₹300 ಕೋಟಿ ಭೂ ಹಗರಣ ಪ್ರಕರಣ: ತೀವ್ರಗೊಂಡ ತನಿಖೆ

KannadaprabhaNewsNetwork |  
Published : Aug 26, 2026, 02:30 AM IST
ಮನೆಯ ಎದುರು ಇಡಿ ಅಧಿಕಾರಿಗಳ ವಾಹನ. | Kannada Prabha

ಸಾರಾಂಶ

ನಕಲಿ ದಾಖಲೆ ಸೃಷ್ಟಿಸಿ ಭೂಮಿ ಖರೀದಿ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಗೋವಾ ಮೂಲದ ಉದ್ಯಮಿ ಸುಲೇಮಾನ್ ಖಾನ್ ಯಾನೆ ಸಿದ್ದಿಕ್ ಖಾನ್‌ಗೆ ಸೇರಿದ ಕಾರವಾರದ 4 ಫ್ಲಾಟ್‌ಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಗೋವಾ ಉದ್ಯಮಿಯ ಕಾರವಾರದ 4 ಫ್ಲಾಟ್‌ಗಳ ಮೇಲೆ ಇಡಿ ದಾಳಿಕನ್ನಡಪ್ರಭ ವಾರ್ತೆ ಕಾರವಾರ

ನಕಲಿ ದಾಖಲೆ ಸೃಷ್ಟಿಸಿ ಭೂಮಿ ಖರೀದಿ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಗೋವಾ ಮೂಲದ ಉದ್ಯಮಿ ಸುಲೇಮಾನ್ ಖಾನ್ ಯಾನೆ ಸಿದ್ದಿಕ್ ಖಾನ್‌ಗೆ ಸೇರಿದ ಕಾರವಾರದ 4 ಫ್ಲಾಟ್‌ಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗೋವಾದಿಂದ ಆಗಮಿಸಿದ ಇಡಿ ಅಧಿಕಾರಿಗಳ ವಿಶೇಷ ತಂಡ ಮಂಗಳವಾರ ಬೆಳಗ್ಗೆ ನಗರದ ಕೋಡಿಬಾಗದಲ್ಲಿರುವ ಅಬಕಾರಿ ಕಚೇರಿ ಎದುರಿನ ಖಾಸಗಿ ಅಪಾರ್ಟ್‌ಮೆಂಟ್‌ಗೆ ತೆರಳಿ ಶೋಧ ನಡೆಸಿದೆ.

ಫ್ಲಾಟ್‌ಗಳಲ್ಲಿ ಆಸ್ತಿ ಖರೀದಿ ಹಾಗೂ ಹಣದ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಕಡತಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಸಿದ್ದಿಕ್ ಖಾನ್ ವಿರುದ್ಧ ಗೋವಾದಲ್ಲಿ ದಾಖಲಾಗಿರುವ ನಕಲಿ ದಾಖಲೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದ ಮುಂದುವರಿದ ತನಿಖೆಯ ಭಾಗವಾಗಿ ಈ ಶೋಧ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ.

