30000 ಆರೋಗ್ಯ ಸಿಬ್ಬಂದಿಗೆ 3 ತಿಂಗಳಿಂದ ವೇತನವಿಲ್ಲ!

KannadaprabhaNewsNetwork |  
Published : May 13, 2025, 11:58 PM IST
ರಾಷ್ಟ್ರೀಯ ಆರೋಗ್ಯ ಅಭಿಯಾನ | Kannada Prabha

ಸಾರಾಂಶ

ರಾಜ್ಯದ ಆರೋಗ್ಯ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್ಎಂ) ಅಡಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ಸೇರಿ 30,000 ಸೌವಿರ ಗುತ್ತಿಗೆ ನೌಕರರಿಗೆ ಬರೋಬ್ಬರಿ ಮೂರು ತಿಂಗಳಿಂದ ವೇತನವೇ ಪಾವತಿಯಾಗಿಲ್ಲ.

ಶ್ರೀಕಾಂತ್ ಎನ್.ಗೌಡಸಂದ್ರ

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಆರೋಗ್ಯ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್ಎಂ) ಅಡಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ಸೇರಿ 30,000 ಸೌವಿರ ಗುತ್ತಿಗೆ ನೌಕರರಿಗೆ ಬರೋಬ್ಬರಿ ಮೂರು ತಿಂಗಳಿಂದ ವೇತನವೇ ಪಾವತಿಯಾಗಿಲ್ಲ.

ಆರೋಗ್ಯ ಇಲಾಖೆ ಹಾಗೂ ಎನ್‌ಎಚ್‌ಎಂ ನಿರ್ದೇಶಕರ ನಿರ್ಲಕ್ಷ್ಯಕ್ಕೆ 30,000 ನೌಕರರು ವೇತನವಿಲ್ಲದೆ ವೇದನೆ ಅನುಭವಿಸುವಂತಾಗಿದೆ. ಮತ್ತೊಂದೆಡೆ ವೇತನ ನೀಡಲಾಗದ ಸ್ಥಿತಿಯಿಂದ ಕೊರೋನಾ ಸಂಕಷ್ಟದಲ್ಲಿ ಜೀವ ಪಣಕ್ಕಿಟ್ಟು ಕರ್ತವ್ಯ ನಿಭಾಯಿಸಿದ್ದ ಸಾವಿರಾರು ಮಂದಿಯನ್ನು ಕೆಲಸದಿಂದಲೇ ತೆಗೆಯಲು ಸಿದ್ಧತೆ ನಡೆಸುತ್ತಿದೆ.

ಹೌದು, ಎನ್‌ಎಚ್‌ಎಂ ಅಡಿ ಆರೋಗ್ಯ ಇಲಾಖೆಯ ಜಿಲ್ಲಾ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ 653 ಮಂದಿ ವೈದ್ಯರು, ಜತೆಗೆ ಶುಶ್ರೂಷಕರು, ಸಮನ್ವಯಕಾರರು, ಡಾಟಾ ಎಂಟ್ರಿ ಆಪರೇಟರ್‌, ಡಿ ಗ್ರೂಪ್‌ ನೌಕರರು ಸೇರಿ 28,258 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಸೇವಾ ಭದ್ರತೆ ಒದಗಿಸಲು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಿದ್ದರೂ ಈವರೆಗೆ ಈಡೇರಿಸಿಲ್ಲ. ಬದಲಿಗೆ ರಾಜ್ಯಾದ್ಯಂತ ಕೆಲಸ ಮಾತ್ರ ಮಾಡಿಸಿಕೊಳ್ಳಲಾಗುತ್ತಿದೆ.

ಶ್ರಮಕ್ಕೆ ತಕ್ಕಂತೆ ವೇತನ ನೀಡುವುದು ಬೇಡ. ನಿಗದಿಯಾಗಿರುವ ಕನಿಷ್ಠ ವೇತನವನ್ನೂ ನೀಡುತ್ತಿಲ್ಲ. ಅನ್ಯ ಯೋಜನೆಗಳಿಗೆ ಸಾವಿರಾರು ಕೋಟಿ ರು. ವೆಚ್ಚ ಮಾಡುವ ಸರ್ಕಾರ ನಮಗೆ ಕನಿಷ್ಠ ವೇತನವನ್ನೂ ನೀಡುತ್ತಿಲ್ಲ. ಎರಡೂವರೆ ತಿಂಗಳಿಂದ ವೇತನ ಬಾಕಿಯಿದ್ದು, ಮೇ 20ಕ್ಕೆ ಪೂರ್ಣ ಮೂರು ತಿಂಗಳ ವೇತನ ಬಾಕಿ ಉಳಿದಂತಾಗಲಿದೆ ಎಂದು ಎನ್‌ಎಚ್‌ಎಂ ಗುತ್ತಿಗೆ ನೌಕರರು ಆರೋಪಿಸಿದ್ದಾರೆ.

