ್ಯಕ್ಷ ಸುರೇಶ್ ಕಂಠಿ, ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಸವರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಸಂದರ್ಶ, ಪುರಸಭಾಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಮುಖಂಡರಾದ ಇಂತಿಯಾ ಜುಲ್ಲಾಖಾನ್, ಎಂ.ಕೆ.ಮರೀಗೌಡ ಮತ್ತಿತರರು ಇದ್ದರು.

PREV

Recommended Stories

ಇಂದಿನಿಂದ ಪ್ರೊ ಕಬಡ್ಡಿ ಲೀಗ್‌ ಶುರು : 12ನೇ ಆವೃತ್ತಿ । 12 ತಂಡ, ಒಟ್ಟು 117 ಪಂದ್ಯ
‘ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವವರು ಕಷ್ಟಕ್ಕೆ ಸಿಲುಕ್ತಾರೆ’