ಜನ ಶಕ್ತಿ ನೀಡಿದರೆ 3ನೇ ರಾಜಕೀಯ ಪಕ್ಷ : ಸಿ.ಎಂ.ಇಬ್ರಾಹಿಂ

KannadaprabhaNewsNetwork | Published : May 19, 2025 2:10 AMUpdated   : May 19 2025, 12:25 PM IST
4.ರಾಮನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ ನವಕರ್ನಾಟಕ ನಿರ್ಮಾಣ ಆಂದೋಲನ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಜನರ ನಡುವೆ ಜನತಾ ಪ್ರಣಾಳಿಕೆ ಚರ್ಚೆ ಸಮಾರಂಭವನ್ನು ಸಿ.ಎಂ.ಇಬ್ರಾಹಿಂ ಉದ್ಘಾಟಿಸಿದರು. | Kannada Prabha

ಸಾರಾಂಶ

: ನಾಡಿನ ಜನರು ಶಕ್ತಿ ನೀಡಿದರೆ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮಿತ್ರ ಪಕ್ಷಗಳಿಗೆ ಪರ್ಯಾಯವಾಗಿ ರಾಜಕೀಯದಲ್ಲಿ ಮೂರನೇ ಶಕ್ತಿ ಕಟ್ಟುತ್ತೇವೆ ಎಂದು ಕೇಂದ್ರ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದರು.

ರಾಮನಗರ: ನಾಡಿನ ಜನರು ಶಕ್ತಿ ನೀಡಿದರೆ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮಿತ್ರ ಪಕ್ಷಗಳಿಗೆ ಪರ್ಯಾಯವಾಗಿ ರಾಜಕೀಯದಲ್ಲಿ ಮೂರನೇ ಶಕ್ತಿ ಕಟ್ಟುತ್ತೇವೆ ಎಂದು ಕೇಂದ್ರ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನವಕರ್ನಾಟಕ ನಿರ್ಮಾಣ ಆಂದೋಲನ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಜನರ ನಡುವೆ ಜನತಾ ಪ್ರಣಾಳಿಕೆ ಚರ್ಚೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಿನ ಸರ್ಕಾರಕ್ಕೆ ಜನರ ಮೇಲೆ ಒಲವಿಲ್ಲ. ದುಡ್ಡು ಮಾಡುವುದು, ಚುನಾವಣೆ ಗೆಲ್ಲುವುದಷ್ಟೇ ಗೊತ್ತು. ಮುಂದಿನ ಚುನಾವಣೆಗಳಲ್ಲಿ ಜನರು ಜಾತಿ ನೋಡಿ ಮತ ಹಾಕಬಾರದು. ನೀವು ನಮಗೆ ಶಕ್ತಿ ನೀಡಿದರೆ ಕರ್ನಾಟಕದ ರಾಜಕೀಯದಲ್ಲಿ ತೃತೀಯ ಶಕ್ತಿ ಕಟ್ಟುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿ ನಮಗೆ ಐದು ವರ್ಷ ಆಡಳಿತ ನಡೆಸಲು ಅಧಿಕಾರ ಸಿಕ್ಕರೆ ರಾಜಕಾರಣಿಗಳು ಅಕ್ರಮವಾಗಿ ಸಂಪಾದಿಸಿರುವ ಆಸ್ತಿಯನ್ನು ಸರ್ಕಾರಕ್ಕೆ ಸೇರುವಂತೆ ಮುಟ್ಟುಗೋಲು ಹಾಕಿಕೊಳ್ಳುತ್ತೇವೆ. ಆ ಮೂಲಕ 50 ವರ್ಷ ಹಿಂದಿದ್ದಷ್ಟು ಆಸ್ತಿಯನ್ನು ರಾಜಕಾರಣಿಗಳಿಗೆ ನೀಡಿ ಉಳಿದಿದ್ದನ್ನು ಸರ್ಕಾರಕ್ಕೆ ಪಡೆದುಕೊಳ್ಳುತ್ತೇವೆ. ಇದು ಸಾಧ್ಯವಾದರೆ ಹೊಸ ತೆರಿಗೆಗಳನ್ನು ವಿಧಿಸುವ ಅಗತ್ಯವೇ ಇರುವುದಿಲ್ಲ ಎಂದು ಹೇಳಿದರು.

