ಸಾರಾಂಶ
ಒಳ್ಳೆಯ ಎಮ್ಮೆ ಕೊಡಿಸುವುದಾಗಿ ನಂಬಿಸಿ ಚಿತ್ರ ನಿರ್ದೇಶಕ ಪ್ರೇಮ್ ಅವರಿಂದ ಹಣ ಪಡೆದು ಬಳಿಕ ವಾಟ್ಸ್ ಆಪ್‌ನಲ್ಲಿ ಎಮ್ಮೆಗಳ ಚಿತ್ರ ಕಳುಹಿಸಿ ಕಿಡಿಗೇಡಿಯೊಬ್ಬ ನಾಮ ಹಾಕಿರುವ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರು : ಒಳ್ಳೆಯ ಎಮ್ಮೆ ಕೊಡಿಸುವುದಾಗಿ ನಂಬಿಸಿ ಚಿತ್ರ ನಿರ್ದೇಶಕ ಪ್ರೇಮ್ ಅವರಿಂದ ಹಣ ಪಡೆದು ಬಳಿಕ ವಾಟ್ಸ್ ಆಪ್‌ನಲ್ಲಿ ಎಮ್ಮೆಗಳ ಚಿತ್ರ ಕಳುಹಿಸಿ ಕಿಡಿಗೇಡಿಯೊಬ್ಬ ನಾಮ ಹಾಕಿರುವ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.
ಗುಜರಾತ್ ರಾಜ್ಯದ ವಘೇಲಾ ವನರಾಜ್ ಭಾಯ್ ವಂಚಿಸಿದ್ದು, ಈ ಬಗ್ಗೆ ಪ್ರೇಮ್ ಪರವಾಗಿ ಅವರ ವ್ಯವಸ್ಥಾಪಕ ದಶಾವರ ಚಂದ್ರು ನೀಡಿದ ದೂರಿನ ಮೇರೆಗೆ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನಲ್ಲಿರುವ ತಮ್ಮ ತೋಟದಲ್ಲಿ ಹೈನುಗಾರಿಕೆ ನಡೆಸಲು ನಿರ್ಧರಿಸಿದ್ದ ಪ್ರೇಮ್ ಅವರು, ಇದಕ್ಕಾಗಿ ಗುಜರಾತ್ ರಾಜ್ಯದಲ್ಲಿ ಎಮ್ಮೆ ಖರೀದಿಸಲು ಮುಂದಾಗಿದ್ದರು. ಆಗ ಅವರಿಗೆ ವನರಾಜ್ ಪರಿಚಯವಾಗಿದೆ. ಕೊನೆಗೆ ಮಾತುಕತೆ ನಡೆದು ಎಮ್ಮೆ ಖರೀದಿಸಲು ಆತನಿಗೆ ಮುಂಗಡವಾಗಿ 25 ಸಾವಿರ ರು. ಅನ್ನು ಪ್ರೇಮ್ ನೀಡಿದ್ದರು. ಬಳಿಕ ಆತನ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಇನ್ನುಳಿದ 4.5 ಲಕ್ಷ ರು. ಸಂದಾಯವಾಗಿದೆ. ಕೆಲ ದಿನಗಳ ತರುವಾಯ ತಾನು ಎರಡು ಎಮ್ಮೆಗಳನ್ನು ಖರೀದಿಸಿದ್ದೇನೆ. ಅವುಗಳನ್ನು ಕಳುಹಿಸುವುದಾಗಿ ಆತ ಹೇಳಿದ್ದ. ಅಲ್ಲದೆ ವಾಟ್ಸಾಪ್‌ನಲ್ಲಿ ಎಮ್ಮೆಗಳ ಪೋಟೋಗಳನ್ನು ಪ್ರೇಮ್ ಅವರಿಗೆ ವನರಾಜ್ ಕಳುಹಿಸಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ.
ಆದರೆ ಐದಾರು ದಿನಗಳ ಕಳೆದರೂ ಗುಜರಾತ್‌ನಿಂದ ಎಮ್ಮೆಗಳು ಮಾತ್ರ ಬರಲಿಲ್ಲ. ವಾಟ್ಸಾಪ್‌ನಲ್ಲಿ ಫೋಟೋ ಕಳುಹಿಸಿ ಆತ ವಂಚಿಸಿರುವುದು ಪ್ರೇಮ್ ಅವರಿಗೆ ಗೊತ್ತಾಗಿದೆ. ಆಗ ಈ ವ್ಯವಹಾರದ ವೇಳೆ ಆರೋಪಿ ಕೊಟ್ಟಿದ್ದ ವಿಳಾಸಕ್ಕೆ ಪರಿಚಿತರನ್ನು ಕಳುಹಿಸಿ ವಿಚಾರಿಸಿದಾಗ ವನರಾಜ್ ಮೋಸದಾಟ ಬಯಲಾಗಿದೆ. ಈ ಬಗ್ಗೆ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ವ್ಯವಸ್ಥಾಪಕರ ಮೂಲಕ ಪ್ರೇಮ್ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.