ಕಲಬುರಗಿ:
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯಿಂದ ಪ್ರದೇಶದಲ್ಲಿ ಅರಣ್ಯೀಕರಣ ಹೆಚ್ಚಿಸಲು ಮತ್ತು ಇಲಾಖೆಯ ಮೂಲಸೌಕರ್ಯ ಬಲವರ್ಧನೆಗೆ ಅರಣ್ಯ ಇಲಾಖೆಗೆ 30 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿಸ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.ಶನಿವಾರ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಅರಣ್ಯ ಕ್ರೀಡಾಕೂಟ-2023 ಸ್ಥಳಕ್ಕೆ ಭೇಟಿ ನೀಡಿ ಕ್ರೀಡಾಪಟುಗಳಿಗೆ ಶುಭ ಕೋರಿ ಮಾತನಾಡಿದ ಅವರು, ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಈ ಅನುದಾನ ಬಳಸಿಕೊಳ್ಳಬೇಕು. ಇದಲ್ಲದೇ ಇನ್ನೂ ಹೆಚ್ಚಿನ ಅನುದಾನ ಬೇಕಿದಲ್ಲಿ ಬಿಡುಗಡೆಗೆ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಮಾನವ ಹಾಗೂ ವನ್ಯಜೀವಿಗಳ ಸಂಘರ್ಷ ನಿಲ್ಲಬೇಕು ಎನ್ನುವುದು ಎಲ್ಲರ ಕೂಗು. ಆದರೆ, ನಿಮಗೆ ಸರಿಯಾದ ಸೌಕರ್ಯ ಕೊಟ್ಟಾಗ ಮಾತ್ರ ಸಂಘರ್ಷ ತಡೆಯಲು ಅನುಕೂಲವಾಗುತ್ತದೆ. ಹಾಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ಅಗತ್ಯ ಅನುದಾನ ಬಿಡುಗಡೆ ಮಾಡಲು ಬದ್ಧ ಎಂದರು.ಸುಮಾರು 2 ದಶಕಗಳ ನಂತರ ಕಲಬುರಗಿಯಲ್ಲಿ ಅರಣ್ಯ ಕ್ರೀಡಾಕೂಟ ನಡೆಯುತ್ತಿದೆ. ರಾಜ್ಯದ 12 ವೃತ್ತಗಳಿಂದ 1,200ಕ್ಕೂ ಸ್ಪರ್ಧಾಳುಗಳು ಭಾಗಿಯಾಗಿ, ಒಟ್ಟು 271 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದು, ಕ್ರೀಡಾಪಟುಗಳಿಗೆ ಸಚಿವರು ಶುಭ ಕೋರಿದರು.
ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶಕುಮಾರ ದಿಕ್ಷಿತ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬಿಶ್ವಜಿತ್ ಮಿಶ್ರಾ, ಶಾಶ್ವತಿ ಮಿಶ್ರಾ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಪೊಲೀಸ್ ಆಯುಕ್ತ ಆರ್. ಚೇತನ್ ಕುಮಾರ, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಕಲಬುರಗಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ ಪಂವಾರ್, ಡಿ.ಸಿ.ಎಫ್. ಸುಮತಿ ಪಾಟೀಲ, ಸಹಾಯಕ ಆಯುಕ್ತೆ ರೂಪಿಂದರ್ ಕೌರ್ ಸೇರಿದಂತೆ ಹಲವರಿದ್ದರು.ಇದೇ ಸಂದರ್ಭದಲ್ಲಿ ವಿವಿಧ ಕ್ರೀಡೆಗಳಲ್ಲಿ ಗೆದ್ದಿರುವ ಸ್ಪರ್ಧಾಳುಗಳಿಗೆ ಸಾಂಕೇತಿಕವಾಗಿ ಪ್ರಶಸ್ತಿ ವಿತರಿಸಿದಲ್ಲದೆ 200 ಮೀಟರ್ ಓಟದ ಸ್ಫರ್ಧೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಚಾಲನೆ ನೀಡಿದರು.