ಉತ್ತಮ ಸೇವೆಗಳೆ ಭಗವಂತನಿಗೆ ಪ್ರಿಯ

| Published : Feb 24 2025, 12:31 AM IST

ಸಾರಾಂಶ

ನಾವು ಎಷ್ಟು ಹಣ, ಆಸ್ತಿ ಮಾಡಬೇಕು ಎಂದು ಲೆಕ್ಕ ಹಾಕುತ್ತಿದ್ದರೆ, ದೇವರು ಮತ್ತೊಂದು ಕಡೆ ನಮ್ಮ ಆಯಸ್ಸು ಎಷ್ಟು ಕಡಿಮೆಯಾಯಿತು ಎಂದು ಲೆಕ್ಕ ಹಾಕುತ್ತಿರುತ್ತಾನೆ ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ತಿಳಿಸಿದರು

ಕನ್ನಡಪ್ರಭ ವಾರ್ತೆ ತಿಪಟೂರು

ನಾವು ಎಷ್ಟು ಹಣ, ಆಸ್ತಿ ಮಾಡಬೇಕು ಎಂದು ಲೆಕ್ಕ ಹಾಕುತ್ತಿದ್ದರೆ, ದೇವರು ಮತ್ತೊಂದು ಕಡೆ ನಮ್ಮ ಆಯಸ್ಸು ಎಷ್ಟು ಕಡಿಮೆಯಾಯಿತು ಎಂದು ಲೆಕ್ಕ ಹಾಕುತ್ತಿರುತ್ತಾನೆ ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ತಿಳಿಸಿದರು.

ತಾಲೂಕಿನ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಅಜ್ಜಯ್ಯನ ಜಾತ್ರಾ ಮಹೋತ್ಸವ, ಕರಿಬಸವಸ್ವಾಮಿಗಳವರ ೨೩೨ನೇ ವಾರ್ಷಿಕ ಸ್ಮರಣೋತ್ಸವ, ಶ್ರೀಗಳ ೧೭ನೇ ವರ್ಷದ ಪುಣ್ಯಾರಾಧನೆ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕೆಟ್ಟವರಿಗೆ ದೇವರು ಅನುಗ್ರಹಿಸುವುದಿಲ್ಲ. ಶ್ರಮಪಟ್ಟು ದುಡಿದ ಸಂಪತ್ತಿನಲ್ಲಿ ದಾನ, ಧರ್ಮ ಜೊತೆಗೆ ನಾವು ಯಾವಾಗಲೂ ಒಳ್ಳೆಯದನ್ನೇ ಮಾಡಬೇಕು ಮತ್ತು ಬಯಸಬೇಕು ಆಗ ಮಾತ್ರ ನಾವು ನಂಬಿದ ದೇವರು ನಮಗೆ ಯಾವುದೇ ರೂಪದಲ್ಲಿಯಾದರೂ ಸಹಾಯ ಮಾಡುತ್ತಾನೆ. ನಾವು ಇಲ್ಲಿಗೆ ಸಂಸದರಾಗಿ ಶಾಸಕರಾಗಿ ಬಂದಿಲ್ಲ. ಮಠದ ಭಕ್ತರಾಗಿ ಮಾತ್ರ ಬಂದಿದ್ದೇವೆ. ಗುರುಗಳ ಹಾಗೂ ದೇವರ ಅನುಗ್ರಹದಿಂದ ನಾವು ಸಾಧನೆ ಮಾಡಿದ್ದೇವೆ ಅಷ್ಟೆ. ಉಪಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಮೂಲಕ ನನಗೆ ಮಠದ ಪರಿಚಯವಾಯಿತು. ಮಠದ ಭಕ್ತನಾಗಿ ಸಂಪೂರ್ಣವಾಗಿ ಅಜ್ಜಯ್ಯನಿಗೆ ಶರಣಾದ ಮೇಲೆಯೇ ನನಗೆ ಒಳ್ಳೆಯದಾಗಿದೆ. ಎರಡು ಬಾರಿ ರಾಜ್ಯಸಭಾ ಸದಸ್ಯನಾಗಿ ಆಯ್ಕೆಯಾಗಿರುವುದಲ್ಲದೆ, ಎಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿಯೂ ನನಗೆ ಒಳ್ಳೆಯದೇ ಆಯಿತು ಎಂದು ತಿಳಿಸಿದರು.

ಶಾಸಕ ಕೆ. ಷಡಕ್ಷರಿ ಮಾತನಾಡಿ ಶ್ರೀಕ್ಷೇತ್ರ ಇಷ್ಟು ವಿಶಾಲವಾಗಿ ಬೆಳೆಯುತ್ತದೆ ಎಂದು ಎಣಿಸಿರಲಿಲ್ಲ. ಅಜ್ಜಯ್ಯನ ಶಕ್ತಿ ಅಪಾರ. ನನಗೆ ಅದನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ಸಮಯ ಬೇಕಾಯಿತು. ನಾನು ಸಹಕಾರ ಕ್ಷೇತ್ರದಲ್ಲಿ ಬೆಳೆದು ಬಂದದ್ದರಿಂದ ಕಾಯಕಶಕ್ತಿಯಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ. ಈ ಬಾರಿ ನನ್ನ ಕ್ಷೇತ್ರಕ್ಕೆ ಜಿಲ್ಲೆಯಾಗಲು ಬೇಕಾಗಿರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ನನ್ನ ಸಂಕಲ್ಪ ಹಾಗೂ ಗುರಿಯಾಗಿದೆ. ಜೊತೆಗೆ ಇಡೀ ತಾಲೂಕಿನ ಪ್ರತಿ ಮನೆಗೂ ಕುಡಿಯುವ ನೀರನ್ನು ಕೊಡುವ ಯೋಜನೆ ಮಾಡುತ್ತಿದ್ದೇನೆ ಎಂದರು.

