ಉಲುಕ್ ಉಪ್ಪಿನಂಗಡಿಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ವಿಶೇಷವೆಂದರೆ ಜೂ.೨೫ರಂದು ಬೆಳಗ್ಗೆ ಮೊದಲ ಬಾರಿಯೆಂಬಂತೆ ಈ ನೀರಿನ ತಾಪಮಾನ ೪೦.೩ ಡಿಗ್ರಿ ಸೆಲ್ಸಿಯಸ್ ಆಗಿದೆ ಎನ್ನುತ್ತಾರೆ ಈ ಜಾಗದ ಮಾಲಕ ಮುಹಮ್ಮದ್ ಬಂದಾರು.
ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಅಂಕರಮಜಲಿನ ಬಟ್ಲಡ್ಕ ಎಂಬಲ್ಲಿ ಮುಳುಗು ತಜ್ಞರಾದ ಮುಹಮ್ಮದ್ ಬಂದಾರು ಅವರ ಜಾಗದಲ್ಲಿ ಬಿಸಿನೀರಿನ ಚಿಲುಮೆಯೊಂದಿದ್ದು, ಬಿಸಿನೀರು ಬಂದು ಬೀಳುವ ಜಾಗದಲ್ಲಿ ಆಯತಾಕರಾರವಾಗಿ ಕಲ್ಲುಗಳನ್ನು ಜೋಡಿಸಿ ಕೆರೆಯಂತೆ ಮಾಡಲಾಗಿದೆ. ಇದು ೧೦ ರಿಂದ ೧೨ ಅಡಿ ಉದ್ದ, ಏಳು ಅಡಿ ಅಗಲ, ಐದು ಅಡಿ ಆಳವಿದ್ದು, ಇದರ ಮೇಲ್ಗಡೆ ಇರುವ ಕಲ್ಲುಗಳ ನಡುವಿನಿಂದ ಸುಮಾರು ಅರ್ಧ ಇಂಚಿನಷ್ಟು ಬಿಸಿನೀರು ಬಂದು ಇದಕ್ಕೆ ಬೀಳುತ್ತದೆ. ಇದರ ಕೆಳಗಡೆ ತಗ್ಗು ಪ್ರದೇಶದಲ್ಲಿ ಗದ್ದೆಯಿದ್ದು, ಇದಕ್ಕಿಂತ ಸುಮಾರು ೧೦೦ ಮೀ. ದೂರದಲ್ಲಿ ನೇತ್ರಾವತಿ ನದಿ ಹರಿಯುತ್ತಿದೆ.ಈ ಬಿಸಿನೀರ ಚಿಲುಮೆಯ ಬಗ್ಗೆ ಮಾಹಿತಿ ನೀಡುವ ಮುಹಮ್ಮದ್ ಬಂದಾರು ಅವರು, ಈ ಬಿಸಿ ನೀರಿನ ಚಿಲುಮೆಯು ಅನಾದಿ ಕಾಲದಿಂದಲೂ ಈ ಪರಿಸರದಲ್ಲಿದೆ. ನನ್ನ ತಾತನ ಕಾಲದಿಂದ ನಮಗೆ ಸಂಬಂಧಿಸಿದ ಭೂಮಿಯಲ್ಲಿ ಇದೆ. ನನ್ನ ಅರಿವಿನ ಪ್ರಕಾರ ವರ್ಷದ ೩೬೫ ದಿನವೂ ಇಲ್ಲಿ ನೀರು ಬತ್ತುತ್ತಿರಲಿಲ್ಲ. ಇದರಲ್ಲಿ ದಿನದ ೨೪ ಗಂಟೆಯೂ ಬಿಸಿನೀರು ಬಂಡೆಗಳೆಡೆಯಿಂದ ಬಂದು ಇದಕ್ಕೆ ಬೀಳುತ್ತಿತ್ತು. ಸುತ್ತಮುತ್ತಲು ಕೊಳವೆಬಾವಿಗಳ ಸಂಖ್ಯೆ ಹೆಚ್ಚಾದಂತೆ ಕಳೆದ ಎರಡು ವರ್ಷದಿಂದ ಬೇಸಿಗೆ ಕಾಲದಲ್ಲಿ ನೀರು ಬತ್ತುತ್ತಿದೆ.