ಕನ್ನಡಪ್ರಭವಾರ್ತೆ ಬೀರೂರುಸರ್ಕಾರದಿಂದ ಪ್ರತಿ ಮನೆಗೆ ಶೇ. 100ರಷ್ಟು ಕಡ್ಡಾಯವಾಗಿ ನೀರು ನೀಡಬೇಕೆಂದು ಉದ್ದೇಶಿಸಿ ಅಮೃತ್ 2.0 ಎನ್ನುವ ಯೋಜನೆ ಜಾರಿಗೆ ತಂದಿದ್ದು, ಬೀರೂರು ಪಟ್ಟಣಕ್ಕೆ ₹33ಕೋಟಿ ಮಂಜುರಾಗಿದೆ. ಶೀಘ್ರದಲ್ಲಿಯೇ ಕ್ಷೇತ್ರದ ಶಾಸಕರು ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಚಿಕ್ಕಮಗಳೂರು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಆನಂದ್ ತಿಳಿಸಿದರು.ಪುರಸಭೆಯ ಸಭಾಂಗಣದಲ್ಲಿ ಬುಧವಾರ ಪುರಸಭೆ ಅಧ್ಯಕ್ಷೆ ವನಿತ ಮಧು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಈ ಹಿಂದೆ ಕುಡಿಯುವ ನೀರು ಸರಬರಾಜು ಮಾಡಲು ಪೈಪ್‌ಲೈನ್‌ಗಳಿಗೆ ಪಿವಿಸಿ ಪೈಪ್ ಲೈನ್ ಅಳವಡಿಕೆ ಮಾಡಲಾಗಿತ್ತು. ಆದರೆ ಕೆಲವು ವಾರ್ಡ್ ಗಲಲ್ಲಿ ಕೆಲವೆಡೆ ಸರಿಯಾಗಿ ಮನೆಗಳಿಗೆ ನೀರು ಸರಬರಾಜಾಗುತ್ತಿರಲಿಲ್ಲ. ಇದರಿಂದ ಪುರಸಭೆ ಮತ್ತು ಸದಸ್ಯರುಗಳಿಗೆ ತಲೆನೋವಾಗಿದ್ದನ್ನು ಮನಗಂಡು, 1ಲಕ್ಷಕಿಂತ ಕಡಿಮೆ ಜನಸಂಖ್ಯೆಯುಳ್ಳ ಪಟ್ಟಣಗಳಿಗೆ ಸರ್ಕಾರ ಕುಡಿಯುವ ನೀರು ಸರಬರಾಜಿನ ‘ಅಮೃತ್ ಯೋಜನೆಯನ್ನು’ ಜಾರಿಗೆ ತಂದು ಪ್ರತಿ ಮನೆಗು ಕಡ್ಡಾಯವಾಗಿ ಶೇ.100ರಷ್ಟು ಕುಡಿಯುವ ನೀರನ್ನು ನೀಡಲು ಹೊರಟಿದೆ ಎಂದು ತಿಳಿಸಿದರು.ಸದ್ಯ ಪಟ್ಟಣದ 23 ವಾರ್ಡಗಳಲ್ಲಿ 5930 ಮನೆ ನಲ್ಲಿಗಳಿದ್ದು, ಪಟ್ಟಣ ವ್ಯಾಪ್ತಿಯಲ್ಲಿ 85. ಕಿಮೀ ಇದ್ದು ಅವುಗಳನ್ನು ತೆಗೆದು ಹೊಸದಾಗಿ ಎಚ್.ಡಿ.ಪಿ.ಇ ಪೈಪ್ ಗಳನ್ನು ಅಳವಡಿಸಿ ಪ್ರತಿ ಮನೆ ಉಚಿತವಾಗಿ ನಲ್ಲಿ ಸಂಪರ್ಕದ ಜೊತೆ ನಲ್ಲಿಗೆ ಮೀಟರ್ ಅವಳಡಿಸಲಾಗುವುದು. ಕಾಮಗಾರಿಯನ್ನು ಒಮದು ವರ್ಷದ ಒಳಗೆ ಮುಕ್ತಾಯ ಮಾಡಲಾಗುವುದು. ಸದಸ್ಯರು ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕೆಂದು ಮನವಿ ಮಾಡಿದರು.