ಸಿಬ್ಬಂದಿ ಅಳಲು:

ಮಾರ್ಚ್ ತಿಂಗಳಿಂದ ವೇತನ ಪಾವತಿ ಮಾಡುತ್ತಿಲ್ಲ. ಮೇ 20ರ ವೇಳೆಗೆ ಬರೋಬ್ಬರಿ ಮೂರು ತಿಂಗಳ ವೇತನ ಬಾಕಿ ಉಳಿದಂತಾಗಲಿದೆ. ಮಕ್ಕಳಿಗೆ ಶಾಲಾ ಶುಲ್ಕ ಪಾವತಿ ಮಾಡಬೇಕಾದ ಸಮಯದಲ್ಲಿ ಮೂರು ತಿಂಗಳು ವೇತನ ನೀಡದಿದ್ದರೆ ನಾವು ಬದುಕುವುದು ಹೇಗೆ? ಕೊಡುವ ಕನಿಷ್ಠ ವೇತನಕ್ಕೂ ಸತಾಯಿಸಿ ಸಾಯಿಸುವುದು ಏಕೆ? ನಮ್ಮ ಸಂಬಳಕ್ಕೆ ಬ್ಯಾಂಕ್‌ಗಳಲ್ಲೂ ಸಾಲ ಸಿಗುವುದಿಲ್ಲ. ಮಕ್ಕಳ ವಿದ್ಯಾಭ್ಯಾಸ ನಿಭಾಯಿಸುವುದು ಹೇಗೆ? ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

ಕೆಲಸದಿಂದಲೇ ತೆಗೆಯಲು ಸಿದ್ಧತೆ:

ಮತ್ತೊಂದೆಡೆ ವೇತನ ಪಾವತಿ ಮಾಡಲಾಗದೆ ಬಹುತೇಕ ಎನ್‌ಎಚ್‌ಎಂ ಗುತ್ತಿಗೆ ನೌಕರರನ್ನು ಕೆಲಸದಿಂದಲೇ ತೆಗೆಯಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. ಇದಕ್ಕಾಗಿಯೇ ಏಪ್ರಿಲ್‌ಗೆ ಮುಗಿದ 2024-25ನೇ ಸಾಲಿನ ಗುತ್ತಿಗೆ ಅವಧಿಯನ್ನು ಕೇವಲ ಎರಡು ತಿಂಗಳು ಮಾತ್ರ ವಿಸ್ತರಣೆ ಮಾಡಿದೆ.

ಜತೆಗೆ ಎಲ್ಲಾ ವಿಭಾಗದ ಎನ್‌ಎಚ್‌ಎಂ ಗುತ್ತಿಗೆ ಸಿಬ್ಬಂದಿಯನ್ನು ಮೌಲ್ಯಮಾಪನದ ಹೆಸರಿನಲ್ಲಿ ವಿವಿಧ ಪರೀಕ್ಷೆಗೆ ಒಳಪಡಿಸಿ ಬಳಿಕ 15,000ಕ್ಕೂ ಹೆಚ್ಚು ಮಂದಿಯನ್ನು ಕೆಲಸದಿಂದ ತೆಗೆಯಲು ಸಿದ್ಧತೆ ಮಾಡಲಾಗುತ್ತಿದೆ. 10 ರಿಂದ 20 ವರ್ಷಗಳ ಕಾಲ ಕನಿಷ್ಠ ವೇತನಕ್ಕೆ ದುಡಿಸಿಕೊಂಡು 40 ವರ್ಷ ವಯಸ್ಸು ದಾಟಿದ ಬಳಿಕ ಸರ್ಕಾರ ನಮ್ಮನ್ನು ಹೊರ ದಬ್ಬುತ್ತಿದೆ. ಈ ವಯಸ್ಸಿನಲ್ಲಿ ನಮಗೆ ಹೊರಗೆ ಕೆಲಸವೂ ಸಿಗುವುದಿಲ್ಲ. ನಮ್ಮ ಮುಂದಿನ ಸ್ಥಿತಿ ಏನು? ಎಂದು ಸಿಬ್ಬಂದಿ ಅಲವತ್ತುಕೊಳ್ಳುತ್ತಿದ್ದಾರೆ.

ವಜಾಗೊಳಿಸಲು ಸಿದ್ಧತೆ ಹೇಗೆ?

