ಯುಪಿಎ ಅವಧಿಯಲ್ಲಿ 4.5 ಸಾವಿರ ಕೋಟಿ, ನಳಿನ್ ಅವಧಿಯಲ್ಲಿ ಲಕ್ಷ ಕೋಟಿ ಅನುದಾನ

KannadaprabhaNewsNetwork |  
Published : Mar 01, 2024, 02:16 AM IST
ನಳಿನ್‌ ಕುಮಾರ್‌ ಕಟೀಲು ಅವರ ಸಾಧನೆಯ ಪುಸ್ತಕ ಬಿಡುಗಡೆಗೊಳಿಸುತ್ತಿರುವುದು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ರಸ್ತೆ, ನೀರು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ, ಮಂಗಳೂರು ಮಹಾನಗರಕ್ಕೆ ಸ್ಮಾರ್ಟ್‌ ಸಿಟಿ ಹಾಗೂ ವಿವಿಧ ಯೋಜನೆಗಳನ್ನು ತರುವ ಮೂಲಕ ಹೊಸ ಸ್ಪರ್ಶ ನೀಡಿದ್ದಾರೆ. ತೀರಾ ಕುಗ್ರಾಮವಾಗಿದ್ದ ಬಳ್ಪ ಗ್ರಾಮವನ್ನು ಅಭಿವೃದ್ಧಿಪಡಿಸಿ ಇಡೀ ದೇಶದಲ್ಲೇ ಮಾದರಿ ಆದರ್ಶ ಗ್ರಾಮವನ್ನಾಗಿ ಸಂಸದ ನಳಿನ್‌ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಹಿಂದೆ ಯುಪಿಎ ಅವಧಿಯಲ್ಲಿ ಜಿಲ್ಲೆಗೆ ಕೇವಲ 4.5 ಸಾವಿರ ಕೋಟಿ ರು. ಅನುದಾನ ಬಂದಿದ್ದರೆ, ಸಂಸದ ನಳಿನ್‌ ಕುಮಾರ್ ಕಟೀಲು ಅವರು ಸತತ ಮೂರು ಅವಧಿಗಳಲ್ಲಿ 2009ರಿಂದ 2023ರವರೆಗೆ ಒಂದು ಲಕ್ಷ ಕೋಟಿ ರು. ಅನುದಾನ ತಂದಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಹೇಳಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಗುರುವಾರ, ಸಂಸದರಾಗಿ ನಳಿನ್‌ ಕುಮಾರ್‌ ಕಟೀಲು ಅವಧಿಯಲ್ಲಿ ಬಿಡುಗಡೆಯಾದ ಅನುದಾನಗಳ ವಿವರ, ಕ್ಷೇತ್ರಾಭಿವೃದ್ಧಿ ಹಾಗೂ ರಾಜ್ಯಾಧ್ಯಕ್ಷರಾಗಿ ಮಾಡಿದ ಸಾಧನೆಗಳ ಪಕ್ಷಿನೋಟವುಳ್ಳ ಕಿರುಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಾಮಾನ್ಯ ಕಾರ್ಯಕರ್ತರಾಗಿದ್ದವರನ್ನು ಸಂಸದರನ್ನಾಗಿ ಮಾಡಿದ ಕ್ಷೇತ್ರದ ಜನರಿಗೆ ತಾನು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸುವುದು ಸಂಸದರಾಗಿ ನಳಿನ್‌ ಕುಮಾರ್‌ ಅವರ ಜವಾಬ್ದಾರಿಯಾಗಿತ್ತು. ಅದನ್ನು ಈ ಪುಸ್ತಕದ ಮೂಲಕ ಪ್ರಾಮಾಣಿಕವಾಗಿ ಮಾಡಿದ್ದಾರೆ ಎಂದರು.

ಅವರ ಅಧಿಕಾರವಧಿಯಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾರ್ಯ ಆರಂಭಗೊಂಡಿದ್ದು, ಕೆಲವು ಪೂರ್ಣಗೊಂಡು, ಕೆಲವು ಪ್ರಗತಿಯಲ್ಲಿವೆ. ಸಾವಿರಾರು ರು. ಅನುದಾನ ತಂದು ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಿದ್ದಾರೆ. ಬಂದರು ಇಲಾಖೆ ಅಭೂತಪೂರ್ವ ಅಭಿವೃದ್ಧಿಯಾಗಿದೆ. ವಂದೇ ಭಾರತ್‌ ರೈಲನ್ನು ಜಿಲ್ಲೆಗೆ ತಂದಿದ್ದಾರೆ ಎಂದು ಸತೀಶ್‌ ಕುಂಪಲ ಸ್ಮರಿಸಿದರು.

ಜಿಲ್ಲೆಯಲ್ಲಿ ರಸ್ತೆ, ನೀರು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ, ಮಂಗಳೂರು ಮಹಾನಗರಕ್ಕೆ ಸ್ಮಾರ್ಟ್‌ ಸಿಟಿ ಹಾಗೂ ವಿವಿಧ ಯೋಜನೆಗಳನ್ನು ತರುವ ಮೂಲಕ ಹೊಸ ಸ್ಪರ್ಶ ನೀಡಿದ್ದಾರೆ. ತೀರಾ ಕುಗ್ರಾಮವಾಗಿದ್ದ ಬಳ್ಪ ಗ್ರಾಮವನ್ನು ಅಭಿವೃದ್ಧಿಪಡಿಸಿ ಇಡೀ ದೇಶದಲ್ಲೇ ಮಾದರಿ ಆದರ್ಶ ಗ್ರಾಮವನ್ನಾಗಿ ಮಾಡಿದ್ದಾರೆ. ಪ್ಲಾಸ್ಟಿಕ್ ಪಾರ್ಕ್‌ ಸೇರಿದಂತೆ ಹತ್ತು ಹಲವು ಯೋಜನೆಗಳು ಜಿಲ್ಲೆಗೆ ಬಂದಿದ್ದರೆ ಅದಕ್ಕೆ ಸಂಸದ ನಳಿನ್‌ ಕುಮಾರ್‌ ಕಾರಣ ಎಂದು ಹೇಳಿದರು.

ಸಂಸದ ನಳಿನ್‌ ಕುಮಾರ್ ಕಟೀಲು, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್‌ ಮೂಡುಬಿದಿರೆ, ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್‌, ಕಿಶೋರ್‌ ಪುತ್ತೂರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