ಸದಸ್ಯೆ ರೋಹಿಣಿ ವಿನಾಯಕ್ ಮಾತನಾಡಿ, ಮುಖ್ಯಾಧಿಕಾರಿಗಳು ಮತ್ತು ಅಧ್ಯಕ್ಷರು ಸಾಮಾನ್ಯ ಸಭೆಯ ಅಜೆಂಡಾ ತಯಾರಿಸುವಾಗ ಕಾಮಗಾರಿಯ ಅಂದಾಜು ಮೊತ್ತ ಹಾಕದೆ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡುತ್ತೀರ, ಪ್ರತಿ ಕಾಮಗಾರಿಯನ್ನು ಸರ್ವ ಸದಸ್ಯರ ಗಮನಕ್ಕೆ ತಂದು ಅಜೆಂಡಾದಲ್ಲಿ ಇಡಬೇಕು. ಇಲ್ಲವಾದಲ್ಲಿ ನನ್ನ ವಿರೋಧವಿದೆ. ಇದಕ್ಕೆ ಉತ್ತರ ನೀಡಬೇಕು ಎಂದು ಸಭೆಯಲ್ಲಿ ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಜಿ. ಪ್ರಕಾಶ್ ಇಂಜಿನಿಯರ್ ಕೆಲವು ಮಾಹಿತಿ ನೀಡದ ಪರಿಣಾಮ ತಪ್ಪಾಗಿದೆ.ಅಂತಹುಗಳನ್ನು ಮುಂದಿನ ಸಭೆಯಲ್ಲಿ ಎಚ್ಚೆತ್ತು ಅಂದಾಜು ಮೊತ್ತ ಹಾಕಿಸಿ ಸಭೆಗೆ ತರಲಾಗುವುದು ಎಂದರು. ಬೀರೂರು ಪಟ್ಟಣದ 4ಆರೋಗ್ಯ ಕ್ಷೇಮ ಕೇಂದ್ರಗಳಿಗೆ ಜಾಗ ನೀಡಿದ್ದು, ಉಳಿದ ಒಂದಕ್ಕೆ ಜಾಗ ನೀಡಲು ಒಪ್ಪಿಗೆ ಸೂಚಿಸಿದರೆ ಕಟ್ಟಡ ನಿರ್ಮಿಸಲು ಅನುಕೂಲವಾಗುತ್ತದೆ ಎಂದಾಗ ಸದಸ್ಯರು ಒಪ್ಪಿಗೆ ಸೂಚಿಸಿದರು.ಸದಸ್ಯ ಎಂ.ಪಿ .ಸುದರ್ಶನ್ ಮಾತನಾಡಿ, ಮಂಗಳವಾರ ದಲಿತ ಸಂಘಟನೆಗಳು ಪುರಸಭೆ ಮುಂಭಾಗ ಅಜ್ಜಂಪುರ ರಸ್ತೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಪುಟ್ಪಾತ್ ಜಾಗ ನಿರ್ಮಾಣ ಮಾಡಿಕೊಡುವಂತೆ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಉತ್ತರಿಸಿ, ಜೊತೆಗೆ ಮೊದಲು ಪುಟ್ ಪಾತ್ ಜಾಗದಲ್ಲಿ ಅಕ್ರಮವಾಗಿರುವ ಅಂಗಡಿಮುಂಗಟ್ಟು ಕಟ್ಟಿರುವವರನ್ನು ಶೀಘ್ರವೇ ತೆರವು ಮಾಡಿಸಿ ಎಂದಾಗ ಸರ್ವ ಸದಸ್ಯರು ಸಹಮತ ವ್ಯಕ್ತಪಡಿಸಿದರು.