ಮೇಲ್ಮನೆಗೆ ಆರತಿ ಕೃಷ್ಣ ಸೇರಿ 4 ಎಂಎಲ್ಸಿ ನಾಮನಿರ್ದೇಶನ

KannadaprabhaNewsNetwork |  
Published : Sep 08, 2025, 01:00 AM IST
ವಿಧಾನಸೌಧ | Kannada Prabha

ಸಾರಾಂಶ

ರಾಜ್ಯದಲ್ಲಿ ಖಾಲಿ ಇರುವ ನಾಲ್ಕು ವಿಧಾನಪರಿಷತ್‌ ನಾಮನಿರ್ದೇಶಿತ ಸ್ಥಾನಗಳಿಗೆ ಏಳು ತಿಂಗಳ ಹಗ್ಗ ಜಗ್ಗಾಟದ ಬಳಿಕ ಕೊನೆಗೂ ನೇಮಕಾತಿ ಆದೇಶ ಹೊರಬಿದ್ದಿದ್ದು, ಡಾ.ಆರತಿ ಕೃಷ್ಣ, ಎಫ್‌.ಎಚ್.ಜಕ್ಕಪ್ಪನವರ್, ಕೆ.ಶಿವಕುಮಾರ್‌ ಹಾಗೂ ರಮೇಶ್ ಬಾಬು ಪರಿಷತ್‌ ಸದಸ್ಯರಾಗಿ ನೇಮಕಗೊಂಡಿದ್ದಾರೆ.

  ಬೆಂಗಳೂರು :  ರಾಜ್ಯದಲ್ಲಿ ಖಾಲಿ ಇರುವ ನಾಲ್ಕು ವಿಧಾನಪರಿಷತ್‌ ನಾಮನಿರ್ದೇಶಿತ ಸ್ಥಾನಗಳಿಗೆ ಏಳು ತಿಂಗಳ ಹಗ್ಗ ಜಗ್ಗಾಟದ ಬಳಿಕ ಕೊನೆಗೂ ನೇಮಕಾತಿ ಆದೇಶ ಹೊರಬಿದ್ದಿದ್ದು, ಡಾ.ಆರತಿ ಕೃಷ್ಣ, ಎಫ್‌.ಎಚ್.ಜಕ್ಕಪ್ಪನವರ್, ಕೆ.ಶಿವಕುಮಾರ್‌ ಹಾಗೂ ರಮೇಶ್ ಬಾಬು ಪರಿಷತ್‌ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಈ ಪೈಕಿ ರಮೇಶ್ ಬಾಬು ಅವರು ಸಿ.ಪಿ.ಯೋಗೇಶ್ವರ್‌ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಾಮನಿರ್ದೇಶನಗೊಂಡಿದ್ದಾರೆ. ಹೀಗಾಗಿ ಅವರ ಪರಿಷತ್ ಸದಸ್ಯತ್ವ ಅವಧಿ 11 ತಿಂಗಳು ಮಾತ್ರ ಇರಲಿದೆ. ಪಕ್ಷ ಮರು ನಾಮನಿರ್ದೇಶನ ಮಾಡಿದರೆ ಮಾತ್ರ ಬಳಿಕವೂ ಅವರು ಆ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

ರಾಜ್ಯ ಕಾಂಗ್ರೆಸ್‌ನಿಂದ ಹೈಕಮಾಂಡ್‌ಗೆ ಶಿಫಾರಸಾದ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಡಿ.ಜಿ.ಸಾಗರ್‌ ಹಾಗೂ ದಿನೇಶ್ ಅಮಿನ್‌ಮಟ್ಟು ಹೆಸರು ಕೈಬಿಟ್ಟು ಅವರ ಬದಲು ಎಫ್‌.ಎಚ್‌. ಜಕ್ಕಪ್ಪನವರ್‌, ಕೆ.ಶಿವಕುಮಾರ್‌ ಹೆಸರನ್ನು ಹೈಕಮಾಂಡ್‌ ಅಂತಿಮಗೊಳಿಸಿತ್ತು.

ಇದರಂತೆ ಡಾ.ಆರತಿ ಕೃಷ್ಣ, ಎಫ್‌.ಎಚ್‌.ಜಕ್ಕಪ್ಪನವರ್‌, ಕೆ.ಶಿವಕುಮಾರ್‌, ರಮೇಶ್‌ ಬಾಬು ಅವರನ್ನು ಒಳಗೊಂಡ ನಾಲ್ಕು ಮಂದಿಯ ಅಂತಿಮ ಪಟ್ಟಿಯನ್ನು ಆಗಸ್ಟ್‌ ಕೊನೇ ವಾರ ರಾಜ್ಯಪಾಲರ ಅನುಮೋದನೆಗೆ ಕಳಹಿಸಲಾಗಿತ್ತು. ಅದಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ಸೆ.7 ರಂದು ಭಾನುವಾರ ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಾಗಿದೆ.

ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದ ಸದಸ್ಯರ ಪೈಕಿ ಯು.ಬಿ.ವೆಂಕಟೇಶ್‌, ಪ್ರಕಾಶ್‌ ರಾಥೋಡ್‌ ಅವರ ಅವಧಿ 2024ರ ಅ.29ಕ್ಕೆ ಹಾಗೂ ತಿಪ್ಪೇಸ್ವಾಮಿ ಅವರ ಅವಧಿ 2025ರ ಜ.27ಕ್ಕೆ ಮುಗಿದಿತ್ತು. ಸಿ.ಪಿ.ಯೋಗೇಶ್ವರ್‌ ಅವರು ಅವಧಿಗೆ ಮೊದಲೇ ರಾಜೀನಾಮೆ ನೀಡಿದ್ದರು. ಆಕಾಂಕ್ಷಿಗಳಿಂದ ತೀವ್ರ ಒತ್ತಡ ಇದ್ದರೂ ಖಾಲಿ ಇರುವ ಸ್ಥಾನಗಳಿಗೆ ಜನವರಿಯಿಂದ ಈವರೆಗೆ ಸದಸ್ಯರನ್ನು ಅಂತಿಮಗೊಳಿಸಲು ಸರ್ಕಾರ ಹಾಗೂ ಕಾಂಗ್ರೆಸ್‌ ಹೈಕಮಾಂಡ್‌ ಆಸಕ್ತಿ ತೋರಿರಲಿಲ್ಲ.

ಜೂನ್‌ ತಿಂಗಳಲ್ಲಿ ರಾಜ್ಯದ ಎನ್‌ಆರ್‌ಐ ಫೋರಂ ಉಪಾಧ್ಯಕ್ಷರು ಹಾಗೂ ಎಐಸಿಸಿ ಸಾಗರೋತ್ತರ ಸಮಿತಿ ಕಾರ್ಯದರ್ಶಿಗಳೂ ಆಗಿರುವ ಡಾ.ಆರತಿ ಕೃಷ್ಣ ಅವರನ್ನು ಹೈಕಮಾಂಡ್‌ ಕೋಟಾದಲ್ಲಿ ನಾಮನಿರ್ದೇಶನ ಮಾಡಲು ಅಂತಿಮಗೊಳಿಸಲಾಗಿತ್ತು.

ಇನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲದಿಂದಾಗಿ ದಲಿತ ಮುಖಂಡ ಡಿ.ಜಿ.ಸಾಗರ್‌, ಕೆಪಿಸಿಸಿ ಕೋಟಾದಲ್ಲಿ ರಮೇಶ್ ಬಾಬು, ಮುಖ್ಯಮಂತ್ರಿ ಸಿದ್ದರಾಮಯ್ಯ ಅ‍ವರ ಶಿಫಾರಸಿನ ಹಿನ್ನೆಲೆಯಲ್ಲಿ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಅವರಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿತ್ತು.

ಆದರೆ, ದಿನೇಶ್ ಅಮಿನ್‌ಮಟ್ಟು ಹಾಗೂ ಡಿ.ಜಿ.ಸಾಗರ್‌ ನೇಮಕಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಪಟ್ಟಿಯನ್ನು ತಡೆ ಹಿಡಿಯಲಾಗಿತ್ತು. ಇಬ್ಬರೂ ಪಕ್ಷದ ಹೊರಗಿನವರು ಎಂಬ ಆಕ್ಷೇಪವನ್ನು ಕೆಲ ನಾಯಕರು ಮಾಡಿದ್ದರು. ಹೀಗಾಗಿ ಸಿದ್ದರಾಮಯ್ಯ ಅವರು ಅಮಿನ್‌ಮಟ್ಟು ಬದಲಿಗೆ ಶಿವಕುಮಾರ್‌ ಹೆಸರು ಶಿಫಾರಸು ಮಾಡಿದ್ದರು. ಡಿ.ಜಿ. ಸಾಗರ್‌ ಬದಲಿಗೆ ಜಕ್ಕಪ್ಪನವರ್‌ ಸ್ಥಾನ ಪಡೆದರು ಎನ್ನಲಾಗಿದೆ.

ಜಾತಿವಾರು ಲೆಕ್ಕಾಚಾರ

ನಾಲ್ಕು ಮಂದಿ ಸದಸ್ಯರ ಪೈಕಿ ಆರತಿ ಕೃಷ್ಣ ಅವರು ಒಕ್ಕಲಿಗ, ರಮೇಶ್ ಬಾಬು ಅವರು ಹಿಂದುಳಿದ ವರ್ಗ, ಎಪ್‌.ಎಚ್‌.ಜಕ್ಕಪ್ಪನವರ್‌ ಹಾಗೂ ಶಿವಕುಮಾರ್‌ ಅವರು ದಲಿತ ಸಮುದಾಯ (ಬಲಗೈ)ಕ್ಕೆ ಸೇರಿದವರಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು