ರಾಜ್ಯದಲ್ಲಿ ಮುಂಗಾರು ಆರಂಭದಿಂದ ಈವರೆಗೆ ಸುರಿದದ್ದು ಕಳೆದ ಮೂರು ದಶಕದಲ್ಲಿ ದಾಖಲೆ ಮಳೆ!

KannadaprabhaNewsNetwork |  
Published : Aug 03, 2024, 01:31 AM ISTUpdated : Aug 03, 2024, 05:15 AM IST
ನೀರು ತುಂಬಿರುವುದು | Kannada Prabha

ಸಾರಾಂಶ

ಕಳೆದ ವರ್ಷ ಮಳೆ ಕೊರತೆಯಿಂದಾಗಿ ಭೀಕರ ಬರದಿಂದ ತತ್ತರಿಸಿದ್ದ ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಮುಂಗಾರು ಆರಂಭದಿಂದ ಈವರೆಗೆ ಸುರಿದ ಮಳೆ ಸಾಮಾನ್ಯ ಮಳೆಯಲ್ಲ. ಇದು, ಕಳೆದ ಮೂರು ದಶಕದಲ್ಲಿ ಸುರಿದ ದಾಖಲೆಯ ಮಳೆಯಾಗಿದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು :  ಕಳೆದ ವರ್ಷ ಮಳೆ ಕೊರತೆಯಿಂದಾಗಿ ಭೀಕರ ಬರದಿಂದ ತತ್ತರಿಸಿದ್ದ ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಮುಂಗಾರು ಆರಂಭದಿಂದ ಈವರೆಗೆ ಸುರಿದ ಮಳೆ ಸಾಮಾನ್ಯ ಮಳೆಯಲ್ಲ. ಇದು, ಕಳೆದ ಮೂರು ದಶಕದಲ್ಲಿ ಸುರಿದ ದಾಖಲೆಯ ಮಳೆಯಾಗಿದೆ.

ಹೌದು, ಕಳೆದ ವರ್ಷ ಮುಂಗಾರು ಅವಧಿಯಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.25ರಷ್ಟು, ಹಿಂಗಾರು ಅವಧಿಯಲ್ಲಿ ಶೇ.38ರಷ್ಟು ಮಳೆ ಕೊರತೆ ಉಂಟಾಗಿತ್ತು. ಇದರಿಂದ ರಾಜ್ಯದಲ್ಲಿ ಭೀಕರ ಬರ ಸೃಷ್ಟಿಯಾಗಿತ್ತು. ಹಲವು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿತ್ತು. ಆದರೆ, ಈ ಬಾರಿ ಮುಂಗಾರು ಅವಧಿಯಲ್ಲಿ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದೆ.

ಮುಂಗಾರು ಅವಧಿಯ ನಾಲ್ಕು ತಿಂಗಳ ಪೈಕಿ ಪ್ರಸಕ್ತ ಜೂನ್‌ ಮತ್ತು ಜುಲೈ ಅವಧಿಯಲ್ಲಿ ಸುರಿದ ಮಳೆಯು 1994ರ ನಂತರ ಸುರಿದ ಅತಿ ಹೆಚ್ಚು ಹಾಗೂ ದಾಖಲೆಯ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಅಂಕಿ-ಅಂಶಗಳು ದೃಢಪಡಿಸಿವೆ.

ಪೂರ್ವ ಮುಂಗಾರು ಅವಧಿಯಲ್ಲಿ ವಾಡಿಕೆ ಪ್ರಮಾಣಕ್ಕಿಂತ ಹೆಚ್ಚಿನ ಮಳೆಯಾದರೂ ಜೂನ್‌ನಲ್ಲಿ ವಾಡಿಕೆ ಪ್ರಮಾಣಕ್ಕಿಂತ ಕಡಿಮೆ ಮಳೆಯಾದ ವರದಿಯಾಗಿತ್ತು. ಆದರೆ, ಜುಲೈನಲ್ಲಿ ಸುರಿದ ಮಳೆ ಜೂನ್‌ ತಿಂಗಳ ಕೊರತೆ ನೀಗಿಸುವುದರೊಂದಿಗೆ ಮಳೆ ಹಂಚಿಕೆಯಲ್ಲಿ ಆಗಿದ್ದ ಅಸಮತೋಲನವನ್ನೂ ಸರಿದೂಗಿಸಿದೆ.

