- ಕಾಫಿ ಮಂಡಳಿಗೆ 2023-24 ನೇ ಸಾಲಿನಲ್ಲಿ ₹62.70 ಕೋಟಿ, 2024-25 ರಲ್ಲಿ ₹90 ಕೋಟಿ ಸಹಾಯಧನ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕೇಂದ್ರ ಸರ್ಕಾರದ ವಾಣಿಜ್ಯ ಸಚಿವಾಲಯವು 2024- 25 ನೇ ಸಾಲಿನಲ್ಲಿ ಕಾಫಿ ಮಂಡಳಿಗೆ ₹307.80 ಕೋಟಿ ನೆರವು ನೀಡಿದೆ ಎಂದು ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊತ್ತವು 2023-24 ನೇ ಸಾಲಿಗಿಂತ ಶೇ.36 ರಷ್ಟು ಹೆಚ್ಚಾಗಿದೆ. 2023-24 ನೇ ಸಾಲಿನಲ್ಲಿ ವಿವಿಧ ಯೋಜನೆಯ ಸಹಾಯಧನಕ್ಕೆ ಮಂಡಳಿಗೆ ₹62.70 ಕೋಟಿ ಸಹಾಯಧನ ದೊರೆತಿದ್ದರೆ, 2024-25 ರಲ್ಲಿ ₹90 ಕೋಟಿ ಸಹಾಯಧನ ದೊರೆತಿದೆ. ಇದು ಶೇ.40 ರಷ್ಟು ಹೆಚ್ಚಾಗಿದೆ ಎಂದು ಹೇಳಿದರು.
ಈ ಅನುದಾನವನ್ನು ಕಾಫಿ ತೋಟದ ಅಭಿವೃದ್ಧಿ ಸೇರಿದಂತೆ ಉದ್ಯಮದ ವಿವಿಧ ಬೆಳವಣಿಗೆಗಳಿಗೆ ಬಳಸಿಕೊಳ್ಳಲಾಗುವುದು. ಇದರಿಂದ ಬೆಳೆಗಾರರು ಹಾಗೂ ಕಾರ್ಮಿಕರಿಗೆ ನೆರವು ಕಲ್ಪಿಸಲಾಗುವುದು. ಕಾಫಿ ಕಣ ನಿರ್ಮಾಣ, ಗೋಡಾನ್, ಯಾಂತ್ರೀಕೃತ ಕಣ ನಿರ್ಮಾಣ, ಸೋಲಾರ್‌ನಿಂದ ಕಾಫಿ ಒಣಗಿಸುವ ಕಣ ನಿರ್ಮಾಣಕ್ಕೆ ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.ತೋಟಗಳಲ್ಲಿ ಕೆರೆ ನಿರ್ಮಾಣ, ತೆರೆದ ಬಾವಿ ನಿರ್ಮಾಣ, ಸ್ಪಿಂಕ್ಲರ್, ಹನಿ ನೀರಾವರಿ, ಪರಿಸರ ಸ್ನೇಹಿ ಪಲ್ಪರ್ ಯಂತ್ರಗಳು, ನೈಸರ್ಗಿಕ ತೋಟಗಾರಿಕೆ, ಡ್ರೋಣ್ ತಂತ್ರಜ್ಞಾನಗಳಿಗೆ ನೆರವು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಕಾಫಿ ಗಿಡಗಳ ಮರು ನಾಟಿ, ಹಾಲಿ ಇರುವ ಕಾಫಿ ಕ್ಯೂರಿಂಗ್‌ಗಳನ್ನು ಉನ್ನತ ದರ್ಜೆಗೇರಿಸುವುದು, ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸುವುದಕ್ಕೆ ಆರ್ಥಿಕ ನೆರವು ನೀಡುವುದು ಮತ್ತು ರೋಸ್ಟಿಂಗ್ ಮತ್ತು ಗ್ರೈಂಡಿಂಗ್ ಘಟಕಗಳನ್ನು ಸ್ಥಾಪಿಸಲು ನೆರವು ನೀಡಲಾಗುವುದು ಎಂದು ವಿವರಿಸಿದರು.ಇದೇ ವೇಳೆ ಸಬ್ಸಿಡಿ ಸೌಲಭ್ಯವನ್ನು 10 ಹೆಕ್ಟರ್‌ನಿಂದ 25 ಹೆಕ್ಟರ್ ವರೆಗೆ ವಿಸ್ತರಿಸಲಾಗಿದೆ. ಇದರಿಂದ ಹೆಚ್ಚಿನ ಬೆಳೆಗಾರರಿಗೆ ಅನುಕೂಲವಾಗಲಿದೆ. ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ವಿದ್ಯಾನಿಧಿಗೆ ₹4 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.
