ಸಂಡೂರು: ಬಿಜೆಪಿ ಸರ್ಕಾರ ಕೋವಿಡ್ ಸಮಯದಲ್ಲಿ ಹೆಣದ ಮೇಲೆ ಹಣ ಲೂಟಿ ಮಾಡಿತ್ತು. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಇಡೀ ಬಳ್ಳಾರಿ ಜಿಲ್ಲೆ ಜನ ಭಯದಿಂದ ಜೀವನ ಮಾಡುತ್ತಿದ್ದರು. ಈಗ ಜಿಲ್ಲೆ ಜನ ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಆಡಳಿತ ಹೇಗಿತ್ತು ಎಂದು ನೀವು ನೋಡಿದ್ದೀರಿ. ಕೋವಿಡ್ ಸಮಯದಲ್ಲಿ ಹೆಣದ ಮೇಲೆ ಹಣ ಹೊಡೆದರು. ಕೋವಿಡ್ ಸಮಯದಲ್ಲಿ ಯಾವುದೇ ಸಮುದಾಯಕ್ಕೆ ಬಿಜೆಪಿ ಸರ್ಕಾರ ನೆರವು ನೀಡಲಿಲ್ಲ. ನಿರ್ಮಲಾ ಸೀತಾರಾಮನ್ ಅವರು ₹20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದರು. ಅದರಲ್ಲಿ ನಿಮಗೆ ಯಾವುದಾದರೂ ಬಂತಾ? ಬಡವರಿಗೆ ಸಹಾಯ ಮಾಡದಿದ್ದರೆ ಅಂತಹ ಸರ್ಕಾರ ಯಾಕೆ ಬೇಕು? ಕೋವಿಡ್ ಅಕ್ರಮದ ವರದಿ ಬಂದಿದೆ. ಅದನ್ನು ನೋಡಿ ನನಗೆ ಕೋವಿಡ್ ಬಂದಷ್ಟು ಭಯವಾಗಿದೆ ಎಂದು ಹೇಳಿದರು.
ಸಂಡೂರು ನೆಮ್ಮದಿ ಕ್ಷೇತ್ರಈ ಹಿಂದೆ ಬಳ್ಳಾರಿ ಜನ ಭಯದಿಂದ ಬದುಕು ನಡೆಸುವ ಪರಿಸ್ಥಿತಿ ಇತ್ತು. ಸಿದ್ದರಾಮಯ್ಯ ಅವರು ಬಂದರೆ ಅಧಿಕಾರಿಗಳ ಭೇಟಿಗೂ ಅವಕಾಶ ನೀಡುತ್ತಿರಲಿಲ್ಲ. ಆಗ ನಾನು, ಸಿದ್ದರಾಮಯ್ಯ, ಇತರ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡಿದೆವು. ನಾನು ಕೂಡ ಈ ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಿದ್ದೆ. ನಿಮ್ಮ ಊರನ್ನು ನ್ಯೂಯಾರ್ಕ್, ಬೀಜಿಂಗ್ ಮಾಡುತ್ತೇವೆ ಎಂದು ನಾನು ಹೇಳುವುದಿಲ್ಲ. ನೀವು ನೆಮ್ಮದಿಯ ಬದುಕು ಸಾಗಿಸಬೇಕು. ಅದು ನಮ್ಮ ಗುರಿ. ಬಳ್ಳಾರಿ ಜಿಲ್ಲೆಯಲ್ಲಿ ಸಂಡೂರನ್ನು ನೆಮ್ಮದಿಯಾಗಿ ಬದುಕು ನಡೆಸುವ ಕ್ಷೇತ್ರವನ್ನಾಗಿ ಮಾಡಿದ್ದೇವೆ ಎಂದರು.
"ನಾನು ಕನಕಪುರ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿಗಿಂತ ಹೆಚ್ಚು ಕೆಲಸವನ್ನು ತುಕಾರಾಂ ಅವರು ಸಂಡೂರು ಕ್ಷೇತ್ರದಲ್ಲಿ ಮಾಡಿ, ಇಲ್ಲಿನ ಜನರ ಮನ ಗೆದ್ದಿದ್ದಾರೆ " ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಬಣ್ಣಿಸಿದರು.
ತುಕಾರಾಂ ಸೋಲಿಲ್ಲದ ಸರದಾರ
ನೀವೆಲ್ಲರೂ ವಿದ್ಯಾವಂತರು, ಬುದ್ಧಿವಂತರು ಹಾಗೂ ಪ್ರಜ್ಞಾವಂತರಿದ್ದೀರಿ. ಈ ಹಿಂದೆ ಜಿಲ್ಲೆ ಹಾಗೂ ರಾಜ್ಯಕ್ಕೆ ಯಾವ ಪರಿಸ್ಥಿತಿ ಬಂದಿತ್ತು ಎಂದು ನಿಮಗೆ ಅರ್ಥವಾಗಿದೆ. ಸಂಡೂರಿನ ಜನತೆ ಎಲ್ಲ ಕಾಲದಲ್ಲೂ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದ ಜನರಿಗಾಗಿ ನಮ್ಮ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು 371ಜೆ ಮೂಲಕ ವಿಶೇಷ ಸ್ಥಾನಮಾನ ನೀಡಿ, ನಿಮಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ಈ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದೆ ಇಟ್ಟಾಗ, ಇದು ಸಾಧ್ಯವಿಲ್ಲ ಎಂದು ಲಾಲ್ ಕೃಷ್ಣ ಆಡ್ವಾಣಿ ಅವರು ಹೇಳಿದರು. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಖರ್ಗೆಯವರು ಸೋನಿಯಾ ಗಾಂಧಿ ಹಾಗೂ ಇತರೆ ಮೈತ್ರಿ ಪಕ್ಷಗಳ ನಾಯಕರನ್ನು ಒಪ್ಪಿಸಿ ನಿಮಗೆ 371 ಜೆ ಜಾರಿಗೊಳಿಸಿ ಶಕ್ತಿ ತುಂಬಿದರು. ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಕೊಡಿಸಿ, ಈ ಭಾಗದ ಯುವಕರ ಭವಿಷ್ಯ ಉಜ್ವಲಗೊಳಿಸಿದರು. ತುಕಾರಾಂ ಅವರು ತಮಗೆ ಸಿಕ್ಕ ಅವಕಾಶ ಬಳಸಿಕೊಂಡು ನಿಮ್ಮ ಹೃದಯ ಗೆದ್ದಿದ್ದಾರೆ ಎಂದು ನನಗೆ ಬಹಳ ಸಂತೋಷವಿದೆ ಎಂದರು.