ವಿವಿಧ ಪರೀಕ್ಷೆಗೆ ಒಳಪಡಿಸಿ ಮೌಲ್ಯಮಾಪನ ನಡೆಸಿದ ಬಳಿಕ ಬಹುತೇಕರನ್ನು ಕೈಬಿಡಲು ಸಿದ್ಧತೆ ಮಾಡಲಾಗಿದೆ. ಉದಾ: ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಸೀಮಿತಗೊಳಿಸಲು ನಿಯಮ ರೂಪಿಸಲಾಗಿದ್ದು ಸುತ್ತೋಲೆ ಹೊರಡಿಸಲಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ 10 ಡಿಇಒ (ಡೇಟಾ ಆಪರೇಟರ್‌) ಬದಲಿಗೆ 5 ಮಂದಿಗೆ ಸೀಮಿತಗೊಳಿಸಬೇಕು. ತಾಲೂಕು ಆಸ್ಪತ್ರೆಯಲ್ಲಿ 5 ಮಂದಿ ಬದಲಿಗೆ ಒಬ್ಬರನ್ನು ಮಾತ್ರ ಹೊಂದಿರಬೇಕು. ಜಿಲ್ಲಾ ಕುಷ್ಟರೋಗ ಕಚೇರಿಗಳಲ್ಲಿರುವ ಡಿಇಒಗಳನ್ನು ಪೂರ್ಣ ಪ್ರಮಾಣದಲ್ಲಿ ತೆಗೆಯಬೇಕು. ಇದಕ್ಕಾಗಿ ಟೈಪಿಂಗ್ ಪರೀಕ್ಷೆ, ಹಾಜರಾತಿ, ನಡತೆ ಆಧಾರದ ಮೇಲೆ ಮೌಲ್ಯಮಾಪನ ಮಾಡಬೇಕು ಎಂದು ಸೂಚಿಸಲಾಗಿದೆ. ಟೈಪಿಂಗ್‌ ಪರೀಕ್ಷೆ ವೇಳೆ ತಪ್ಪುಗಳು, ಕನ್ನಡ ವೇಗ, ಇಂಗ್ಲೀಷ್ ವೇಗ, ಸರಾಸರಿ ವೇಗದ ಪರೀಕ್ಷೆ ನಡೆಸಬೇಕು. ಅದಕ್ಕೆ ಅಂಕಗಳನ್ನು ನೀಡಿ ಬಳಿಕ ತೆಗೆಯಬೇಕು ಎಂದು ಸೂಚನೆ ನೀಡಲಾಗಿದೆ.

ಕೇಂದ್ರದ ಹಣಕ್ಕಾಗಿ ಕಾಯ್ತಿದ್ದೇವೆ:

ವೇತನ ವಿಳಂಬದ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಕೇಂದ್ರ ಸರ್ಕಾರ ಎನ್‌ಎಚ್‌ಎಂ ನೌಕರರಿಗೆ ವೇತನ ಪಾವತಿ ಮಾಡಬೇಕು. ಈವರೆಗೆ ಕೇಂದ್ರದಿಂದ ಹಣ ಬಂದಿಲ್ಲ. ಹೀಗಾಗಿ ವೇತನ ಪಾವತಿಗೆ ವಿಳಂಬವಾಗಿದೆ. ಒಂದು ವಾರದಲ್ಲಿ ಹಣ ಬರುವ ಸಾಧ್ಯತೆಯಿದ್ದು, ಬಂದ ಕೂಡಲೇ ವೇತನ ಪಾವತಿಸಲಾಗುವುದು ಎಂದು ಸ್ಪಷ್ಟನೆ ನೀಡುತ್ತಾರೆ.

-ಬಾಕ್ಸ್-

ಎನ್‌ಎಚ್‌ಎಂ ನಿರ್ದೇಶಕರ

ನಿರ್ಲಕ್ಷ್ಯದಿಂದ ವೇತನ ವಿಳಂಬ

ಎನ್‌ಎಚ್‌ಎಂ ಗುತ್ತಿಗೆ ನೌಕರರ ಗುತ್ತಿಗೆ ಅವಧಿ ನವೀಕರಿಸಿ ಕೇಂದ್ರಕ್ಕೆ ಕಳುಹಿಸಿದ್ದರೆ ವೇತನ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಎನ್‌ಎಚ್‌ಎಂ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯುವ ಸಲುವಾಗಿ ಕೇಂದ್ರಕ್ಕೆ ವೇತನ ಬಿಡುಗಡೆಗೆ ಎನ್‌ಎಚ್‌ಎಂ ರಾಜ್ಯ ನಿರ್ದೇಶಕರು ಪ್ರಸ್ತಾವನೆಯನ್ನೇ ಕಳುಹಿಸಿಲ್ಲ.

ಇದೀಗ ಏಪ್ರಿಲ್‌ನಿಂದ ಜೂನ್‌ 30ರವರೆಗೆ ನೌಕರರ ಸೇವೆ ವಿಸ್ತರಿಸಿ ಆದೇಶಿಸಿದ್ದಾರೆ. ಆದರೆ ಸಕಾಲದಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸದ ಕಾರಣ ವೇತನ ಬಿಡುಗಡೆಯಾಗಿಲ್ಲ. ರಾಜ್ಯ ಆರೋಗ್ಯ ಇಲಾಖೆಯ ಖಜಾನೆಯಲ್ಲೂ ಹಣವಿಲ್ಲ. ಹೀಗಾಗಿ ವೇತನ ಪಾವತಿಯಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಎನ್‌ಚ್‌ಎಂ ನಿರ್ದೇಶಕ ನವೀನ್‌ ಭಟ್‌ ಅವರನ್ನು ಸತತವಾಗಿ ಸಂಪರ್ಕಿಸಿದರೂ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