ಇತ್ತೀಚೆಗೆ ನಡೆದ ಕಾಫಿ ಬೆಳೆಯುವ ಸಮುದಾಯದ ಸಭೆಯಲ್ಲಿ ಕಾಫಿ ಮಂಡಳಿ ಸದಸ್ಯರು ಹಾಗೂ ಬೆಳೆಗಾರರನ್ನೊಳಗೊಂಡ ವಿವಿಧ 17 ಸಮಿತಿಗಳನ್ನು ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ರಚಿಸಲು ತೀರ್ಮಾನಿಸಲಾಗಿದೆ. ಈ ಸಮಿತಿಗಳು ಕಾಫಿ ಉದ್ಯಮಕ್ಕೆ ಸಂಬಂಧಿಸಿದ ಬೇರೆ ಬೇರೆ ವಿಚಾರಗಳ ಬಗ್ಗೆ ಚರ್ಚಿಸಿ ಮಂಡಳಿಗೆ ಶಿಫಾರಸು ಮಾಡಲಿದ್ದಾರೆ. ಅದನ್ನು ಅನುಷ್ಠಾನಕ್ಕೆ ತರುವ ಬಗ್ಗೆ ನಂತರ ತೀರ್ಮಾನಿಸಲಾಗುವುದು ಎಂದು ಹೇಳಿದರು.ಈ ಬಾರಿ ಅತೀವೃಷ್ಠಿಯಿಂದಾಗಿ ಒಟ್ಟಾರೆ ಸರಾಸರಿ ಶೇ.10 ರಿಂದ 15 ರಷ್ಟು ಕಾಫಿ ಫಸಲು ಹಾನಿಗೀಡಾಗಿದೆ. ಕೆಲವು ಪ್ರದೇಶದಲ್ಲಿ ಶೇ.15 ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಕಾಫಿ ಮಂಡಳಿ ಮತ್ತು ಕಂದಾಯ ಇಲಾಖೆ ನೇತೃತ್ವದಲ್ಲಿ ಹಾನಿ ಬಗ್ಗೆ ಜಂಟಿ ಸರ್ವೇ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಆಂತರಿಕ ಕಾಫಿ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವ ಸಂಬಂಧ ಯುವಕರಿಗೆ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ. ಮಹಿಳಾ ಸಂಘಗಳನ್ನು ಇದಕ್ಕೆ ಜೋಡಿಸಿಕೊಳ್ಳುವ ಆಲೋಚನೆ ಇದೆ. ಕಾಫಿಯನ್ನು ಫಸಲ್ ಭೀಮಾ ವಿಮಾ ಯೋಜನೆಗೆ ಸೇರ್ಪಡೆಗೊಳಿಸಬೇಕು ಎನ್ನುವ ಒತ್ತಾಯಗಳಿದ್ದ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಸಂಬಂಧ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಸರ್ಕಾರ ಕೋರಿದೆ. ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.----
ಸುದ್ದಿಗೋಷ್ಠಿಯಲ್ಲಿ ಕಾಫಿಮಂಡಳಿ ನಿರ್ದೇಶಕರುಗಳಾದ ಮಹಾಬಲ, ಪ್ರದೀಪ್ ಪೈ, ಭಾಸ್ಕರ್, ಡಿ.ಎಂ. ಶಂಕರ್ ಇದ್ದರು.23 ಕೆಸಿಕೆಎಂ 4