ನಾಳೆ- ನಾಡಿದ್ದು ಬೌದ್ಧ ಮಹಾ ಸಮ್ಮೇಳನ

KannadaprabhaNewsNetwork |  
Published : Oct 13, 2025, 02:00 AM IST
2 | Kannada Prabha

ಸಾರಾಂಶ

ಡಾ.ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧಮ್ಮ ಸ್ವೀಕರಿಸಿ 70 ವರ್ಷಗಳಾದ ಹಿನ್ನೆಲೆಯಲ್ಲಿ ಮಾನವ ಮೈತ್ರಿ ಪಯಣ ಆಶಯದಲ್ಲಿ ಅಂತಾರಾಷ್ಟ್ರೀಯ ಬೌದ್ಧ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮೈಸೂರು

ಕರ್ನಾಟಕ ರಾಜ್ಯ ಬಿಕ್ಕು ಸಂಘ, ರಾಜ್ಯ ಬೌದ್ಧ ಸಂಘ- ಸಂಸ್ಥೆಗಳು, ರಾಜ್ಯ ಅಂಬೇಡ್ಕರ್‌ ವಾದಿ ಸಂಘ- ಸಂಸ್ಥೆಗಳು ಮತ್ತು ವಿಶ್ವಮೈತ್ರಿ ಬುದ್ಧ ವಿಹಾರ ಸಂಯುಕ್ತವಾಗಿ ಅ.14 ಮತ್ತು 15 ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೌದ್ಧ ಮಹಾ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.

ಡಾ.ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧಮ್ಮ ಸ್ವೀಕರಿಸಿ 70 ವರ್ಷಗಳಾದ ಹಿನ್ನೆಲೆಯಲ್ಲಿ ಮಾನವ ಮೈತ್ರಿ ಪಯಣ ಆಶಯದಲ್ಲಿ ಅಂತಾರಾಷ್ಟ್ರೀಯ ಬೌದ್ಧ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಎರಡು ದಿನಗಳ ಸಮ್ಮೇಳನಕ್ಕೆ ಸುಮಾರು 30 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. 1 ಮುಖ್ಯ ವೇದಿಕೆಯಲ್ಲಿ 5 ಸಾವಿರ ಜನಕ್ಕೆ ಆಸನ ವ್ಯವಸ್ಥೆ ಹಾಗೂ 4 ಉಪ ವೇದಿಕೆಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ವಸ್ತುಪ್ರದರ್ಶನ, ಪುಸ್ತಕ ಮೇಳ ಇರಲಿದೆ. ವಿದ್ಯಾರ್ಥಿಗಳಿಗೆ ಪ್ರಬಂಧ, ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ನಾಡಿನ ಖ್ಯಾತ ಗಾಯಕರು, ರಂಗಕರ್ಮಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ನಾಟಕ ಪ್ರದರ್ಶನ ಏರ್ಪಡಿಸಿದ್ದೇವೆ. ಶೌಚಾಲಯಕ್ಕೆ ಆದ್ಯತೆ ಕೊಡಲಾಗಿದೆ. ಮಳೆ ಬಂದರೆ ಸೋರದಂತೆ ಜರ್ಮನ್ ಟೆಂಟ್ ಹಾಕಿದ್ದೇವೆ. ಎರಡೂ ದಿನಗಳ ನಿರಂತರವಾಗಿ ಆಹಾರ ವಿತರಣೆ ಮಾಡಲಾಗುವುದು ಎಂದು ಅವರು ವಿವರಿಸಿದರು.

ಅ.14ರ ಬೆಳಗ್ಗೆ 8ಕ್ಕೆ ಪುರಭವನದ ಡಾ. ಅಂಬೇಡ್ಕರ್ ಪ್ರತಿಮೆಯಿಂದ ಮಹಾರಾಜ ಕಾಲೇಜು ಮೈದಾನದವರೆಗೆ ಬುದ್ಧನೆಡೆಗೆ ಒಂದು ಸಾರ್ಥಕ ನಡಿಗೆ ಆಯೋಜಿಸಿದ್ದು, ಬೌದ್ಧ ಭಿಕ್ಕುಗಳು, ಧಮ್ಮಚಾರಿಗಳು ಹಾಗೂ ಉಪಾಸಕರು ಪಾಲ್ಗೊಳ್ಳುವರು ಎಂದರು.