1977ರಲ್ಲಿ ನಾನು ಮೊದಲು ಶಾಸಕನಾದಾಗ 4,500 ರು. ಖರ್ಚಾಗಿತ್ತು. ಈಗ ಮಹಾತ್ಮಗಾಂಧಿಯವರೇ ಬಂದು ಚುನಾವಣೆಗೆ ನಿಂತರೂ ಶಾಸಕನಾಗಲು 10 ಕೋಟಿಯೂ ಸಾಲುವುದಿಲ್ಲ. ಸಮಾಜದಲ್ಲಿನ ವ್ಯವಸ್ಥೆಯನ್ನು ರಾಜಕಾರಣಿಗಳು ಹಾಳು ಮಾಡಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ರಾಜಕಾರಣಿಗಳಿಂದ ವಕೀಲರಿಗೆ ಲಾಭವಾಗುತ್ತಿದೆ ಎಂದರು.

ನಾನು ಜನತಾದಳದ ಅಧ್ಯಕ್ಷನಾಗಿದ್ದಾಗ ಕುಮಾರಸ್ವಾಮಿ ಗೆದ್ದಿದ್ದರು, ಜನತಾದಳ ಅಧಿಕಾರಕ್ಕೆ ಬಂದಿತ್ತು. ದೇವೇಗೌಡರು ಪ್ರಧಾನಿಯಾದರು. ಆದರೆ ದುರ್ದೈವ ದೇವೇಗೌಡರಿಗೆ ಪುತ್ರರ ಮೇಲಿನ ವಾತ್ಸಲ್ಯ ಸಮಾಜದ ಮೇಲೆ ಇದ್ದಿದ್ದರೆ ಅವರು ಇಂದು ಮಹಾತ್ಮಗಾಂಧಿಯಾಗುತ್ತಿದ್ದರು. ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ 156 ಕೋಟಿ ಹಣ ಖರ್ಚು ಮಾಡಿ, ದೇವೇಗೌಡರು 23 ಕಡೆ ಭಾಷಣ ಮಾಡಿಯೂ ಕುಮಾರಸ್ವಾಮಿ ತಾನು ಕೇಂದ್ರ ಸಚಿವನಾಗಿಯೂ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ ಎಂದು ಟೀಕಿಸಿದರು.

ದೇಶದಲ್ಲಿ ಇವಿಎಂ ವ್ಯವಸ್ಥೆಯನ್ನು ರದ್ದು ಮಾಡಿ, ಮತ್ತೆ ಬ್ಯಾಲೆಟ್ ಪೇಪರ್ ವ್ಯವಸ್ಥೆಯನ್ನು ಚುನಾವಣೆಗಳಲ್ಲಿ ಜಾರಿಗೆ ತರಬೇಕು. ಬೇರೆ ಯಾವುದೇ ದೇಶಗಳಲ್ಲಿ ಇವಿಎಂ ವ್ಯವಸ್ಥೆ ಇಲ್ಲ. ಇವಿಎಂ ವ್ಯವಸ್ಥೆಯನ್ನು ಬದಲಾಯಿಸುವವರೆಗೆ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆಂದು ರಾಜಕೀಯ ಪಕ್ಷಗಳ ನಾಯಕರು ತಿಳಿಸಬೇಕು ಎಂದು ಇಬ್ರಾಹಿಂ ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಭೂಗಳ್ಳರು ಬಿಡದಿ ಸುತ್ತಮುತ್ತ ಭೂಮಿ ಲಪಟಾಯಿಸಲು ಮುಗಿ ಬಿದ್ದಿದ್ದಾರೆ. 2819 ಎಕರೆ ಸರ್ಕಾರಿ ಭೂಮಿಯನ್ನು ಕಬಳಿಸುವುದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದೆ. ದೇವೇಗೌಡರು ಮೊದಲು ನೈಸ್ ಕಂಪನಿಗೆ ಆಪ್ತರಾಗಿದ್ದರು. ಈಗ ಆ ಕಂಪನಿಯಲ್ಲಿ ಡಿ.ಕೆ.ಶಿವಕುಮಾರ್ ಷೇರಿದೆ. ನೈಸ್ ಕಂಪನಿಯ ವಿಚಾರವಾಗಿ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಮಧ್ಯೆ ಉಂಟಾದ ಜಗಳದಿಂದಾಗಿ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಪತನವಾಯಿತು. ದೇವೇಗೌಡರು, ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಸೇರಿದಂತೆ ಯಾರೇ ಆಗಲಿ ರೈತರ ಪರವಾಗಿ ಕೆಲಸ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಆಲ್ ಇಂಡಿಯಾ ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಆರ್‌ಪಿಐ ರಾಷ್ಟ್ರೀಯ ಅಧ್ಯಕ್ಷ ಎನ್. ಮೂರ್ತಿ, ಎಐಬಿಎಸ್ ಪಿ ಪ್ರಧಾನ ಕಾರ್ಯದರ್ಶಿ ಬಿ.ಅನ್ನದಾನಪ್ಪ, ಎಂ.ನಾಗೇಶ್, ಎಂ. ಗೋಪಿನಾಥ್, ಆರ್.ಮುನಿಯಪ್ಪ, ಅರುಣ್ ಕುಮಾರ್, ಗೌರಮ್ಮ, ರೈತ ಸಂಘದ ಜಿಲ್ಲಾದ್ಯಕ್ಷ ಎ.ಎಲ್.ಬೈರೇಗೌಡ, ಗೌರವಾಧ್ಯಕ್ಷ ಮಾದೇಗೌಡ ದೊಡ್ಡಗಂಗವಾಡಿ ಉಪಸ್ಥಿತರಿದ್ದರು.