ಬಿಜೆಪಿ ಸರ್ಕಾರದ ದುರಾಡಳಿತದಿಂದ ನೀವು ಕಷ್ಟಕ್ಕೆ ಸಿಲುಕಿದಾಗ, ನಿಮ್ಮ ಬದುಕು ಬದಲಾವಣೆ ಮಾಡಲು ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತು. ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳು ನಿಮ್ಮ ಬದುಕಿನಲ್ಲಿ ಆರ್ಥಿಕ ಶಕ್ತಿ ತುಂಬಿವೆ. ಈ ಯೋಜನೆಗಳಿಂದ ಬಡವರಿಗೆ ಪ್ರತಿ ತಿಂಗಳು ಸುಮಾರು ₹5 ಸಾವಿರ ಉಳಿತಾಯವಾಗುವಂತೆ ಮಾಡಿದ್ದೇವೆ. ರಾಜ್ಯದಲ್ಲಿ 1.21 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳು ₹2 ಸಾವಿರ ನೀಡಲಾಗುತ್ತಿದೆ. ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಿದ್ದೇವೆ. ಇನ್ನು ಬ್ಯಾಂಕ್ ರಾಷ್ಟ್ರೀಕರಣ, ಉಳುವವನಿಗೆ ಭೂಮಿ, ನರೇಗಾ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ ಎಂದು ಹೇಳಿದರು.
ಮುಂದಿನ ಅವಧಿಗೂ ಕಾಂಗ್ರೆಸ್
ಕಾಂಗ್ರೆಸ್ ಸರ್ಕಾರ 136 ಸ್ಥಾನಗಳನ್ನು ಹೊಂದಿದ್ದು, ಈ ಬಳ್ಳಾರಿಯ 5 ಕ್ಷೇತ್ರಗಳು ಹಾಗೂ ಲೋಕಸಭೆ ಸ್ಥಾನ ಗೆದ್ದಿದ್ದೇವೆ. ಮುಂದಿನ ಅವಧಿಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ಇದಕ್ಕೆ ನೀವು ಆಶೀರ್ವಾದ ಮಾಡಬೇಕು. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ನೀವು ಅನ್ನಪೂರ್ಣಾ ಅವರಿಗೆ ಆಶೀರ್ವಾದ ಮಾಡಿ ಇಡೀ ಸರ್ಕಾರ ಅವರಿಗೆ ಬೆಂಬಲವಾಗಿ ನಿಂತು ನಿಮ್ಮ ಸೇವೆ ಮಾಡಲಿದೆ. ನಾವು ಇದುವರೆಗೆ ನಿಮಗೆ ಮಾಡಿರುವ ಅಲ್ಪಸ್ವಲ್ಪ ಸೇವೆಗೆ ಕೂಲಿ ಕೇಳುತ್ತಿದ್ದೇವೆ ಎಂದು ಮತಯಾಚಿಸಿದರು.ಎಫ್ಐಆರ್ ಬಗ್ಗೆ ಮಾಹಿತಿ ಇಲ್ಲ
ತನಿಖಾಧಿಕಾರಿಗಳ ವಿರುದ್ಧ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ವಿರುದ್ಧದ ಎಫ್‌ಐಆರ್ ಬಗ್ಗೆ ಕೇಳಿದಾಗ, "ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಕಾನೂನು ಏನಿದೆಯೋ ಗೊತ್ತಿಲ್ಲ. ನಾನಾಗಲಿ ನಮ್ಮ ಸರ್ಕಾರವಾಗಲಿ ಚರ್ಚೆ ಮಾಡುವ ವಿಚಾರವಿಲ್ಲ " ಎಂದರು.ಇದರ ಹಿಂದಿರುವವರ ವಿರುದ್ಧ ನಾವು ಪ್ಲಾನ್ ಮಾಡುತ್ತೇವೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಅವರಿಗೆ ಒಳ್ಳೆಯದಾಗಲಿ " ಎಂದರು. ಡಿ.ಕೆ. ಶಿವಕುಮಾರ್ 16 ತಿಂಗಳಲ್ಲಿ ಚನ್ನಪಟ್ಟಣಕ್ಕೆ ಏನು ಮಾಡಿದ್ದಾರೆ ಎಂದು ಪಟ್ಟಿ ನೀಡಲಿ ಎಂಬ ಆರ್. ಅಶೋಕ್ ಅವರ ಟೀಕೆ ಬಗ್ಗೆ ಕೇಳಿದಾಗ, "ಆಯ್ತು, ಅವರಿಗೆ ಪಟ್ಟಿ ನೀಡುತ್ತೇನೆ " ಎಂದರು.