ಸಾರಾಂಶ
ಡೈರಿ ಫಾರ್ಮ್‌ಗೆ ವಿಜ್ಞಾನಿಗಳು ಭೇಟಿ । ಹೆಚ್ಚಿನ ಸಂಶೋಧನೆಗೆ ಮಾಹಿತಿ ಪಡೆದ ತಂಡ
ಕನ್ನಡಪ್ರಭ ವಾರ್ತೆ ಸಿರುಗುಪ್ಪತಾಲೂಕಿನ ಚಿಕ್ಕಬಳ್ಳಾರಿ ಗ್ರಾಮದ ಶ್ರೀನಿವಾಸ್ ರಾಜು ಅವರ ಡೈರಿ ಫಾರ್ಮ್‌ಗೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಬರಲ್ ರಿಸರ್ಚ್ ಪ್ರಾಯೋಜಿತ ಚಳಿಗಾಲದ ಸುಸ್ಥಿರ ಮಣ್ಣಿನ ಆರೋಗ್ಯ ಮತ್ತು ಜೀವನೋಪಾಯದ ಭದ್ರತೆಗಾಗಿ ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಯ ತಾಂತ್ರಿಕ ಸಾಧನೆ, ಸಂಶೋಧನಾ ಆದ್ಯತೆ ಮತ್ತು ಭವಿಷ್ಯದ ಕಾರ್ಯತಂತ್ರಗಳ ಸಂಶೋಧಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ತಂಡವು ಕ್ಷೇತ್ರ ಭೇಟಿ ನೀಡಿ ಹಾಲು ಉತ್ಪಾದನೆ ಮತ್ತು ಎಮ್ಮೆ ತಳಿ ಸಂವರ್ಧನೆ ಪರಿಶೀಲನೆ ನಡೆಸಿದರು.
ರಾಯಚೂರು ಕೃವಿವಿ ಸಾವಯವ ಕೃಷಿ ಸಂಶೋಧನ ಸಂಸ್ಥೆಯ ಪ್ರಾಧ್ಯಾಪಕ ಡಾ. ಎಂ.ಎ. ಬಸವಣ್ಣೆಪ್ಪ ಮಾತನಾಡಿ, ಡೈರಿ ಫಾರ್ಮ್‌ನಲ್ಲಿ ಹಾಲು ಉತ್ಪದಾನೆ ಮತ್ತು ಎಮ್ಮೆ ತಳಿ ಸಂವರ್ಧನೆ, ಮೀನು ಸಾಕಾಣಿಕೆ, ಹೆಚ್ಚಿನ ಹಾಲಿನ ಇಳುವರಿ ಮೇವಿನ ಬೆಳೆಗಳ ಬೆಳೆಯುವಿಕೆ, ಸಂಪ್ರದಾಯಿಕ ಮತ್ತು ಸಾವಯವ ಹಾಗೂ ಯಶಸ್ವಿ ಹೈನುಗಾರಿಕೆಯಲ್ಲಿ ಸಾವಯವ ಮತ್ತು ನೈಸರ್ಗಿಕ ಆಧಾರಿತ ಸಮಗ್ರ ಕೃಷಿ ಪದ್ದತಿಯಲ್ಲಿ ಹೆಚ್ಚಿನ ಸಂಶೋಧನೆಯನ್ನು ಕೈಗೊಳ್ಳುವಲ್ಲಿ ವಿಜ್ಞಾನಿಗಳು ಭೇಟಿ ನೀಡಿ ಮಾಹಿತಿ ಪಡೆಯಲಾಗಿದೆ. ತೀವ್ರವಾದ ಏಕಬೆಳೆ ಕೃಷಿಯಿಂದಾಗಿ ಮಣ್ಣಿನ ಫಲವತ್ತತೆ ಕುಸಿತ ಮತ್ತು ಜೀವವೈವಿಧ್ಯ ನಷ್ಟದಿಂದ ಉಂಟಾಗುವ ಸವಾಲುಗಳ ಕುರಿತುಜನಸಾಮಾನ್ಯರಿಗೆ ಅರಿವು ಮೂಡಿಸಬೇಕು. ಭಾರತದಾದ್ಯಂತ ಸಾವಯವ ಇಂಗಾಲದ ಮಟ್ಟವು ಕಡಿಮೆಯಾಗುತ್ತಿದೆ. ಮಣ್ಣಿನ ಫಲವತ್ತತೆಯನ್ನು ಪುನಃ ಸ್ಥಾಪಿಸಲು ಬೆಳೆ ಪರಿವರ್ತನೆ ಮತ್ತು ಸಾವಯವ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಬೇಕು ಎಂದರು.
ಪ್ರಗತಿಪರ ರೈತ ಶ್ರೀನಿವಾಸ್ ರಾಜು ಮಾತನಾಡಿ, ನಾವು ಮೂಲ ಸಂಪ್ರದಾಯ ಹೈನುಗಾರಿಕೆಯೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನೈಸರ್ಗಿಕವಾಗಿ ಹೆಚ್ಚಿನ ಹಾಲು ಉತ್ಪದಾನ ಮತ್ತು ತಳಿ ಸಂವರ್ಧನೆ ಮಾಡಲಾಗುತ್ತಿದೆ. ನಮ್ಮಲ್ಲಿ ೪೫೦ ಎಮ್ಮೆ, ೮ ಗಿರ್ ತಳಿ ಹಸು, ₹೭ ಲಕ್ಷದ ಒಂದು ಹೋರಿ, ₹೯ ಲಕ್ಷದ ಹರಿಯಾಣ ಮುರಾ ಕೋಣ, ೪೦ ಎಕರೆ ಪ್ರದೇಶದಲ್ಲಿ ೭ ತಳಿಯ ಮೇವು ಬೆಳಯಲಾಗುತ್ತಿದೆ. ೧೫ ಕೂಲಿ ಕಾರ್ಮಿಕರು ನಿತ್ಯ ಕೆಲಸ ನಿರ್ವಹಿಸುತ್ತಾರೆ. ₹೯ ಸಾವಿರ ಒಂದು ದಿನಕ್ಕೆ ಕೂಲಿ ನೀಡಲಾಗುತ್ತಿದ್ದು, ₹೨೦ ಸಾವಿರ ಎಮ್ಮೆಗಳಿಗೆ ಆಹಾರ ನೀಡಲು ಖರ್ಚಾಗುತ್ತದೆ ಎಂದು ವಿವರಿಸಿದರು.ಕೀಟ ತಜ್ಞ ಡಾ. ಆರ್. ವೆಂಕಣ್ಣ, ವಿಜ್ಞಾನಿಗಳಾದ ಡಾ. ಶ್ರೀವಾಸ್ತವ್, ಡಾ. ಸಾಬಳೆ, ಡಾ. ಸತೀಶ್, ಡಾ. ಅನಂತಿ, ಡಾ. ನಳಿನಿ, ಡಾ. ಗೌತಮಿ, ಡಾ. ರುಂಡಲಾ, ಡಾ. ಹೊನ್ನಪ್ಪ, ಡಾ. ಶಿವಕುಮಾರ ಇದ್ದರು.