ತುಂಗಭದ್ರಾ ಜಲಾಶಯ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದ ಲಕ್ಷಾಂತರ ರೈತರ ಜೀವನಾಡಿಯಾಗಿದೆ. ಹೊಸಪೇಟೆ, ಕೊಪ್ಪಳ, ಗಂಗಾವತಿ, ಕಾರಟಗಿ, ಕನಕಗಿರಿ, ಸಿಂಧನೂರ, ಮಸ್ಕಿ, ಮಾನವಿ, ಸಿರವಾರ, ರಾಯಚೂರು, ಬಳ್ಳಾರಿ ಸೇರಿದಂತೆ ಈ ಭಾಗದ ಲಕ್ಷಾಂತರ ಸಂಖ್ಯೆಯ ರೈತರ ಬದುಕಿಗೆ ಆಸರೆ
ಕೊಪ್ಪಳ: ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಬದಲಾಯಿಸುವ ಕಾರ್ಯ ಪೂರ್ಣಗೊಂಡಿದ್ದು, ಶೀಘ್ರ ಉದ್ಘಾಟನೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು.
ಭಾನುವಾರ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ, ಬಹುತೇಕ ಅಂತಿಮ ಹಂತ ತಲುಪಿದ ಗೇಟ್ ಅಳವಡಿಕೆ ಕಾರ್ಯ ಪರಿಶೀಲಿಸಿ ಅವರು ಮಾತನಾಡಿದರು.
ತುಂಗಭದ್ರಾ ಜಲಾಶಯ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದ ಲಕ್ಷಾಂತರ ರೈತರ ಜೀವನಾಡಿಯಾಗಿದೆ. ಹೊಸಪೇಟೆ, ಕೊಪ್ಪಳ, ಗಂಗಾವತಿ, ಕಾರಟಗಿ, ಕನಕಗಿರಿ, ಸಿಂಧನೂರ, ಮಸ್ಕಿ, ಮಾನವಿ, ಸಿರವಾರ, ರಾಯಚೂರು, ಬಳ್ಳಾರಿ ಸೇರಿದಂತೆ ಈ ಭಾಗದ ಲಕ್ಷಾಂತರ ಸಂಖ್ಯೆಯ ರೈತರ ಬದುಕಿಗೆ ಆಸರೆಯಾಗಿದೆ. ತುಂಗಭದ್ರಾ ಜಲಾಶಯದ ಎಲ್ಲ 33 ಕ್ರಸ್ಟ್‌ಗೇಟ್ ಅಳವಡಿಕೆ ಕಾರ್ಯವು ನಿಗದಿತ ಸಮಯದಲ್ಲಿ ಮುಗಿದಿದ್ದು, ಸಣ್ಣ ಪುಟ್ಟ ಕೆಲಸಗಳು ಮಾತ್ರ ಬಾಕಿ ಇವೆ. ಈ ಎಲ್ಲ ಕಾರ್ಯ ಶೀಘ್ರ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಹೇಳಿದ್ದು, ಶೀಘ್ರ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಲಾಶಯದ ಕ್ರಸ್ಟ್‌ಗೇಟ್ ಬದಲಾವಣೆಯ ಮಹತ್ವದ ಕಾರ್ಯಕ್ಕೆ ನಾವು ತೆಗೆದುಕೊಂಡು ತೀರ್ಮಾನಕ್ಕೆ ಫಲ ನೀಡುವಂತಹ ಕೆಲಸ ಅಧಿಕಾರಿಗಳು ಮಾಡಿದ್ದಾರೆ ಎಂದರು.
ಸದ್ಯ ಜಲಾಶಯದಲ್ಲಿ 10.5 ಟಿಎಂಸಿ ನೀರಿದ್ದು, ಈಗ ಮಳೆ ಪ್ರಾರಂಭವಾದರೆ ಎರಡು ತಿಂಗಳಲ್ಲಿ ಸುಮಾರು 44 ಟಿಎಂಸಿ ನೀರು ಸಂಗ್ರಹವಾಗಲಿದೆ. ಕ್ರಸ್ಟ್‌ಗೇಟ್ ಅಳವಡಿಕೆ ದೊಡ್ಡ ಸವಾಲಾಗಿತ್ತು. ಈ ಕಾರ್ಯ ಯಶಸ್ವಿಯಾಗಿ ನಡೆಸಿ ನಾವು ದೇಶಕ್ಕೆ ಮಾದರಿಯಾಗಿದ್ದೇವೆ. ಇದರಿಂದ ಇಂದು ದೇಶವೇ ನಮ್ಮ ರಾಜ್ಯದತ್ತ ತಿರುಗಿ ನೋಡುತ್ತಿದೆ ಎಂದರು.
ಕಳೆದ ಎರಡು ವರ್ಷಗಳ ಹಿಂದೆ ತುಂಗಭದ್ರಾ ಜಲಾಶಯದ ಗೇಟ್ ಸಂಖ್ಯೆ-19 ಕೊಚ್ಚಿ ಹೋಗಿತ್ತು. ಈ ಬಗ್ಗೆ ಸಚಿವರು, ಶಾಸಕರು ಮಾಹಿತಿ ನೀಡಿದ ಮರುದಿನವೇ ನಾನು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಕನ್ನಯ್ಯ ನಾಯ್ಡು ಅವರೊಂದಿಗೆ ಚರ್ಚಿಸಿ, ಗೇಟ್ ಅಳವಡಿಕೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು ಎಂದರು.
ತಜ್ಞರ ವರದಿಯಂತೆ ಕ್ರಸ್ಟ್‌ಗೇಟ್ ಅಳವಡಿಕೆ ಕಾರ್ಯದಿಂದ ಅಣೆಕಟ್ಟಿನ ಆಯಸ್ಸು ಮುಂದಿನ 50 ವರ್ಷಗಳ ವರೆಗೆ ವೃದ್ಧಿಸಲಿದೆ. ತಜ್ಞರ ವರದಿಯಂತೆ ಹೊಸ ಚೈನ್ ಅಳವಡಿಸಲು ನಿರ್ಧರಿಸಿದ್ದು, ಮೊದಲ ಸೆಟ್ ಹೊಸ ಚೈನ್ ಮೇ 7ರಂದು ಆಗಮಿಸಲಿದೆ. ಮೇ ಅಂತ್ಯದೊಳಗೆ ಚೈನ್ ಅಳವಡಿಕೆ ಕಾರ್ಯ ಸಂಪೂರ್ಣ ಮುಗಿಯಲಿದೆ ಎಂದರು.
ತುಂಗಭದ್ರಾ ಅಣೆಕಟ್ಟಿನ ಸುತ್ತಲಿನ ಕೈಗಾರಿಕೆಗಳಿಂದ ರಾಸಾಯನಿಕಯುಕ್ತ ನೀರು ಅಣೆಕಟ್ಟನ್ನು ಸೇರುತ್ತಿರುವ ಬಗ್ಗೆ ವರದಿ ಬಂದಿದ್ದು, ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಜನರ ಆರೋಗ್ಯ ಮತ್ತು ಬೆಳೆಗಳ ರಕ್ಷಣೆ ಸರ್ಕಾರದ ಆದ್ಯತೆಯಾಗಿದೆ ಎಂದರು.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ, ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ, ಸಂಸದ ಕೆ. ರಾಜಶೇಖರ ಬಸವರಾಜ ಹಿಟ್ನಾಳ, ಬಳ್ಳಾರಿ ಸಂಸದ ಇ. ತುಕಾರಾಂ, ಶಾಸಕರಾದ ಎಚ್.ಆರ್. ಗವಿಯಪ್ಪ, ಎಂ.ಪಿ. ಲತಾ, ಡಾ. ಎನ್.ಟಿ. ಶ್ರೀನಿವಾಸ, ಅನ್ನಪೂರ್ಣಾ ತುಕಾರಾಂ, ಮಾಜಿ ಸಚಿವರಾದ ಅಮರೇಗೌಡ ಪಾಟೀಲ ಬಯ್ಯಾಪುರ, ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ವಿಜಯನಗರ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಜಿಪಂ ಸಿಇಒ ನೋಂಗ್ಜಾಯ್ ಮೋಹಮ್ಮದ್ ಅಲಿ ಅಕ್ರಮ್ ಷಾ, ಎಸ್ಪಿ ಎಸ್. ಜಾಹ್ನವಿ, ಕೊಪ್ಪಳ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಕೊಪ್ಪಳ ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ಆರ್. ಹೇಮಂತ್ ಕುಮಾರ್, ಟಿಬಿ ಬೋರ್ಡ್ ಹಾಗೂ ಕೆ.ಎನ್.ಎನ್.ಎಲ್. ಅಧಿಕಾರಿ, ಟಿಬಿ ಬೋರ್ಡ್ ಕಾರ್ಯದರ್ಶಿ ಒ.ಆರ್.ಕೆ. ರೆಡ್ಡಿ, ಮುಖ್ಯ ಎಂಜಿನಿಯರ್ ಶ್ರೀನಿವಾಸ ಮಲ್ಲಿಗಿವಾಡ, ಎಸ್.ಇ. ನಾರಾಯಣ ನಾಯ್ಕ, ಇಇ ನಾಗನಾಥ, ಎಇಇ ಧರ್ಮರಾಜ್ ಹಾಗೂ ಜ್ಞಾನೇಶ್ವರ, ಎಇಇ ಜಾನಕಾರ, ಶಾಖಾ ಅಧಿಕಾರಿಗಳಾದ ಜಿ. ಕಿರಣ, ಪಂಪಾಪತಿ ಡಿ.ಕೆ. ಮತ್ತು ಹುಲಿರಾಜ್ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.