ಭದ್ರಾವತಿ: ತಾಲೂಕಿನ ಗೌಡರಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸುವಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಟಿಪ್ಪುನಗರ ನಿವಾಸಿ ರೌಡಿಶೀಟರ್, ಸೈಯದ್ ರಾಝಿಕ್ ಅ.20ರಂದು ಗೌಡರಹಳ್ಳಿ ಗ್ರಾಮದಲ್ಲಿ ಕೊಲೆಯಾಗಿದ್ದು, ಈ ಸಂಬಂಧ ತಾಲೂಕಿನ ತಿಪ್ಲಾಪುರ ಕ್ಯಾಂಪ್ ಗ್ರಾಮದ ನಿವಾಸಿಗಳಾದ ಸಮೀರ್, ಜಮೀರ್ ಅಲಿಯಾಸ್ ಸಮೀರ್, ನಾಮತ್ ಅಲಿ ಮತ್ತು ಮಹಮ್ಮದ್ ಶಫಿವುಲ್ಲಾ ಎಂಬವರನ್ನು ಬಂಧಿಸಲಾಗಿದೆ. ಘಟನೆ ವಿವರ: ಸೈಯದ್ ರಾಝಿಕ್‌ನನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಈತನ ಅಕ್ಕ ಗುಲ್ಮಾಜ್ ಬಾನು ಒಟ್ಟು 8 ಜನರ ವಿರುದ್ಧ ದೂರು ನೀಡಿದ್ದರು. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿ ಅನಿಕುಮಾರ್ ಎಸ್. ಭೂಮರೆಡ್ಡಿ ಹಾಗೂ ಪೊಲೀಸ್ ಉಪಾಧೀಕ್ಷಕ ಕೆ.ಎನ್. ನಾಗರಾಜ್ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಜಗದೀಶ್ ಸಿ. ಹಂಚಿನಾಳ್ ನೇತೃತ್ವದ ತಂಡ ರಚಿಸಲಾಗಿತ್ತು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ತಂಡ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿ ಅ.25ರಂದು 8 ಜನರ ಪೈಕಿ ಸಮೀರ್, ಜಮೀರ್ ಅಲಿಯಾಸ್ ಸಮೀರ್, ನಾಮತ್ ಅಲಿ, ಮತ್ತು ಮಹಮ್ಮದ್ ಶಫಿವುಲಾ ಅವರನ್ನು ಬಂಧಿಸಿದೆ. ಉಳಿದವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ. 4 ಜನ ಬಂಧಿತರಿಂದ ಕೃತ್ಯ ವೆಸಗಲು ಉಪಯೋಗಿಸಿದ ಮಾರಕಾಸ್ತ್ರಗಳನ್ನು ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ತಂಡದಲ್ಲಿ ಠಾಣಾಧಿಕಾರಿ ಶ್ರೀಶೈಲ ಕೆಂಚಣ್ಣವರ, ಸಿಬ್ಬಂದಿ ಮಂಜುನಾಥ್, ಈರಯ್ಯ, ಮತ್ತು ಶಿವಪ್ಪ ಪಾಲ್ಗೊಂಡಿದ್ದರು.