ಧಾರವಾಡ:
ಜಿಲ್ಲಾ ಪಂಚಾಯಿತಿಯಲ್ಲಿ ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯವು ಆಯೋಜಿಸಿದ್ದ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಕುರಿತ ಕಾರ್ಯಾಗಾರ ಉದ್ಘಾಟಿಸಿದ ಅವರು, ವಿಶೇಷ ನ್ಯಾಯಾಲಯದಲ್ಲಿ ಈ ವರೆಗೆ 23,646 ಪ್ರಕರಣ ದಾಖಲಾಗಿವೆ. ಇವುಗಳ ಪೈಕಿ 18,601 ಪ್ರಕರಣ ಇತ್ಯರ್ಥ ಪಡಿಸಿ ಆದೇಶಿಸಲಾಗಿದೆ ಎಂದರು.ವಿವಿಧ ಪ್ರಕರಣಗಳಲ್ಲಿ ವಿಚಾರಣೆ ಮಾಡಿ ಒತ್ತುವರಿ, ಅತಿಕ್ರಮಣವಾಗಿ 3,923 ಎಕರೆ ಸರ್ಕಾರಿ ಭೂಮಿಯನ್ನು ಮರಳಿ ಸರ್ಕಾರದ ವಶಕ್ಕೆ ನೀಡಿ ಆದೇಶಿಸಲಾಗಿದೆ. ಭೂಮಿ ಕಬಳಿಸಿದ್ದ ಒಟ್ಟು 84 ಜನರಿಗೆ ಒಂದು ವರ್ಷದ ಶಿಕ್ಷೆ ಹಾಗೂ ದಂಡ ವಿಧಿಸಿ, ಆದೇಶಿಸಲಾಗಿದೆ ಎಂದು ನ್ಯಾಯಮೂರ್ತಿ ಬಿ.ಎ. ಪಾಟೀಲ ತಿಳಿಸಿದರು.
ಸರ್ಕಾರಿ ಆಸ್ತಿ ಸಂರಕ್ಷಣೆಯಲ್ಲಿ ಕ್ಷೇತ್ರಮಟ್ಟದಲ್ಲಿ ಕಾರ್ಯನಿರ್ವಹಿಸುವ ಗ್ರಾಮ ಆಡಳಿತ ಅಧಿಕಾರಿಗಳ ಪಾತ್ರ ಬಹು ಮುಖ್ಯ. ಯಾವ ಗ್ರಾಮದಲ್ಲಿ ಎಷ್ಟು ಸರ್ಕಾರಿ ಭೂಮಿ ಇದೆ ಎಂಬುದು ಅವರಿಗೆ ಗೊತ್ತು. ಅವರ ತಕ್ಷಣದ ಮಾಹಿತಿ, ವರದಿ ಮುಖ್ಯ ಎಂದ ಅವರು, ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ ಅಧಿನಿಯಮಗಳನ್ನು ಸರಿಯಾಗಿ ಅನುಷ್ಠಾನ ಮಾಡದಿದ್ದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳು ಜವಾಬ್ದಾರರಾಗುತ್ತಾರೆ. ವಿಚಾರಣೆಯಲ್ಲಿ ಅವರಿಗೂ ಶಿಕ್ಷೆ ಆಗಬಹುದು. ಆದ್ದರಿಂದ ಸರ್ಕಾರದ ಆಸ್ತಿ, ಭೂಮಿ, ಖಾಲಿ ಜಾಗೆಗಳ ಬಗ್ಗೆ ಗ್ರಾಮ ಹಾಗೂ ವಾರ್ಡ್ ಮಟ್ಟದಲ್ಲಿ ಕೆಲಸ ಮಾಡುವ ಅಧಿಕಾರಿ, ಸಿಬ್ಬಂದಿಗಳು ಸದಾ ಕಾಲ ನಿಗಾವಹಿಸಬೇಕು. ಒತ್ತುವರಿ, ಅತಿಕ್ರಮಣ ಕಂಡು ಬಂದಲ್ಲಿ ತಮ್ಮ ಮೇಲಾಧಿಕಾರಿಗಳಿಗೆ ತಕ್ಷಣ ವರದಿ ನೀಡಬೇಕು. ಹಿರಿಯ ಅಧಿಕಾರಿಗಳು ನಮೂನೆಯಲ್ಲಿ ವಿಶೇಷ ನ್ಯಾಯಾಲಯಕ್ಕೆ ವರದಿ ದಾಖಲಿಸಬೇಕು ಎಂದು ಹೇಳಿದರು.ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಲಭ್ಯವಿರುವ ಸರ್ಕಾರಿ ಜಮೀನು, ಆಸ್ತಿಗಳ ಪೈಕಿ ಶೇ. 95ರಷ್ಟು ಆಸ್ತಿಗಳ ಸರ್ವೇ ಲ್ಯಾಂಡ್ ಬಿಟ್ ಆ್ಯಪ್ ಮೂಲಕ ಮಾಡಲಾಗಿದೆ. ಇದರೊಂದಿಗೆ ಆರ್‌ಟಿಸಿಯೊಂದಿಗೆ ಆಧಾರ್ ಜೋಡಣೆ ಕಾರ್ಯವು ಶೇ. 85ರಷ್ಟು ಪೂರ್ಣಗೊಂಡಿದೆ. ಅನೇಕ ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸ್ವಾಗತಿಸಿದರು. ವಿಶೇಷ ನ್ಯಾಯಾಲಯದ ವಿಲೇಖನಾಧಿಕಾರಿ ಎಚ್.ಕೆ. ನವೀನ್ ವಂದಿಸಿದರು. ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯದ ಕಂದಾಯ ಸದಸ್ಯ ಎಸ್. ಪಾಲಯ್ಯ, ಕೆ.ಎಚ್. ಅಶ್ವತನಾರಾಯಣಗೌಡ, ನ್ಯಾಯಿಕ ಸದಸ್ಯ ಪಾಟೀಲ ನಾಗಲಿಂಗನಗೌಡ ಮತ್ತಿತರರು ಇದ್ದರು.