ಮೂಲತಃ ಶಿವಮೊಗ್ಗದವನೆಂದು ಹೇಳಲಾಗಿರುವ ಸುಲೇಮಾನ್ ಖಾನ್ ಯಾನೆ ಸಿದ್ದಿಕ್ ಖಾನ್ ಸುಮಾರು 5 ವರ್ಷಗಳ ಕಾಲ ಕಾರವಾರದಲ್ಲಿ ನೆಲೆಸಿದ್ದ. ಬಳಿಕ ಗೋವಾಕ್ಕೆ ಸ್ಥಳಾಂತರಗೊಂಡಿದ್ದರೂ, ಆತನ ಕುಟುಂಬ ಕಾರವಾರದಲ್ಲಿಯೇ ವಾಸವಾಗಿತ್ತು ಎನ್ನಲಾಗಿದೆ. ಗೋವಾದಲ್ಲಿ ಮೃತಪಟ್ಟ ವ್ಯಕ್ತಿಗಳ ಹೆಸರಿನಲ್ಲಿದ್ದ ಜಮೀನುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಅವುಗಳನ್ನು ಕಬಳಿಸಿದ ಆರೋಪ ಸಿದ್ದಿಕ್ ಖಾನ್ ವಿರುದ್ಧ ಕೇಳಿಬಂದಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2024ರಲ್ಲಿ ಗೋವಾ ಎಸ್‌ಐಟಿ ಸಿದ್ದಿಕ್ ಖಾನ್‌ನನ್ನು ಬಂಧಿಸಿತ್ತು. ಬಳಿಕ ಆತ ಜೈಲಿನಿಂದ ಪರಾರಿಯಾಗಿದ್ದ ಎನ್ನಲಾಗಿದ್ದು, ನಂತರ ಕೇರಳದಲ್ಲಿ ಗೋವಾ ಎಸ್‌ಐಟಿ ಅಧಿಕಾರಿಗಳಿಂದ ಮತ್ತೆ ಬಂಧಿಸಲ್ಪಟ್ಟಿದ್ದ. ಈ ವೇಳೆ ಎಸ್‌ಐಟಿ ಅಧಿಕಾರಿಗಳು ಕಾರವಾರಕ್ಕೆ ಆಗಮಿಸಿ ಸಿದ್ದಿಕ್ ಖಾನ್‌ಗೆ ಸೇರಿದ 4 ಫ್ಲಾಟ್‌ಗಳನ್ನು ಸೀಜ್ ಮಾಡಿದ್ದರು.

ಇದೇ ಪ್ರಕರಣವನ್ನು ಈ ವರ್ಷದ ಜುಲೈನಲ್ಲಿ ಇಡಿ ತನ್ನ ಸುಪರ್ದಿಗೆ ಪಡೆದುಕೊಂಡು ತನಿಖೆ ಆರಂಭಿಸಿತ್ತು. ಬಳಿಕ ಸಿದ್ದಿಕ್ ಖಾನ್‌ನನ್ನು ಬಂಧಿಸಲಾಗಿತ್ತು. ಅಕ್ರಮ ಹಣ ವರ್ಗಾವಣೆ ಮೂಲಕ ಸುಮಾರು 300 ಕೋಟಿ ಮೌಲ್ಯದ 25 ಹೆಕ್ಟೇರ್ ಭೂಮಿಯನ್ನು ಖರೀದಿಸಿರುವ ಆರೋಪದ ಹಿನ್ನೆಲೆಯಲ್ಲಿ ಇಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಹಿನ್ನೆಲೆ ಕಾರವಾರದಲ್ಲಿರುವ ಸಿದ್ದಿಕ್ ಖಾನ್‌ಗೆ ಸೇರಿದ ಫ್ಲಾಟ್‌ಗಳ ಮೇಲೆ ಇದೀಗ ಇಡಿ ಅಧಿಕಾರಿಗಳು ಶೋಧ ನಡೆಸಿದ್ದು, ನಕಲಿ ಆಸ್ತಿ ದಾಖಲೆಗಳು, ಹಣದ ವಹಿವಾಟು ಹಾಗೂ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳಿಗಾಗಿ ದಾಖಲೆ ಪರಿಶೀಲಿಸಿದ್ದಾರೆ. ಕಾರ್ಯಾಚರಣೆ ವೇಳೆ ಯಾವುದೇ ಮಹತ್ವದ ದಾಖಲೆಗಳು ಅಥವಾ ಇತರ ವಸ್ತುಗಳು ಪತ್ತೆಯಾಗಿವೆಯೇ ಎಂಬುದು ಅಧಿಕಾರಿಗಳಿಂದ ಅಧಿಕೃತವಾಗಿ ತಿಳಿದುಬರಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂಪಿಯಲ್ಲಿ ಹುಲಿ ಪ್ರತ್ಯಕ್ಷ: ಸೆರೆ ಹಿಡಿಯಲು ಸ್ಥಳೀಯರ ಒತ್ತಾಯ
ಕುಷ್ಟಗಿಯಲ್ಲಿ ಚುಟುಕು ಸಾಹಿತ್ಯ ಸಮ್ಮೇಳನ