ಜನಪ್ರತಿನಿಧಿ ಇಲ್ಲದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ : ಅಧಿಕಾರಿಗಳ ಆಡಳಿತದಲ್ಲೇ 4 ವರ್ಷ!

KannadaprabhaNewsNetwork |  
Published : Sep 11, 2024, 01:34 AM ISTUpdated : Sep 11, 2024, 10:33 AM IST
ಬಿಬಿಎಂಪಿ | Kannada Prabha

ಸಾರಾಂಶ

ನಾನಾ ಕಾರಣ, ನೆಪದಲ್ಲಿ ಕೋಟಿಗೂ ಮಿಕ್ಕೂ ಜನಸಂಖ್ಯೆ ಇರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜನಪ್ರತಿನಿಧಿಗಳು ಇಲ್ಲದೇ ಅಧಿಕಾರಿಗಳ ಆಡಳಿತದಲ್ಲೇ ನಡೆಯುತ್ತಿರುವುದಕ್ಕೆ ಇದೀಗ ನಾಲ್ಕು ವರ್ಷ ತುಂಬಿದೆ.

 ಬೆಂಗಳೂರು :  ನಾನಾ ಕಾರಣ, ನೆಪದಲ್ಲಿ ಕೋಟಿಗೂ ಮಿಕ್ಕೂ ಜನಸಂಖ್ಯೆ ಇರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜನಪ್ರತಿನಿಧಿಗಳು ಇಲ್ಲದೇ ಅಧಿಕಾರಿಗಳ ಆಡಳಿತದಲ್ಲೇ ನಡೆಯುತ್ತಿರುವುದಕ್ಕೆ ಇದೀಗ ನಾಲ್ಕು ವರ್ಷ ತುಂಬಿದೆ.

ಬಿಬಿಎಂಪಿಯ ವಾರ್ಡ್‌ ಮರು ವಿಂಗಡಣೆ, ವಾರ್ಡ್‌ಗಳ ಮೀಸಲಾತಿ ನಿಗದಿಗೊಳಿಸಲು ಕೆಲ ಕಾಲ ಚುನಾವಣೆ ಮುಂದೂಡಿಕೆ, ನಂತರ ಮರುವಿಂಗಡಣೆ, ಮೀಸಲಾತಿ ನಿಗದಿ ಪ್ರಶ್ನಿಸಿ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ವರೆಗೆ ಕಾನೂನು ಹೋರಾಟದ ನೆಪದಲ್ಲಿ ಚುನಾವಣೆ ತಳ್ಳಿಕೊಂಡು ಬರಲಾಯಿತು. ಇದೀಗ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯ ನೆಪ ಹೇಳಿಕೊಂಡು ಬಿಬಿಎಂಪಿಯ ಚುನಾವಣೆ ಮುಂದೂಡುವ ಸಾಧ್ಯತೆ ಕಂಡು ಬರುತ್ತಿದೆ.

2015ರಲ್ಲಿ ಬಿಬಿಎಂಪಿಯ 198 ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು. ಚುನಾಯಿತರಾದ ಸದಸ್ಯರ ಅಧಿಕಾರಾವಧಿ 2020ರ ಸೆ.10ಕ್ಕೆ ಮುಕ್ತಾಯಗೊಂಡಿತ್ತು. ಪಾಲಿಕೆ ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಂಡಾಗ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿ ಇತ್ತು. ಆಗ ಬಿಬಿಎಂಪಿಗೆ ಪ್ರತ್ಯೇಕ ಕಾಯಿದೆ ರೂಪಿಸುವ ನೆಪದಲ್ಲಿ ಚುನಾವಣೆ ಮುಂದೂಡಿತು. ಬಳಿಕ ಬಿಬಿಎಂಪಿಯ 198 ವಾರ್ಡ್‌ಗಳನ್ನು 243ಕ್ಕೆ ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿತ್ತು.

