ಕನ್ನಡಪ್ರಭ ವಾರ್ತೆ ಕಮಲನಗರ
ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆತಿದ್ದು, 40 ಅರ್ಜಿಗಳನ್ನು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಖುದ್ದು ಸ್ವೀಕರಿಸಿ, 8 ದಿನದೊಳಗೆ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮವಹಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ನಡೆದ ಜನ ಸ್ಪಂದನ ಸಭೆಯಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲಾಗಿದ್ದ ಕಂದು-ಕೊರತೆ ಅರ್ಜಿ ಪರಿಶೀಲಿಸಿ ಮಾತನಾಡಿ, ಎಲ್ಲ ಅರ್ಜಿಗಳಿಗೆ ಹಿಂಬರಹ ನೀಡಲಾಗುತ್ತದೆ ಎಂದರು. ಪ್ರೌಢಶಾಲೆಯು ಕಮಲನಗರದಿಂದ ಹೊಳಸಮುದ್ರಕ್ಕೆ ಹೋಗಿರುತ್ತದೆ. ಆದಕಾರಣ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ತೊಂದರೆಯಾಗುತ್ತಿದೆ. ಕಮಲನಗರದಿಂದ ಹೊಳಸಮುದ್ರ ಶಾಲೆಗೆ ಹೋಗಬೇಕಾದರೆ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ನಿಲ್ಲಿಸುವಂತೆ ಜಿಲ್ಲಾಧಿಕಾರಿಗೆ ಪಾಲಕರು ಮನವಿ ಸಲ್ಲಿಸಿದರು.
ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಅವರು ಪಟ್ಟಣದಲ್ಲಿ ಕನ್ನಡ ಪ್ರೌಢಶಾಲೆ ಆಗಬೇಕು, ಪಟ್ಟಣದಲ್ಲಿ ಮಿನಿ ವಿಧಾನಸೌಧ, ತಾಲೂಕು ಕ್ರೀಡಾಂಗಣ, ಕಮಲನಗರದಿಂದ ಔರಾದಗೆ ಹೋಗಬೇಕಾದರೆ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು ಮುಚ್ಚವಂತೆ ಮನವಿ ಮಾಡಿದರು.ಕಮಲನಗರ ಪಟ್ಟಣದ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿಗಾಗಿ ₹15 ಕೋಟಿ ಹಣ ಮಂಜೂರಾಗಿರುತ್ತದೆ ಟೆಂಡರ್ ಕರೆಯಲಾಗಿದೆ. ಆದ ನಂತರ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ಭರವಸೆ ನೀಡಿದರು. ತಾಲೂಕಾದ್ಯಂತ ಯಾವುದೇ ಕೆರೆಗಳಲ್ಲಿನ ಮಣ್ಣು ಮತ್ತು ಕಲ್ಲು ತೆಗೆದುಕೊಂಡು ಹೋಗಬಾರದು ಎಂದು ಸೂಚನೆ ನೀಡಿದರು.40 ಅರ್ಜಿ ಸ್ವೀಕರಿಸಿದ ಡಿಸಿ:
ಬುಧವಾರ ನಡೆದ ಜನ ಸ್ಪಂದನ ಸಭೆಯಲ್ಲಿ 40 ಅರ್ಜಿಗಳನ್ನು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸ್ವೀಕರಿಸಿದರು. ಕಂದಾಯ ಇಲಾಖೆ, ಜಮೀನುಗಳಿಗೆ ಹೋಗಲು ದಾರಿ. ಪಿಆರ್‌ಇ, ಜೆಜೆಎಂ ಕಾಮಗಾರಿ ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಅರ್ಜಿ ಸಲ್ಲಿಸಿದರು.ಈ ವೇಳೆ ತಹಸೀಲ್ದಾರ್ ಕುಮಾರ್ ಕುಲಕರ್ಣಿ, ತಾಪಂ ಇಒ ಮಾಣಿಕರಾವ ಪಾಟೀಲ, ಗ್ರೇಡ್ 2 ತಹಸೀಲ್ದಾರ್ ರಮೇಶ್ ಪೆದ್ದೆ, ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ವಿವಿಧ ಗ್ರಾಮದ ಜನರು ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.