ಹೂವಿನಹಡಗಲಿ: ಭದ್ರಾ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ತುಂಗಭದ್ರ ನದಿ ಪ್ರವಾಹ ಹೆಚ್ಚಾಗಿದ್ದು, ತಾಲೂಕಿನ ಕುರುವತ್ತಿಯ 4 ಮನೆಗಳಿಗೆ ನೀರು ನುಗ್ಗಿದೆ. ಗ್ರಾಮದ ಸಮುದಾಯ ಭವನದಲ್ಲಿ ಕಾಳಜಿ ಕೇಂದ್ರ ತೆರೆದು ಆ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ನದಿ ತೀರದ ಗ್ರಾಮಗಳ 400 ಎಕರೆಗೂ ಹೆಚ್ಚು ಬೆಳೆಗಳು ಜಲಾವೃತ್ತವಾಗಿದೆ. ಮಕರಬ್ಬಿ ಬ್ಯಾಲಹುಣ್ಸಿ ಗ್ರಾಮದ ನಡುವೆ ಸಂಪರ್ಕ ಕಡಿತವಾಗಿದೆ. ಇದರಿಂದ ಬ್ಯಾಲಹುಣ್ಸಿ, ನಂದಿಗಾವಿ ಗ್ರಾಮಸ್ಥರು ಬನ್ನಿಮಟ್ಟಿಯಿಂದ ಕತ್ತೆಬೆನ್ನೂರು ಮೂಲಕ ಬೇರೆ ಊರುಗಳಿಗೆ ತೆರಳಬೇಕಿದೆ.ತಹಸೀಲ್ದಾರ್ ಅಮರೇಶ ಹಾಗೂ ನೋಡಲ್ ಅಧಿಕಾರಿ ಆನಂದ್ ಡೊಳ್ಳಿನ್ ನೇತೃತ್ವದಲ್ಲಿ ಸಮುದಾಯ ಭವನದಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಜನರನ್ನು ಸ್ಥಳಾಂತರಿಸಲಾಗಿದೆ. ಮಕರಬ್ಬಿ ಬ್ಯಾಲಹುಣ್ಸಿ ಗ್ರಾಮದ ಮಧ್ಯದ ಹಳ್ಳದ ನದಿ ನೀರು ರಸ್ತೆ ಮೇಲೆ ಬಂದಿದ್ದು, ಇದರಿಂದ ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ಮಕರಬ್ಬಿಯಿಂದ ಬ್ಯಾಲಹುಣ್ಸಿ ಪ್ರೌಢಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ದಾರಿ ಇಲ್ಲದೇ ಮರಳಿ ಮನೆಗೆ ತೆರಳಿದ್ದಾರೆ.
ತುಂಗಭದ್ರಾ ನದಿ ತೀರದ ಹರವಿ, ಹರವಿ ಬಸಾಪುರ, ಲಿಂಗನಾಯಕನಹಳ್ಳಿ, ಕುರುವತ್ತಿ, ಮೈಲಾರ, ಬನ್ನಿಮಟ್ಟಿ, ನಂದಿಗಾವಿ, ಬ್ಯಾಲಹುಣ್ಸಿ, ಮಕರಬ್ಬಿ, ಕೋಟಿಹಾಳು, ಅಂಗೂರು, ಹೊಸಹಳ್ಳಿ ಗ್ರಾಮಗಳ 400 ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆದಿರುವ ಭತ್ತ, ಮೆಕ್ಕೆಜೋಳ, ಚೆಂಡು ಹೂವು ಸೇರಿದಂತೆ ಇತರೆ ಬೆಳೆಗಳು ಸಂಪೂರ್ಣ ಜಲಾವೃತ್ತವಾಗಿವೆ.ಪ್ರತಿ ಬಾರಿ ನದಿ ಪ್ರವಾಹ ಬಂದಾಗ ಇದೇ ರೀತಿ ಬೆಳೆಗಳಿಗೆ ನೀರು ನುಗ್ಗಿ, ಅಪಾರ ಹಾನಿ ಅನುಭವಿಸುತ್ತಿದ್ದೇವೆ, ಆದರೆ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಪರಿಹಾರ ನೀಡುತ್ತಿಲ್ಲ, ಇದರಿಂದ ಮತ್ತಷ್ಟು ಸಾಲದ ಶೂಲಕ್ಕೆ ಸಿಲುಕುತ್ತಿದ್ದೇವೆ. ಈ ಬಾರಿಯಾದರೂ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ನದಿ ತೀರದ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಇಲ್ಲಿನ ಸಿಂಗಟಾಲೂರು ಯೋಜನೆ ಬ್ಯಾರೇಜ್‌ಗೆ 2 ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ಒಳಹರಿವು ಇದ್ದು, 18 ಗೇಟ್ ಮೂಲಕ ಅಷ್ಟೇ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ.ಸಿಂಗಟಾಲೂರು ಬ್ಯಾರೇಜ್ ಕೆಳಗಿನ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಇಲ್ಲಿಯೂ ರೈತರ ಜಮೀನುಗಳಿಗೆ ನೀರು ನುಗ್ಗಿದೆ. ಮದಲಗಟ್ಟಿ ಆಂಜನೇಯ ದೇವಸ್ಥಾನದ ಸುತ್ತ ನೀರು ಆವರಿಸಿದೆ. ಇದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿದೆ. ನದಿ ತೀರಕ್ಕೆ ಭಕ್ತರು ಇಳಿಯದಂತೆ ತಾಲೂಕು ಆಡಳಿತ ಎಚ್ಚರಿಕೆ ನೀಡಿದೆ.
ನದಿ ನೋಡಲು ಮತ್ತು ದೇವರ ದರ್ಶನಕ್ಕಾಗಿ ಮಹಿಳೆಯರು, ಮಕ್ಕಳು ಬರುತ್ತಿದ್ದಾರೆ. ದೇವಸ್ಥಾನ ಬಾಗಿಲು ಮುಚ್ಚಲು ಸೂಚನೆ ನೀಡಲಾಗಿದೆ. ಈಗಾಗಲೇ ದೇವಸ್ಥಾನದ ಕಟ್ಟೆವರೆಗೂ ನೀರು ಬಂದಿದೆ. ಈ ಕುರಿತು ಅಧಿಕಾರಿಗಳು ಕ್ರಮ ವಹಿಸಿದ್ದಾರೆ.ಕುರುವತ್ತಿ 4 ಕುಟುಂಬಗಳ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದೆ. ಉಳಿದಂತೆ ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಸಮೀಕ್ಷೆಗೆ ಕ್ರಮ ವಹಿಸಲಾಗಿದೆ. ನದಿ ತೀರದ 10 ಗ್ರಾಮಗಳಲ್ಲಿ ನೋಡಲ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮದಲಗಟ್ಟಿ ಆಂಜನೇಯ ದೇಗುಲ ಬಂದ್ ಮಾಡಲು ಸೂಚಿಸಲಾಗಿದೆ ಎನ್ನುತ್ತಾರೆ ಹೂವಿನಹಡಗಲಿ ತಹಸೀಲ್ದಾರ ಅಮರೇಶ.
ಭದ್ರಾ ಜಲಾಶಯದಿಂದ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ಸಿಂಗಟಾಲೂರು ಬ್ಯಾರೇಜ್‌ಗೆ 199211 ಕ್ಯುಸೆಕ್ ನೀರು ಒಳಹರಿವು ಇದೆ. 18 ಗೇಟ್ ಮೂಲಕ ಅಷ್ಟೇ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ ಎನ್ನುತ್ತಾರೆ ಸಿಂಗಟಾಲೂರು ಏತ ನೀರಾವರಿ ಯೋಜನೆ ಹೂವಿನಹಡಗಲಿ ಎಇಇ ರಾಘವೇಂದ್ರ.