ಜೂನ್‌ ಮತ್ತು ಜುಲೈ ಅವಧಿಯಲ್ಲಿ ದಕ್ಷಿಣ ಒಳನಾಡಿನಲ್ಲಿ 202 ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ.42ರಷ್ಟು ಹೆಚ್ಚು ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ 283 ಮಿ.ಮೀ, ಶೇ.31ರಷ್ಟು ಹೆಚ್ಚು, ಮಲೆನಾಡಿನಲ್ಲಿ 1,199 ಮಿ.ಮೀ, ಶೇ.28ರಷ್ಟು ಹೆಚ್ಚು ಹಾಗೂ ಕರಾವಳಿಯಲ್ಲಿ 2,409 ಮಿ.ಮೀ. ಮಳೆಯಾಗಿದ್ದು, ವಾಡಿಕೆ ಪ್ರಮಾಣಕ್ಕಿಂತ ಶೇ.24ರಷ್ಟು ಹೆಚ್ಚಿನ ಮಳೆಯಾಗಿದೆ.

ಒಟ್ಟಾರೆ ವಾಡಿಕೆ ಪ್ರಕಾರ, ರಾಜ್ಯದಲ್ಲಿ 463 ಮಿ.ಮೀ. ಮಳೆಯಾಗಬೇಕು. ಆದರೆ, ಈ ಬಾರಿ, 593 ಮಿ.ಮೀ ಮಳೆಯಾಗುವ ಮೂಲಕ ಶೇ.28ರಷ್ಟು ಹೆಚ್ಚಿನ ಮಳೆಯಾಗಿದೆ. 1994ರಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.30ರಷ್ಟು ಹೆಚ್ಚಿನ ಮಳೆಯಾಗಿತ್ತು.

30 ವರ್ಷದಲ್ಲಿ ಕೊರತೆಯೇ ಅಧಿಕ:

ರಾಜ್ಯದಲ್ಲಿ 1994ರಿಂದ 2024ರ ಜೂನ್‌ ಮತ್ತು ಜುಲೈ ಅವಧಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾದ ವರ್ಷಗಳೇ ಹೆಚ್ಚಾಗಿವೆ. ಒಟ್ಟು 18 ವರ್ಷ ವಾಡಿಕೆ ಪ್ರಮಾಣಕ್ಕಿಂತ ಮಳೆ ಕಡಿಮೆಯಾಗಿದೆ. ಪ್ರಸಕ್ತ ವರ್ಷ ಸೇರಿದಂತೆ 12 ವರ್ಷ ಮಾತ್ರ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿದೆ.

ಕರಾವಳಿಯಲ್ಲಿ 2 ದಶಕದ ಮಳೆ:

ಕರಾವಳಿಯಲ್ಲಿಯೂ ಎರಡು ದಶಕದ ದಾಖಲೆ ಮಳೆ ವರದಿಯಾಗಿದೆ. ಜುಲೈ ಅಂತ್ಯದ ವರೆಗೆ ವಾಡಿಕೆ ಪ್ರಕಾರ 1940 ಮಿ.ಮೀ ಮಳೆಯಾಗಬೇಕು. ಆದರೆ, ಈ ಬಾರಿ 2409 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.24ರಷ್ಟು ಹೆಚ್ಚಾಗಿದೆ. 1999ರಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.30ರಷ್ಟು ಹೆಚ್ಚಿನ ಮಳೆಯಾಗಿತ್ತು. ಆ ನಂತರ ಇಷ್ಟೊಂದು ಮಳೆಯಾದ ವರದಿಯಾಗಿಲ್ಲ. 2003ರಲ್ಲಿ ಶೇ.10ರಷ್ಟು ಹಾಗೂ 2013ರಲ್ಲಿ ಶೇ.17ರಷ್ಟು ಹೆಚ್ಚಿನ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಅಂಕಿ ಅಂಶದಲ್ಲಿ ತಿಳಿಸಲಾಗಿದೆ.

ಮಂಡ್ಯದಲ್ಲಿ ಅತಿ ಹೆಚ್ಚು ಮಳೆ:

ಈವರೆಗಿನ ಮುಂಗಾರು ಮಳೆ ಪ್ರಕಾರ, ಮಂಡ್ಯ ಜಿಲ್ಲೆಯಲ್ಲಿ ವಾಡಿಕೆಯಂತೆ 109.2 ಮಿ.ಮೀ ಮಳೆಯಾಗಬೇಕು. ಆದರೆ, ಈ ಬಾರಿ 175.4 ಮಿ.ಮೀ ನಷ್ಟು ಮಳೆಯಾಗುವ ಮೂಲಕ ಬರೋಬ್ಬರಿ ಶೇ.61ರಷ್ಟು ಹೆಚ್ಚಿನ ಮಳೆಯಾಗಿದೆ. ಉಳಿದಂತೆ ಬೆಳಗಾವಿಯಲ್ಲಿ ವಾಡಿಕೆಗಿಂತ ಶೇ.60ರಷ್ಟು ಹೆಚ್ಚಿನ ಮಳೆಯಾಗಿದೆ. ಹೀಗೆ, ರಾಜ್ಯದ 31 ಜಿಲ್ಲೆಗಳ ಪೈಕಿ 14 ಜಿಲ್ಲೆಯಲ್ಲಿ ವಾಡಿಕೆಯಷ್ಟು (ಶೇ-19 ರಿಂದ ಶೇ.+19 ರಷ್ಟು), 16 ಜಿಲ್ಲೆಯಲ್ಲಿ ( ಶೇ.+20 ರಿಂದ ಶೇ.+59 ರಷ್ಟು) ಹಾಗೂ ಒಂದು ಜಿಲ್ಲೆಯಲ್ಲಿ (ಶೇ+60 ರಷ್ಟು) ಮಳೆಯಾಗಿದೆ.

ಜುಲೈನಲ್ಲಿ ಶೇ.48 ಹೆಚ್ಚು ಮಳೆ

ವಾಡಿಕೆ ಪ್ರಕಾರ ಜುಲೈ ಅವಧಿಯಲ್ಲಿ 263 ಮಿ.ಮೀ ಮಳೆಯಾಗಬೇಕು. ಆದರೆ, ಈ ಬಾರಿ 390 ಮಿ.ಮೀ ಮಳೆಯಾಗುವ ಮೂಲಕ ಶೇ.48ರಷ್ಟು ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇ.27ರಷ್ಟು, ಉತ್ತರ ಒಳನಾಡಿನಲ್ಲಿ ಶೇ.22ರಷ್ಟು, ಮಲೆನಾಡಿನಲ್ಲಿ ಶೇ.64ರಷ್ಟು ಹಾಗೂ ಕರಾವಳಿಯಲ್ಲಿ ಶೇ.54ರಷ್ಟು ಹೆಚ್ಚಿನ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಈಗಾಗಲೇ ರಾಜ್ಯದ ಬಹುತೇಕ ಜಲಾಶಯ ಭರ್ತಿಯಾಗಿವೆ. ಬಿತ್ತನೆ ಪ್ರಮಾಣವೂ ದ್ವಿಗುಣಗೊಂಡಿದೆ. ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲೂ ಹೆಚ್ಚಿನ ಮಳೆ ಮುನ್ಸೂಚನೆ ಇದೆ. ಇದರಿಂದ ಪ್ರವಾಹ, ನೆರೆ ಭೀತಿ, ಬೆಳೆಹಾನಿ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿದೆ.

- ಶ್ರೀನಿವಾಸ್‌ ರೆಡ್ಡಿ, ಹವಾಮಾನ ತಜ್ಞ

ಜೂನ್‌ -ಜುಲೈ ಮಳೆ ವಿವರ

ಪ್ರದೇಶವಾಡಿಕೆಸುರಿದ ಮಳೆಶೇಕಡಾ

ದಕ್ಷಿಣ ಒಳನಾಡು14220242

ಉತ್ತರ ಒಳನಾಡು21628331

ಮಲೆನಾಡು9361,19928

ಕರಾವಳಿ1,9402,40924

ಒಟ್ಟು46359328

* ಮಿ.ಮೀ.ಗಳಲ್ಲಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೊಲೀಸರಿಗೆ ಕಪಾಳಮೋಕ್ಷ: 27 ಜನರ ವಿರುದ್ಧ ಕೇಸ್‌
ಮಹಾಲಿಂಗಪುರದಲ್ಲಿ ಇಂದು ಜನುಮದ ಜೋಡಿ ಕಾರ್ಯಕ್ರಮ