ವಾರ್ಡ್‌ ಮರು ವಿಂಗಡಣೆ ಅವೈಜ್ಞಾನಿಕವಾಗಿದೆ ಎಂದು ಹಲವು ಬಿಬಿಎಂಪಿಯ ಮಾಜಿ ಸದಸ್ಯರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ವೇಳೆ ರಾಜ್ಯ ವಿಧಾನಸಭಾ ಚುನಾವಣೆ ಬಂದಿತ್ತು. ಕಾಂಗ್ರೆಸ್‌ ಪಕ್ಷ ಚುನಾವಣೆ ಪ್ರಣಾಳಿಕೆಯಲ್ಲಿಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ತಕ್ಷಣ ಬಿಬಿಎಂಪಿ ಚುನಾವಣೆ ನಡೆಸುವುದಾಗಿ ಭರವಸೆ ನೀಡಿತ್ತು. ಆದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದಂತೆ ಬಿಬಿಎಂಪಿಯ ಕಾಯ್ದೆಗೆ ಮತ್ತೆ ತಿದ್ದುಪಡಿ ಮಾಡಿ ಬಿಬಿಎಂಪಿಯ ವಾರ್ಡ್‌ಗಳನ್ನು ಮತ್ತೆ ಮರು ವಿಂಗಡಣೆ ವಾರ್ಡ್‌ ಸಂಖ್ಯೆಯನ್ನು 243 ರಿಂದ 225ಕ್ಕೆ ಇಳಿಕೆ ಮಾಡಿತ್ತು.

ಅದಾದ ನಂತರ ಬಿಬಿಎಂಪಿ ಚುನಾವಣೆ ನಡೆಯಬಹುದು ಎಂಬ ಆಶಾಭಾವನೆ ಇತ್ತು. ಆ ವೇಳೆಗೆ ಎಲ್ಲ ಪಕ್ಷಗಳು ಲೋಕಸಭಾ ಚುನಾವಣೆ ತಯಾರಿಯಲ್ಲಿ ತೊಡಗಿಸಿಕೊಂಡವು. ಹೀಗಾಗಿ ಬಿಬಿಎಂಪಿ ಚುನಾವಣೆ ಬಗ್ಗೆ ಗಮನ ನೀಡಲಿಲ್ಲ. ಈಗ ಲೋಕಸಭಾ ಚುನಾವಣೆ ಮುಕ್ತಾಯಗೊಳ್ಳುತ್ತಿದಂತೆ ಸರ್ಕಾರ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆಗೆ ಮುಂದಾಗಿದೆ. ಪ್ರಾಧಿಕಾರ ರಚನೆ ಬಗ್ಗೆ ಸಾಕಷ್ಟು ಪರ-ವಿರೋಧ ಅಭಿಪ್ರಾಯಗಳು ಈಗಾಗಲೇ ಕೇಳಿ ಬರುತ್ತಿರುವುದನ್ನು ನೋಡಿದರೆ ಸದ್ಯಕ್ಕೆ ಬಿಬಿಎಂಪಿಗೆ ಚುನಾವಣೆ ಭಾಗ್ಯ ಸಿಗುವ ಕಡಿಮೆ ಎನ್ನಬಹುದು.

ಜನರಿಗೆ ಸ್ಪಂದಿಸದ ಅಧಿಕಾರಿಗಳು

ಬಿಬಿಎಂಪಿಯಲ್ಲಿ ಆಡಳಿತ ನಡೆಸುತ್ತಿರುವ ಅಧಿಕಾರಿಗಳಿಂದ ಸಾರ್ವನಿಕರಿಗೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ರಸ್ತೆ ಗುಂಡಿ, ಪ್ರವಾಹ, ಕಸ, ಕುಡಿಯುವ ನೀರು ಸೇರಿದಂತೆ ಇನ್ನಿತರೆ ಸಮಸ್ಯೆಗಳಿಗೆ ಪಾಲಿಕೆ ಸದಸ್ಯರು ತಕ್ಷಣ ಸ್ಪಂದಿಸುತ್ತಿದ್ದರು. ಆದರೆ, ಅಧಿಕಾರಿಗಳು ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ ಎಂಬೆಲ್ಲಾ ದೂರುಗಳಿಗೆ ಕೊನೆ ಯಾವಾಗ ಎಂಬ ಸಾರ್ವಜನಿಕರ ಪ್ರಶ್ನೆಗೆ ಸರ್ಕಾರವೇ ಉತ್ತರ ನೀಡಬೇಕಾಗಿದೆ.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