ಕಾಡಸಿದ್ದೇಶ್ವರ ಮಠದ ಕಿರಿಯ ಶ್ರೀಗಳಾದ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳು ಮಾತನಾಡಿ, ಶ್ರೀಮಠಕ್ಕೆ ೮೦೦ ವರ್ಷಗಳ ಇತಿಹಾಸವಿದೆ. ಆಗಿನಿಂದ ಈವರೆಗೆ ೧೯ಪೂಜ್ಯರ ತಪಸ್ಸಿನ ಫಲ ಹಾಗೂ ಈಗಿನ ಶ್ರೀಗಳ ಮಾರ್ಗದರ್ಶನದಿಂದ ನಮ್ಮ ಮಠ ಬೆಳೆಯುತ್ತಿದೆ. ಶ್ರೀಮಠವು ಅನ್ನ-ಅರಿವು-ಅಭಯದಾನದ ಸತ್‌ಸಂಕಲ್ಪ ಹಾಗೂ ಶ್ರೀಗಳ ಆಶೀರ್ವಾದದ ಬಲದಿಂದ ನಡೆಯುತ್ತಿದ್ದು ಎಲ್ಲ ಜಾತಿ, ಧರ್ಮದವರೂ ಇಲ್ಲಿ ಬಂದು ಸೇವೆ ಸಲ್ಲಿಸಿ ಆಶೀರ್ವಾದ ಪಡೆದುಕೊಳ್ಳುತ್ತಾರೆ. ನಾವು ಆಚಾರ-ವಿಚಾರ-ಸಂಸ್ಕಾರಗಳನ್ನು ಪಾಲಿಸಿದರೆ ಮಕ್ಕಳು ಅದನ್ನು ಕಲಿಯುತ್ತಾರೆ. ಮಕ್ಕಳಿಗೆ ತಿಳಿಹೇಳಬೇಕೆಂದರೆ ನಾವು ಮೊದಲು ಸರಿಯಾಗಿರಬೇಕು ಎಂದರು.

ಮಹಾರಾಷ್ಟ್ರದ ಪಾನಮಂಗಳೂರು ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ನಾನು ಕಾಡಸಿದ್ದೇಶ್ವರ ಮಠದಲ್ಲಿ ೧೮ವರ್ಷ ಸೇವೆ ಸಲ್ಲಿಸಿ ನಂತರ ಮಹಾರಾಷ್ಟ್ರಕ್ಕೆ ಹೋಗಿದ್ದೇನೆ. ಇಲ್ಲಿಯ ಶ್ರೀಗಳ ಪವಾಡಗಳನ್ನು ಎಣಿಸಲಾಗಲ್ಲ. ಶ್ರೀಗಳು ೧೦೧ದಿನದ ಅನುಷ್ಠಾನದ ಕಠಿಣ ವ್ರತ ಮಾಡಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಇಲ್ಲಿಯ ಶ್ರೀಗಳ ಮಂತ್ರಾಕ್ಷತೆಯ ಫಲ ಹಾಗೂ ಅನುಗ್ರಹದಿಂದ ನಮ್ಮ ಮಠ ನಡೆಯುತ್ತಿದೆ ಎಂದು ತಿಳಿಸಿದರು.

ಬೆಂಗಳೂರಿನ ವಿಭೂತಿಪುರ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಕಾಡಸಿದ್ದೇಶ್ವರ ಮಠದಲ್ಲಿ ಸಾಕ್ಷಾತ್ ಮಾತನಾಡುವ ಅಜ್ಜಯ್ಯನ ಸ್ವರೂಪವಾಗಿ ಶ್ರೀಗಳು ಇದ್ದು ಮಾರ್ಗದರ್ಶನ ಮಾಡುತ್ತಿದ್ದಾರೆ. ಜನರಿಗೆ ಸನ್ಮಾರ್ಗ ತೋರಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಬದುಕಿನ ಜ್ಞಾನ ನಮಗಿಲ್ಲಿ ದೊರೆಯುತ್ತದೆ. ಶರೀರ, ಸಂಪತ್ತು ಶಾಶ್ವತವಲ್ಲ. ದಿನಕಳೆದಂತೆಲ್ಲಾ ಮೃತ್ಯು ನಮಗೆ ಹತ್ತಿರವಾಗುತ್ತಿರುತ್ತಾನೆ. ಆದ್ದರಿಂದ ನಾವು ಮತ್ತೊಬ್ಬರಿಗೆ ಒಳ್ಳೆಯದನ್ನು ಮಾಡಬೇಕು ಎಂದರು.

ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ತುರುವೇಕೆರೆ ಶಾಖಾಮಠದ ಗುರುಚನ್ನಬಸವಯ್ಯ, ಡಾ. ಹಿರೇಮಠ್, ವಿಶ್ವ ಕಲ್ಯಾಣ ಟ್ರಸ್ಟ್‌ನ ಜಯಣ್ಣ, ಶಂಭುಗೌಡರು, ಶ್ರೀಮಠದ ಮೇನೇಜರ್ ಶಂಭು, ಉಮೇಶಣ್ಣ, ಲೋಕೇಶ್ ಇನ್ನಿತರರು ಉಪಸ್ಥಿತರಿದ್ದರು.