ಬೈಲಂದೂರು ಊರಿನವರ ಪ್ರತಿಷ್ಠೆಗೆ ಶಾಲಾ ವಂಚಿತರಾದ 32 ವಿದ್ಯಾರ್ಥಿಗಳು

KannadaprabhaNewsNetwork | Published : Nov 29, 2024 1:01 AM

ಸಾರಾಂಶ

ಬೈಲಂದೂರು ಶಾಲೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಕ್ಷೇತ್ರಶಿಕ್ಷಣಾಧಿಕಾರಿ ಎನ್.ಆರ್‌. ಹೆಗಡೆ, ಪೊಲೀಸ್‌ ಇಲಾಖೆಯ ಸಹಕಾರ ಪಡೆದು ಪಾಲಕರ ಮನವೊಲಿಸುವ ಎಲ್ಲ ಪ್ರಯತ್ನ ಮಾಡಿದ್ದರಿಂದ ೧೧ ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪಿದ್ದಾರೆ.

ಯಲ್ಲಾಪುರ: ಎಸ್‌ಡಿಎಂಸಿ ಅಧಿಕಾರದ ಪ್ರತಿಷ್ಠೆಗೆ ಶಿಕ್ಷಣದಿಂದ ವಂಚಿತರಾದ ತಾಲೂಕಿನ ಕಿರುವತ್ತಿ ಗ್ರಾಮ ಪಂಚಾಯಿತಿಯ ಬೈಲಂದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೩೨ ವಿದ್ಯಾರ್ಥಿಗಳು ಕಳೆದ ಒಂದೂವರೆ ತಿಂಗಳಿನಿಂದ ಶಾಲೆಯನ್ನು ಬಿಟ್ಟು ಮನೆಯಲ್ಲೇ ಕಾಲಹರಣ ಮಾಡುವಂತಾಗಿದೆ.

ಇಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ಬೈಲಂದೂರು, ಗುಡಂದೂರು ಸಿದ್ದಿವಾಡ ಗ್ರಾಮದ ಮರಾಠಿ, ಮುಸ್ಲಿಂ, ದಲಿತ ಆದಿವಾಸಿ ಸಿದ್ದಿ ಜನಾಂಗದ ಮಕ್ಕಳು ಕಲಿಯುತಿದ್ದಾರೆ. ಒಟ್ಟು ೧೨೬ ಮಕ್ಕಳಿರುವ ಶಾಲೆಗೆ ಮೂವತ್ತು ವರ್ಷದ ಸುದೀರ್ಘ ಇತಿಹಾಸವಿದೆ. ಆದರೆ ಎಸ್‌ಡಿಎಂಸಿ ಸದಸ್ಯರ ಆಯ್ಕೆ ನಂತರ ಅಧ್ಯಕ್ಷರನ್ನು ತಮ್ಮವರನ್ನೇ ಮಾಡಬೇಕು ಎಂದು ಗುಡಂದೂರು, ಸಿದ್ದಿವಾಡ ಗ್ರಾಮದ ಮುಸ್ಲಿಂ ದಲಿತ ಸಮುದಾಯದವರು ಪಟ್ಟು ಹಿಡಿದು ಗಲಾಟೆ ಮಾಡಿ ಬೈಲಂದೂರು ಶಾಲೆಗೆ ತಮ್ಮ ಮಕ್ಕಳನ್ನು ಕಳಿಸುವುದಿಲ್ಲ, ನಮಗೆ ಬೇರೆ ಶಾಲೆ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ.

ಶಾಲೆಯ ಮುಖ್ಯ ಶಿಕ್ಷಕ ಇಮ್ಮಿಯಾಜ್ ಸಹ ಕಾನೂನಿನ ರೀತಿ ಮತದಾನದ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದರೂ ಕೇಳದ ಇವರು ಪ್ರತಿ ಬಾರಿ ಬೈಲಂದೂರು ಗ್ರಾಮದವರೇ ಅಧ್ಯಕ್ಷರಾಗುತ್ತಿದ್ದಾರೆ, ತಮ್ಮವರನ್ನು ಮಾಡದಿದ್ದರೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪಟ್ಟು ಹಿಡಿದು ೩೨ ಮಕ್ಕಳನ್ನು ಶಾಲೆ ಬಿಡಿಸಿ ಕಳೆದ ಒಂದೂವರೆ ತಿಂಗಳಿಂದ ಮನೆಯಲ್ಲಿ ಇರುವಂತೆ ಮಾಡಿದ್ದಾರೆ.