ನಂತರ ಮಹಾರಾಜ ಕಾಲೇಜು ಮೈದಾನದ ನಾಲ್ಕು ವೇದಿಕೆಗಳಲ್ಲಿ ನಡೆಯುವ ಗೋಷ್ಠಿಗಳಲ್ಲಿ ಖ್ಯಾತ ಸಾಹಿತಿಗಳು, ಹೋರಾಟಗಾರರಾದ ಕಾಂಚಾ ಈಳಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ, ಪ್ರೊ. ರಹಮತ್ ತರೀಕೆರೆ, ಬಂಜಗೆರೆ ಜಯಪ್ರಕಾಶ್, ಪ್ರೊ. ಅಪ್ಪಗೆರೆ ಸೋಮಶೇಖರ್, ಕೆ. ದೀಪಕ್, ನಾಗಸಿದ್ಧಾರ್ಥ ಹೊಲೆಯಾರ್, ಎಚ್.ಎಸ್. ಅನುಪಮಾ, ಅಶೋಕ್, ಪ್ರೊ. ಸೋಸಲೆ ಚಿನ್ನಸ್ವಾಮಿ, ಮಲ್ಲಿಕಾರ್ಜುನ ಕನಕಪುರ, ಸೋಸಲೆ ಗಂಗಾಧರ್, ಅಮೃತ ಅತ್ರಾಡಿ, ವಡ್ಡಗೆರೆ ನಾಗರಾಜಯ್ಯ, ಡಾ. ವಿಠ್ಠಲ್ ವಗ್ಗನ್, ಪ್ರೊ. ಸೋಮಶೇಖರ್, ಡಾ.ಎಚ್.ಟಿ. ಪೋತೆ, ಪ್ರಕಾಶ್ ರಾಜ್, ತಲಕಾಡು ರಂಗೇಗೌಡ, ಹರ್ಷಕುಮಾರ್ ಕುಗ್ವೆ, ಡಾ. ಕೃಷ್ಣಮೂರ್ತಿ ಚಮರಂ, ಡಾ. ಶಿವಕುಮಾರ, ಜಯದೇವಿತಾಯಿ ಲಿಗಾಡೆ, ಚೇತನ್ ಅಹಿಂಸಾ, ಪ್ರೊ. ಹರಿರಾಮ್, ಡಾ.ಜಿ. ಶ್ರೀನಿವಾಸ್, ಡಾ.ಹ.ರಾ. ಮಹೇಶ್, ಡಾ. ನಟರಾಜ್ ಬೂದಾಳ್, ಧರಣಿದೇವಿ ಮಾಲಗತ್ತಿ ಮೊದಲಾದವರು ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಿ ವಿಚಾರ ಮಂಡಿಸಲಿದ್ದಾರೆ ಎಂದು ಅವರು ತಿಳಿಸಿದರು.

ಅ.15ರ ಬೆಳಗ್ಗೆ 11.20ಕ್ಕೆ ನಡಯುವ ಸಂಘಂ ನಮಾಮಿ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಡಾ.ಜಿ. ಪರಮೇಶ್ವರ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಸಚಿವರಾದ ಕೆ.ಎಚ್. ಮುನಿಯಪ್ಪ, ಸತೀಶ ಜಾರಕಿಹೊಳಿ, ಪ್ರಿಯಾಂಕ ಖರ್ಗೆ, ಕೆ. ವೆಂಕಟೇಶ್ ಸೇರಿದಂತೆ ಸಂಸದರು, ಶಾಸಕರು ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಹಾಲಿ, ಮಾಜಿ ಜನಪ್ರತಿನಿಧಿಗಳನ್ನು ಪಕ್ಷಾತೀತವಾಗಿ ಆಹ್ವಾನಿಸಲಾಗಿದೆ ಎಂದು ಅವರು ಹೇಳಿದರು.

ಗಾಂಧಿನಗರದ ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಬೌದ್ಧ ಬಿಕ್ಕು ಬಂತೇ ಭೋದಿರತ್ನ, ಮಾತೇ ಗೌತಮಿ, ಬಿಎಸ್ಪಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ, ಮುಖಂಡರಾದ ಸಿದ್ದರಾಜು, ಮಹೇಶ್, ಬಿಲ್ಲಯ್ಯ ಬಸವರಾಜು, ಸೋಮಯ್ಯ ಮಲೆಯೂರು, ಸೋಸಲೆ ಸಿದ್ದರಾಜು ಮೊದಲಾದವರು ಇದ್ದರು.

----

ಬಾಕ್ಸ್...

ಇದು ಚಾರಿತ್ರಿಕವಾದ ಕಾರ್ಯಕ್ರಮ

ಗಾಂಧಿನಗರದ ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಇವತ್ತು ವಿಶ್ವವೇ ಬುದ್ಧರ ಕಡೆ ಮುಖ ಮಾಡುತ್ತಿದೆ. ಸಂಘರ್ಷದ ಹಾದಿ ಇರಬಾರದು. ಸಂವೇದನೆ ಇರಬೇಕು ಎಂದು ಬುದ್ಧರು ಹೇಳಿದ್ದಾರೆ. ಕರುಣೆ, ಮೈತ್ರಿ ವರ್ತಮಾನ ಬದುಕಿಗೆ ಅಗತ್ಯವಾಗಿದೆ. ನಮ್ಮ ನಡೆ ಬುದ್ಧರ ಕಡೆ ಎಂಬ ಆಶಯದಲ್ಲಿ ಈ ಮಹಾ ಸಮ್ಮೇಳನ ಆಯೋಜಿಸಿದ್ದು, ಇದೊಂದು ಚಾರಿತ್ರಿಕವಾದ ಕಾರ್ಯಕ್ರಮ ಎಂದು ತಿಳಿಸಿದರು.