ವಿಜ್ಞಾನಿಗಳ ಅಧ್ಯಯನಕ್ಕೆ ಒಳಪಟ್ಟ ಸ್ಥಳ: ೧೦ ವರ್ಷಗಳಿಂದ ಭಾರತ ಸರ್ಕಾರದ ಭೂ ವಿಜ್ಞಾನಶಾಸ್ತ್ರದ ವಿಜ್ಞಾನಿಗಳ ತಂಡವೊಂದು ಇಲ್ಲಿಗೆ ಆಗಮಿಸಿ, ಅಧ್ಯಯನ ನಡೆಸುತ್ತಿದ್ದಾರೆ. ಮೊದಲು ಚೆನ್ನೈಯಿಂದ ಬರುತ್ತಿದ್ದರು. ಈಗ ಕೇರಳದ ತಿರುವನಂತಾಪುರದಿಂದ ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ವಿಜ್ಞಾನಿಗಳ ತಂಡವೊಂದು ಆರು ತಿಂಗಳಿಗೊಮ್ಮೆ ಇಲ್ಲಿಗೆ ಭೇಟಿ ನೀಡಿ ಅಧ್ಯಯನ ನಡೆಸುತ್ತಿದ್ದಾರೆ. ಅವರಿಗೆ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಮಹಮ್ಮದ್ ಅವರು ಈ ನೀರಿನ ತಾಪಮಾನವನ್ನು ಪರೀಕ್ಷಿಸಿ ವರದಿ ಕಳುಹಿಸಬೇಕಿದೆ. ಅದಕ್ಕೆ ಬೇಕಾದ ಥರ್ಮಾಮೀಟರ್‌ಗಳನ್ನು ಇಲಾಖೆಯೇ ಅವರಿಗೆ ನೀಡಿದೆ. ನೀರಿನ ಉಷ್ಣತೆ ಹೆಚ್ಚಾಗುತ್ತಿದೆ: ನನಗೆ ಗೊತ್ತಿರುವ ಹಾಗೆ ಈವರೆಗೆ ಇಲ್ಲಿ ನೀರಿನ ಗರಿಷ್ಠ ಉಷ್ಣತೆ ೩೬.೬ ಡಿಗ್ರಿ ಸೆಲ್ಸಿಯಷ್ಟು ಇತ್ತು. ಆದರೆ ಈ ಇಂದು ಬೆಳಗ್ಗೆ ಮಾತ್ರ ೪೦.೩ ಡಿಗ್ರಿ ಸೆಲ್ಸಿಯಸ್ ಇತ್ತು. ನಮ್ಮ ಸುತ್ತಲಿನ ವಾತಾವರಣ ತಂಪಿದ್ದಾಗ ಈ ನೀರಿನ ತಾಪಮಾನ ಬಿಸಿಯಿರುತ್ತದೆ. ಮಳೆಗಾಲದಲ್ಲಿ ಬಂಡೆಗಳೆಡೆಯಿಂದ ಬರುವ ನೀರಿನ ಪ್ರಮಾಣವೂ ಸ್ವಲ್ಪ ಜಾಸ್ತಿಯಿರುತ್ತದೆ. ಇಲ್ಲಿಗೆ ಆಗಮಿಸುವ ವಿಜ್ಞಾನಿಗಳ ತಂಡ ನೀರು ಬಿಸಿಯಾಗಲು ನಿಖರ ಕಾರಣ ಹೇಳದಿದ್ದರೂ, ಭೂಮಿಯ ಒಳಗಡೆ ಈ ನೀರು ಇನ್ನಷ್ಟು ಬಿಸಿ ಇರುತ್ತದೆ. ಅದು ಹೊರಗೆ ಬಂದಂತೆ ಅದರ ತಾಪಮಾನ ಕಡಿಮೆಯಾಗುತ್ತದೆ ಎನ್ನುತ್ತಾರೆ. ಅಲ್ಲದೆ, ಈ ಬಿಸಿನೀರ ಚಿಲುಮೆ ಈಗ ದಕ್ಷಿಣ ಭಾರತದಲ್ಲಿ ಬೆರಳೆಣಿಕೆಯ ಚಿಲುಮೆಗಳಲ್ಲಿ ಒಂದೆಂದು ವಿಜ್ಞಾನಿಗಳ ತಂಡ ತಿಳಿಸಿದೆ ಎನ್ನುತ್ತಾರೆ ಮುಹಮ್ಮದ್ ಬಂದಾರು.
ನೀರು ಬಿಸಿಯಾಗಿ ಬರುತ್ತಿದ್ದರೂ ಅದನ್ನು ಕುಡಿಯುವುದಕ್ಕೆ ಬಳಸಲಾಗುತ್ತಿಲ್ಲ. ಅದನ್ನು ಆ ಜಾಗದ ಮಾಲಕರು ಪಂಚಾಯಿತಿ ಆಡಳಿತಕ್ಕೆ ಬಿಟ್ಟು ಕೊಟ್ಟಲ್ಲಿ ಅದನ್ನು ಅಭಿವೃದ್ಧಿಪಡಿಸಲು ಸಾಧ್ಯ. ಪ್ರಸ್ತುತ ಅದರಲ್ಲಿನ ನೀರು ನದಿ ಸೇರುವುದನ್ನು ಬಿಟ್ಟರೆ, ಬೇರಾವ ರೀತಿಯಲ್ಲಿಯೂ ಅದರ ಬಳಕೆಯಾಗುತ್ತಿಲ್ಲ ಎಂದು ಬಂದಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದೆ ಬತ್ತದ ಕೃಷಿ ಈ ನೀರಲ್ಲೇ ನಡೆಯುತ್ತಿತ್ತು...