ಬೈಲಂದೂರು ಸರ್ಕಾರಿ ಶಾಲೆ ೫ ಶಿಕ್ಷಕರು, ಸುಸಜ್ಜಿತ ಕಟ್ಟಡ ಉತ್ತಮ ರಸ್ತೆ, ಎಲ್ಲ ಮೂಲ ಸೌಲಭ್ಯಗಳನ್ನು ಹೊಂದಿದೆ. ಯಾವುದೇ ಕೊರತೆಯಿಲ್ಲ. ಆದರೆ ಇದೀಗ ಒಂದೂವರೆ ಕಿಮೀ ಅಂತರದಲ್ಲಿಯೇ ಗುಡಂದೂರು ಸಿದ್ದಿವಾಡ ಗ್ರಾಮದವರು ಮತ್ತೊಂದು ಶಾಲೆಯ ಬೇಡಿಕೆ ಇಟ್ಟಿರುವುದು ಎಷ್ಟು ಸರಿ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಸ್ಥಳೀಯ ಶಾಸಕರು ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳ ಭವಿಷ್ಯ ದೃಷ್ಟಿಯಿಂದ ಪರಿಹಾರ ಕಂಡುಕೊಳ್ಳುವುದು ಅಗತ್ಯವಾಗಿದೆ.ಬೈಲಂದೂರು ಶಾಲೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಕ್ಷೇತ್ರಶಿಕ್ಷಣಾಧಿಕಾರಿ ಎನ್.ಆರ್‌. ಹೆಗಡೆ, ಪೊಲೀಸ್‌ ಇಲಾಖೆಯ ಸಹಕಾರ ಪಡೆದು ಪಾಲಕರ ಮನವೊಲಿಸುವ ಎಲ್ಲ ಪ್ರಯತ್ನ ಮಾಡಿದ್ದರಿಂದ ೧೧ ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪಿದ್ದಾರೆ. ಆದರೆ ಕೆಲವರ ಪ್ರತಿಷ್ಠೆಯಿಂದ ಉಳಿದ ಮಕ್ಕಳು ಶಾಲೆಗೆ ಬರುತ್ತಿಲ್ಲ. ನಾವು ಮಕ್ಕಳಿಗೆ ಶಾಲೆಗೆ ಮರಳಿ ಕರೆತರುವ ಎಲ್ಲ ಪ್ರಯತ್ನ ಮಾಡಿದ್ದೇವೆ. ಆದರೆ ಪೋಷಕರು ಯಾವುದೇ ಮಾತು ಕೇಳುತ್ತಿಲ್ಲ. ಇನ್ನೇನು ಮೂರು ತಿಂಗಳಲ್ಲಿ ಪರೀಕ್ಷೆ ಬರಲಿದೆ. ಅಲ್ಲಿಯವರೆಗೆ ಮಕ್ಕಳನ್ನು ಶಾಲೆಗೆ ಕಳಿಸಲು ಕೇಳಿಕೊಂಡಿದ್ದೇವೆ. ಆದರೂ ಅವರ ಹಟ ಬಿಡುತ್ತಿಲ್ಲ. ಬೇರೆ ಶಾಲೆಗೆ ಪ್ರಸ್ತಾವನೆ ಕಳಿಸಿದ್ದೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದರು.ಗದಾಪ್ರಹಾರ: ಪಾಲಕರ ಮನವೊಲಿಸುವ ಎಲ್ಲ ಪ್ರಯತ್ನ ಮಾಡಿದ್ದರಿಂದ ೧೧ ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪಿದ್ದಾರೆ. ಬೇರೆ ಶಾಲೆಗೆ ಪ್ರಸ್ತಾವನೆ ಕಳಿಸಿದ್ದೇವೆ. ಆದರೆ ಬೇರೆ ಶಾಲೆ ಮಾಡಿದರೂ ಅದಕ್ಕೆ ಮೂಲ ಸೌಕರ್ಯ ಎಲ್ಲ ವ್ಯವಸ್ಥೆ ಕಲ್ಪಿಸುವುದು ಸವಾಲಿನ ಕೆಲಸವೇ ಆಗಿದೆ. ಒಂದು ಚ್ಯುತಿಯಾದರೂ ಶಿಕ್ಷಣ ಇಲಾಖೆ ಮೇಲೆ ಜನಸಾಮಾನ್ಯರ ಗದಾಪ್ರಹಾರವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ತಿಳಿಸಿದರು.

Share this article