ಭಾರತೀಯರೆಲ್ಲರೂ ಮೂಲತಃ ಬೌದ್ಧರು ಎಂದು ಸ್ವಾಮಿ ವಿವೇಕಾನಂದ ಹೇಳಿದ್ದಾರೆ. ಮನುಷ್ಯ ಮನುಷ್ಯರನ್ನು ಗೌರವಿಸಬೇಕು. ಮುಖ್ಯ ನ್ಯಾಯಮೂರ್ತಿ ದಲಿತನಾಗಿರುವುದನ್ನು ಈ ದೇಶದಲ್ಲಿ ಸಹಿಸುತ್ತಿಲ್ಲ. ಯಾವ ಧರ್ಮ ಶೂ ಎಸೆಯುವುದನ್ನು ಬಯಸುತ್ತದೆ. ರಕ್ತಕ್ಕಾಗಿ ಹಪಾಹಪಿಸುತ್ತದೆ? ಹಾಡುಹಗಲಿನಲ್ಲಿ ಕೊಲೆ, ಅತ್ಯಾಚಾರಗಳು ವರದಿಯಾಗುತ್ತಿವೆ. ಈ ತುರಿತ ಕಾಲದಲ್ಲಿ ಮಾನವ ಮೈತ್ರಿ ಸ್ಥಾಪನೆ ಆಶಯದಲ್ಲಿ ಸಮ್ಮೇಳನ ನಡೆಯಲಿದೆ ಎಂದು ಅವರು ಹೇಳಿದರು.

----

ಕೋಟ್....

ಬೌದ್ಧ ಮಹಾ ಸಮ್ಮೇಳನ ಡಾ. ಅಂಬೇಡ್ಕರ್ ಅವರ ಕಂಡ ಕನಸನ್ನು ಈಡೇರಿಸಲು ಮತ್ತು ಎಲ್ಲಾ ಸಮಾಜದ, ಧರ್ಮದ, ವರ್ಗಗಳ ಜನರನ್ನು ಒಳಗೊಂಡ ಕಾರ್ಯಕ್ರಮವಾಗಿದೆ. ಯಾರ ವಿರುದ್ಧ ಅಥವಾ ಯಾರನ್ನೂ ಟೀಕಿಸಲು ಸಮ್ಮೇಳನ ಮಾಡುತ್ತಿಲ್ಲ. ಬೌದ್ಧ ಧಮ್ಮ ಪುನರುತ್ಥಾನಕ್ಕಾಗಿ ಈ ಸಮ್ಮೇಳನ ಆಯೋಜಿಸಿದ್ದೇವೆ. ಭಾರತ ಮಾತ್ರವಲ್ಲ ಇಡೀ ವಿಶ್ವವೇ ಬುದ್ಧನ ಕಡೆ ಮುಖ ಮಾಡುತ್ತಿದೆ. ಜೀವರಾಶಿಯ ಮೈತ್ರಿ ಕಾರ್ಯಕ್ರಮ ಮುಖ್ಯ ಉದ್ದೇಶವಾಗಿದೆ.

- ಪುರುಷೋತ್ತಮ್, ಮಾಜಿ ಮೇಯರ್

----

ಜಾತಿ ವ್ಯವಸ್ಥೆ, ಅಸಮಾನತೆ ಕೊನೆಗಾಣಬೇಕಾದರೆ ಎಲ್ಲರೂ ಬುದ್ಧ ಮಾರ್ಗದಲ್ಲಿ ಸಾಗಬೇಕು. ಬುದ್ಧರು ತೋರಿದ ಮಾನವೀಯ ಮಾರ್ಗದಲ್ಲಿ ನಡೆಯಬೇಕು. ಸನಾತನ ಧರ್ಮದ ಹೆಸರಿನಲ್ಲಿ ಅಮಾನವೀಯ ಮೌಲ್ಯಗಳು, ಹಿಂಸೆ ನಡೆಸಲಾಗುತ್ತಿದೆ. ಮಾನವೀಯ ಮೌಲ್ಯ ಪ್ರತಿಷ್ಠಾಪನೆ ಅಗತ್ಯವಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ಸಮ್ಮೇಳನವೂ ಇಡೀ ರಾಜ್ಯಕ್ಕೆ ಪ್ರೇರೇಪಣೆ ಕೊಡುತ್ತದೆ.

- ಎಂ ಕೃಷ್ಣಮೂರ್ತಿ, ಬಿಎಸ್ಪಿ ರಾಜ್ಯಾಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