ಅಸ್ಪೃಶ್ಯತೆ, ಕೋಮುವಾದ ಹಾಗೂ ಜಾತಿವಾದ ದೇಶವನ್ನು ಹಿಂಡಿ ಹಿಪ್ಪೆ ಮಾಡಿದೆ. ಸಂಪತ್ತು ಹಾಗೂ ವಿದ್ಯಾಸಂಸ್ಥೆಗಳು ಮನುವಾದಿಗಳ ಕೈಯಲ್ಲಿರುವುದು ಹಾಗೂ ಆಳುವ ವರ್ಗಗಳ ಪಕ್ಷಪಾತ, ಭ್ರಷ್ಟಾಚಾರದಿಂದಾಗಿ ಬಡತನ ಉಳಿದಿದೆ. ಇಲ್ಲಿಯವರೆಗೆ ಆಳಿದ ಯಾವ ಸರ್ಕಾರಗಳು ಕೃಷಿಕರು, ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಸಹಕಾರಿಯಾಗುವ ರಚನಾತ್ಮಕ ಕಾರ್ಯಕ್ರಮಗಳನ್ನೇ ರೂಪಿಸಿಲ್ಲ.

-ಎನ್.ಮೂರ್ತಿ, ರಾಷ್ಟ್ರೀಯ ಅಧ್ಯಕ್ಷರು, ಆರ್‌ಪಿಐ(ಬಿ)

ರಾಜ್ಯ ಸರ್ಕಾರಗಳನ್ನು ರಾಷ್ಟ್ರೀಯ ಪಕ್ಷಗಳೇ ನಡೆಸುತ್ತಿವೆ. ಆ ಪಕ್ಷಗಳಿಗೆ ಫಂಡ್ ನೀಡಲು ಬಂಡವಾಳಗಾರರು

ಬೇಕು. ಆದ್ದರಿಂದಲೇ ಬಂಡವಾಳದಾರರಿಗೆ ಅನುಕೂಲವಾಗುವ ನೀತಿಗಳನ್ನು ರೂಪಿಸುತ್ತಾ ಬಂದಿವೆ. ರಸ್ತೆ , ಮೇಲ್ಸೇತುವೆ ನಿರ್ಮಾಣ ಮಾಡುವುದು ಅಭಿವೃದ್ಧಿ ಅಲ್ಲ. ಎಲ್ಲ ಜನರಿಗೂ ಶಿಕ್ಷಣ, ಆರೋಗ್ಯ ಸಿಗಬೇಕಿರುವುದೇ ನಿಜವಾದ ಅಭಿವೃದ್ಧಿ. ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳ ಮಕ್ಕಳು, ಮೊಮ್ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ, ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಆರೋಗ್ಯ ಸೇವೆ ಪಡೆಯುವುದನ್ನು ಕಡ್ಡಾಯ ಮಾಡಿದರೆ ಅವೆಲ್ಲವೂ ಉಳಿದು ಅಭಿವೃದ್ಧಿ ಹೊಂದುತ್ತವೆ.

- ಎಂ.ಗೋಪಿನಾಥ್, ರಾಷ್ಟ್ರೀಯ ಸಂಯೋಜಕರು, ಎಐಬಿಎಸ್‌ಪಿ

PREV
Read more Articles on