ಜಿಲ್ಲೆಯ ೪ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ: ದಿನೇಶ ಗುಂಡೂರಾವ್

KannadaprabhaNewsNetwork |  
Published : Mar 01, 2026, 03:00 AM IST
ಸಿದ್ದಾಪುರ ತಾಲೂಕಿನ ಕ್ಯಾದಗಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡವನ್ನು ಸಚಿವ ದಿನೇಶ ಗುಂಡೂರಾವ್ ಲೋಕಾರ್ಪಣೆಗೊಳಿಸಿದರು. | Kannada Prabha

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯಲ್ಲಿ ೪ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೊಂಡಿವೆ. ಅವುಗಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಶೀಘ್ರ ಪೂರೈಸಲಾಗುವುದು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ

ಕ್ಯಾದಗಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಲೋಕಾರ್ಪಣೆಕನ್ನಡಪ್ರಭ ವಾರ್ತೆ ಸಿದ್ದಾಪುರ

ಉತ್ತರ ಕನ್ನಡ ಜಿಲ್ಲೆಯಲ್ಲಿ ೪ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೊಂಡಿವೆ. ಅವುಗಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಶೀಘ್ರ ಪೂರೈಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್ ಹೇಳಿದರು.

ಶನಿವಾರ ಸಂಜೆ ತಾಲೂಕಿನ ಕ್ಯಾದಗಿಯಲ್ಲಿ ₹೯ ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಕೇವಲ ಕಟ್ಟಡಗಳಿಂದ ಜನರಿಗೆ ಆರೋಗ್ಯ ಸಿಗಲು ಸಾಧ್ಯವಿಲ್ಲ. ಉತ್ತಮ ವೈದ್ಯರು ಮತ್ತು ಸಿಬ್ಬಂದಿ ವರ್ಗ ಇದ್ದಾಗ ಮಾತ್ರ ಅದು ಸಾಧ್ಯ. ಕಾಯಿಲೆಗಳು ಇಂದಿನ ದಿನಗಳಲ್ಲಿ ಹೆಚ್ಚುತ್ತಿವೆ. ಇದಕ್ಕೆ ನಮ್ಮ ಜೀವನ ಶೈಲಿಯೂ ಮುಖ್ಯ ಕಾರಣ. ಆದರೆ ಹಳ್ಳಿಗಳಲ್ಲಿನ ಜನ ದೈಹಿಕ ಶ್ರಮ ವಹಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳುತ್ತಾರೆ. ಶಿರಸಿಯ ಆಸ್ಪತ್ರೆಗೆ ಜಿಲ್ಲಾಸ್ಪತ್ರೆಯಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡುತ್ತಿದ್ದೇನೆ. ರೋಗ ಉಲ್ಬಣಗೊಂಡ ನಂತರ ಚಿಕಿತ್ಸೆ ಪಡೆಯುವ ಬದಲು ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಹಚ್ಚಿ ಸೂಕ್ತ ಮಾರ್ಗದರ್ಶನ ನೀಡುವ ಉದ್ದೇಶದಿಂದ ಗೃಹ ಆರೋಗ್ಯ ಯೋಜನೆ ಜಾರಿ ಮಾಡಲಾಗಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಶಾಸಕ ಭೀಮಣ್ಣ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ಕೊಟ್ಟಿರುವುದನ್ನು ನೀವೆಲ್ಲರೂ ನೋಡುತ್ತಿದ್ದೀರಿ. ಹಲವಾರು ವರ್ಷಗಳ ಬೇಡಿಕೆಯಾದ ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನೆಗೊಂಡಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ. ಭಾಗದಲ್ಲಿರುವ ಮಂಗನ ಕಾಯಿಲೆ ತಪಾಸಣೆಗೋಸ್ಕರ ₹೪೦ ಲಕ್ಷ ಹಣ ನೀಡಿ ಶಿರಸಿಯಲ್ಲಿ ತಪಾಸಣಾ ಕೇಂದ್ರ ತೆರೆಯಲು ಆರೋಗ್ಯ ಸಚಿವರು ಸಹಕರಿಸಿದ್ದಾರೆ. ಖಾಸಗಿ ಆಸ್ಪತ್ರೆಗಳು ಜನಸಾಮಾನ್ಯರಿಗೆ ಕೈಗೆಟಕುತ್ತಿಲ್ಲ. ಸರ್ಕಾರ ಸಾಮಾನ್ಯ ಜನರ ಆರೋಗ್ಯ ರಕ್ಷಣೆಗೆ ಅಗತ್ಯ ಸೌಲಭ್ಯಗಳನ್ನು ನೀಡುತ್ತಿದ್ದು ಜನಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಆರೋಗ್ಯ ಇಲಾಖೆಯ ಬೆಳಗಾವಿ ವಿಭಾಗದ ಸಹ ನಿರ್ದೇಶಕಿ ಡಾ. ಪುಷ್ಪಾ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ತಹಶೀಲ್ದಾರ ಎಂ.ಆರ್. ಕುಲಕರ್ಣಿ, ತಾಪಂ ಇಒ ದೇವರಾಜ ಹಿತ್ತಲಕೊಪ್ಪ, ಕ್ಯಾದಗಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕುಸುಮಾ ಇದ್ದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಂಕರ ರಾವ್ ಸ್ವಾಗತಿಸಿದರು. ರಜನಿ ಪ್ರಶಾಂತ ನಾಯ್ಕ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮಮತಾ ಕೊಡಿಯಾ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಜನರು ಆತಂಕದಲ್ಲೇ ಬದುಕುವಂತಾಗಿದೆ: ಕಾಗೇರಿ
ವೈಟ್ ಬೋರ್ಡ್ ವಾಹನಗಳ ಬಾಡಿಗೆ ತಡೆಯಲು ಮನವಿ