ಹೊಸಪೇಟೆ: ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಒಳ ಹರಿವು ಭಾರಿ ಏರಿಕೆಯಾಗಿದ್ದು, ಜಲಾಶಯದಲ್ಲಿ 39.718 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ ಒಳಹರಿವು 63 ಸಾವಿರ ಕ್ಯುಸೆಕ್ ಇದ್ದು, ಚಿಕ್ಕಮಗಳೂರು, ತೀರ್ಥಹಳ್ಳಿ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯದ ಒಳಹರಿವು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ತುಂಗಭದ್ರಾ ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 105.788 ಟಿಎಂಸಿ ಇದ್ದು, ಈಗಾಗಲೇ ಜಲಾಶಯದಲ್ಲಿ 39.718 ಟಿಎಂಸಿ ನೀರು ಸಂಗ್ರಹವಾಗಿದೆ. ಹಾಗಾಗಿ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಕರೆದು ರೈತರ ಗದ್ದೆಗಳಿಗೆ ನೀರು ಹರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಕಳೆದ ವರ್ಷ ಇದೇ ದಿನ 9.988 ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ಬಾರಿ ಜಲಾಶಯ ಭರ್ತಿಯಾಗಿ ಎರಡು ಬೆಳೆಗಳಿಗೆ ನೀರು ದೊರೆಯಲಿದೆ ಎಂಬ ಆಶಾಭಾವದಲ್ಲಿ ರೈತರು ಇದ್ದಾರೆ. ಈಗ ಜಲಾಶಯದಲ್ಲಿ ನೀರು ಹರಿದು ಬರುತ್ತಿರುವುದರಿಂದ ರೈತರು ಖುಷಿಯಾಗಿದ್ದಾರೆ.