ಸಾರಾಂಶ
ಮನೆಯ ಮೂರನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮನೆಯ ಮೂರನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಹೆಲ್ತ್ ಲೇಔಟ್ ನಿವಾಸಿ ಟೈಲರ್ ಕಾಂತರಾಜು ಹಾಗೂ ಶ್ವೇತಾ ಕುಮಾರ್ ದಂಪತಿ ಪುತ್ರಿ ಪ್ರಿಯಾಂಕ (19) ಮೃತ ದುರ್ದೈವಿ. ಮನೆಯ ಮೂರನೇ ಮಹಡಿಯಿಂದ ಬುಧವಾರ ರಾತ್ರಿ ಆಕೆ ಕೆಳಗೆ ಬಿದ್ದಿದ್ದಾಳೆ. ಕೂಡಲೇ ಪ್ರಿಯಾಂಕ ರಕ್ಷಣೆಗೆ ಪೋಷಕರು ಧಾವಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಣುಕಿ ನೋಡುವಾಗ ಆಯ ತಪ್ಪಿದಳುಹೆಲ್ತ್ ಲೇಔಟ್‌ನ ಐದು ಅಂತಸ್ತಿನ ವಸತಿ ಕಟ್ಟಡದ ಎರಡನೇ ಮಹಡಿಯಲ್ಲಿ ಟೈಲರ್ ಕಾಂತರಾಜು ಕುಟುಂಬ ನೆಲೆಸಿದೆ. ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅವರ ಹಿರಿಯ ಪುತ್ರಿ ಪ್ರಿಯಾಂಕ ಓದುತ್ತಿದ್ದಳು. ಮನೆ ಸಮೀಪದ ಅಂಗಡಿಗೆ ಬುಧವಾರ ರಾತ್ರಿ ಪ್ರಿಯಾಂಕ ತಾಯಿ ಶ್ವೇತಾ ಹೋಗಿದ್ದರು. ಆಗ ಮನೆಯಲ್ಲಿದ್ದ ಅವರ ಅಜ್ಜಿ, ಮೊಮ್ಮಗಳಿಗೆ ತಾಯಿ ಬಂದಳೆನೋ ನೋಡು ಎಂದಿದ್ದಾರೆ. ಮನೆಯ ಕಾರಿಡಾರ್‌ಗೆ ಬಂದ ಪ್ರಿಯಾಂಕ ಅಂಗಡಿಗೆ ಹೋಗಿದ್ದ ತಾಯಿ ದಾರಿ ನೋಡುತ್ತಿದ್ದಳು.
ಆಗ ಮನೆ ಸಮೀಪಕ್ಕೆ ಬಂದ ತಾಯಿಯನ್ನು ಕೂಗಿ ಕರೆದು ಆಕೆ ಕೈ ಬೀಸಿದ್ದಾಳೆ. ಇದಕ್ಕೆ ಪ್ರತಿಯಾಗಿ ಕೈ ಬೀಸಿದ ಅವರ ತಾಯಿ, ಮೆಟ್ಟಿಲು ಹತ್ತಿಕೊಂಡು ಮನೆಗೆ ಧಾವಿಸುತ್ತಿದ್ದರು. ಆದರೆ ಮೂರನೇ ಮಹಡಿಗೆ ಹೋಗಿ ಮೆಟ್ಟಿಲು ಹತ್ತಿಕೊಂಡು ತಾಯಿ ಬರುವುದನ್ನು ಇಣುಕಿ ನೋಡುತ್ತಿದ್ದ ಪ್ರಿಯಾಂಕ ಆಯ ತಪ್ಪಿ ಕೆಳಗೆ ಬಿದ್ದಿದ್ದಾಳೆ. ಆಗ ಆಕೆ ಬಿದ್ದ ಶಬ್ದಕ್ಕೆ ನೆರೆಹೊರೆಯವರು ಮನೆಯಿಂದ ಹೊರಬಂದಿದ್ದಾರೆ. ಇತ್ತ ಮೆಟ್ಟಿಲು ಹತ್ತುತ್ತಿದ್ದ ಶ್ವೇತಾ ಕುಮಾರಿ ಅವರಿಗೆ ಏನೋ ದಪ್ಪಂತ ಬಿದ್ದ ಶಬ್ದ ಕೇಳಿದೆ. ಕೂಡಲೇ ಕೆಳ ಮಹಡಿಗೆ ಬಂದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗಳನ್ನು ಕಂಡು ಅವರು ಆಘಾತಗೊಂಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.