ನಂತರ ಕಂದಾಯ ವಸೂಲಾತಿ, ಯುಜಿಡಿ ಕಾಮಗಾರಿ ಸರಿಪಡಿಸುವಿಕೆ, ಲಕ್ಕವಳ್ಳಿ ಜಾಕ್ ವೆಲ್ ಮೋಟಾರು ದುರಸ್ಥಿ, ಕಾಮಗಾರಿಯಾಗಿರುವ ವಿವಿಧ ಬಿಲ್ ಗಳು, ಪುರಸಭೆಗೆ ಟ್ರಾಕ್ಟರ್ ಖರೀದಿ, ಬಿ. ಕೋಡಿಹಳ್ಳಿ ರಸ್ತೆಯ ರೈಲ್ವೆ ಬ್ರಿಡ್ಜ್ ನಿಂದ ಯುಜಿಡಿ ನೀರು ಹರಿಸುವ ಕಾಮಗಾರಿ, ಇಂದಿರಾ ಕ್ಯಾಂಟೀನ್ ಗೆ ಕಾಂಪೌಡ್ ನಿರ್ಮಾಣ, ವಿವಿಧ ಸದಸ್ಯರುಗಳ ವಿದ್ಯುತ್ ಕಂಬ ಅಳವಡಿಕೆ, ಸಿಸಿ ರಸ್ತೆ, ಸ್ಲಾಬ್, ಪಾರ್ಕ್ ಅಭಿವೃದ್ಧಿ, ಪ. ಜಾತಿ ಮತ್ತು ಪಂಗಡದ ಸಣ್ಣ ಉದ್ದಿಮೆದಾರರು ಮತ್ತು ಆನಾರೋಗ್ಯ ವಂಚಿತರಿಗೆ ಆರೋಗ್ಯ ಧನಸಹಾಯ ಮತ್ತಿತರ ವಿಷಯಗಳಿಗೆ ಸರ್ವ ಸದಸ್ಯರಿಂದ ಅನುಮೋದನೆ ಪಡೆಯಲಾಯಿತು.
ಪುರಸಭೆ ಅಧ್ಯಕ್ಷೆ ವನಿತಮಧು, ಉಪಾಧ್ಯಕ್ಷ ಎನ್ಎಂ..ನಾಗರಾಜ್, ಹಿರಿಯ ಆರೋಗ್ಯ ನಿರೀಕ್ಷಕ ವೈ.ಎಂ. ಲಕ್ಷ್ಮಣ್, ಸದಸ್ಯರಾದ ಮಾನಿಕ್ ಭಾಷ, ಜಿಮ್ ರಾಜು, ಬಿ.ಆರ್. ಮೋಹನ್ ಕುಮಾರ್, ಜ್ಯೋತಿ ವೆಂಕಟೇಶ್, ಶಾರದ ರುದ್ರಪ್ಪ, ಎಲೆರವಿಕುಮಾರ್, ಜ್ಯೋತಿ ಸಂತೋಷ್, ಸುಮಿತ್ರ ಕೃಷ್ಣಮೂರ್ತಿ, ಮೀನಾಕ್ಷಮ್ಮ, ಲಕ್ಷ್ಮಣ್, ಗಂಗಾಧರ್, ಭಾಗ್ಯಲಕ್ಷ್ಮೀ ಮೋಹನ್ ಸೇರಿದಂತೆ ಪುರಸಭೆ ಸಿಬ್ಬಂದಿಗಳು ಇದ್ದರು.ಸಭೆಯಲ್ಲಿ ಬೀದಿನಾಯಿ ಗದ್ದಲಸದಸ್ಯೆ ಸಹನಾ ವೆಂಕಟೇಶ್ ಮಾತನಾಡಿ, ಪುರಸಭೆಯ ಎಲ್ಲಾ ವಾರ್ಡಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅನೇಕ ಅಪಘಾತಗಳು, ಕಡಿತದ ಪ್ರಕರಣಗಳು ದಾಖಲಾಗಿದ್ದರೂ ಸಹ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಏನಾದರೂ ಅವಘಡ ಸಂಭವಿಸಿದರೆ ಇದಕ್ಕೆ ನೀವೆ ಹೊಣೆ ಎಂದಾಗ ಸದಸ್ಯರು ಸಹ ಹೆಚ್ಚುತ್ತಿರುವ ಬೀದಿನಾಯಿಗಳಿಗೆ ಕಡಿವಾಣ ಹಾಕಿ ಆಗ್ರಹಿಸಿದರು.