ಕನ್ನಡಪ್ರಭ ವಾರ್ತೆ ರೋಣ
ಪಟ್ಟಣದ ಕೆನರಾ ಬ್ಯಾಂಕಿನಲ್ಲಿನ ಖಾತೆದಾರ ಮುತ್ತಣ್ಣ ತೋಗುಣಸಿ ಎಂಬವರ ಅಕೌಂಟಕ್ ಹ್ಯಾಕ್ ಮಾಡಿ ಒಟ್ಟು ₹4,45,500 ವಂಚಿಸಿರುವ ಘಟನೆ ಮೇ 2ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಈ ಕುರಿತು ವಂಚನೆಗೊಳಗಾದ ಖಾತೆದಾರನಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ರೋಣ ತಾಲೂಕು ಘಟಕ ವತಿಯಿಂದ ತಹಸೀಲ್ದಾರ್ ಹಾಗೂ ರೋಣ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಹಣ ಕಳೆದುಕೊಂಡ ಖಾತೆದಾರ ಮುತ್ತಣ್ಣ ತೋಗುಣಸಿ ಮಾತನಾಡಿ, ರೋಣ ಪಟ್ಟಣದ ಕೆನರಾ ಬ್ಯಾಂಕ್‌ನಲ್ಲಿನ ನನ್ನ ಖಾತೆಯನ್ನು ಹ್ಯಾಕ್ ಮಾಡಿ, ಅದರಲ್ಲಿದ್ದ ಒಟ್ಟು ₹4,45,500ನ್ನು ಮೇ 2ರಂದು ವರ್ಗಾವಣೆ ಮಾಡಲಾಗಿದೆ. ಈ ಕುರಿತು ಕೆನರಾ ಬ್ಯಾಂಕ್ ವ್ಯವಸ್ಥಾಪಕರಿಗೆ ಮೇ 5ರಂದು ಮನವಿ ಸಲ್ಲಿಸಲಾಗಿದೆ. ಆದರೆ, ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಧ್ಯಾಕಾಲದಲ್ಲಿ ನೆರವಿಗೆ ಬರಲೆಂದು ನಿವೃತ್ತಿ ಹೊಂದಿದ ಬಳಿಕ ಬಂದಿದ್ದ ಹಣವನ್ನು ಬ್ಯಾಂಕ್‌ನಲ್ಲಿ ಕೂಡಿಡಲಾಗಿತ್ತು. ಆದರೆ, ಬ್ಯಾಂಕ್‌ನಲ್ಲಿಯೂ ನಮ್ಮ ಹಣ ಸುರಕ್ಷಿತವಾಗಿಲ್ಲ. ಹ್ಯಾಕ್ ಮಾಡಿ ಹಣ ಎಗರಿಸುತ್ತಾರೆ ಎಂದಾದಲ್ಲಿ ಉಳಿಕೆ ಹಣವನ್ನು ಎಲ್ಲಿ ಜಮಾ ಮಾಡಬೇಕು? ಕೂಡಲೇ ಈ ಕುರಿತು ಜಿಲ್ಲಾಧಿಕಾರಿ, ತಹಸೀಲ್ದಾರ್ ಮತ್ತು ಪೊಲೀಸ್ ಇಲಾಖೆ ನನಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಎ.ಎಸ್. ಖತೀಬ ಮಾತನಾಡಿದರು. ಉಪ ತಹಸೀಲ್ದಾರ್ ಜೆ.ಟಿ. ಕೊಪ್ಪದ ಮನವಿ ಸ್ವೀಕರಿಸಿದರು. ಬಳಿಕ ಸಂಘದ ಪದಾಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿದರು.
ಸಂಘದ ಗೌರವಾಧ್ಯಕ್ಷ ಎಲ್.ಎಸ್. ಹಂಚಿನಾಳ, ಉಪಾಧ್ಯಕ್ಷ ಬಿ.ಎಚ್. ನಾಯಕ, ಆರ್.ವೈ. ಮುರ್ಕಿ, ಕೆ.ಎಸ್. ಬಾರಕೇರ, ಎಂ.ಎಸ್. ಶೀಲವಂತರ, ಬಿ.ಪಿ. ಅತ್ತಿಗೇರಿ, ಡಿ.ಬಿ. ತಳವಾರ, ಎಂ.ಎನ್. ಹಾದಿಮನಿ, ಎಸ್.ಸಿ. ರಾಟಿಮನಿ ಮುಂತಾದವರು ಉಪಸ್ಥಿತರಿದ್ದರು.