ಕಲ್ಯಾಣ ಕರ್ನಾಟಕದ 40% ಮಕ್ಕಳಲ್ಲಿ ಅಪೌಷ್ಟಿಕತೆ!

KannadaprabhaNewsNetwork |  
Published : Sep 28, 2026, 01:45 AM IST
ಚಿತ್ರ :  27ಎಂಡಿಕೆ2 :   ಶ್ರೀಗಣೇಶ ಮೆಡಿಕಲ್ಸ್ ನ  ಎಂ.ಸುದಶ೯ನ್ ರೈ ಈ ಗೌರವಕ್ಕೆ ಭಾಜನರಾಗಿದ್ದು  ಸುಧಶ೯ನ್ ರೈ ಮತ್ತು ಪತ್ನಿ ವಿಜಯಲಕ್ಷ್ಮಿ ರೈ ಅವರನ್ನು ಕಾಯ೯ಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.  | Kannada Prabha

ಸಾರಾಂಶ

ಕಲ್ಯಾಣ ಕರ್ನಾಟಕದ 40% ಮಕ್ಕಳಲ್ಲಿ ಅಪೌಷ್ಟಿಕತೆ ಕಂಡು ಬಂದಿದೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲ್ಯಾಣ ಕರ್ನಾಟಕದಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಅಪೌಷ್ಟಿಕತೆ ಕಾಡುತ್ತಿದೆ. ದಶಕದ ಹಿಂದೊಮ್ಮೆ ಈ ಭಾಗದಲ್ಲಿ ಅಪೌಷ್ಟಿಕತೆ ಕಾಡಿದಾಗ ನ್ಯಾಯಮೂರ್ತಿ ಎನ್‌.ಕೆ ಪಾಟೀಲ್‌ ಅಧ್ಯಕ್ಷತೆಯ ಸಮಿತಿ ಅಧ್ಯಯನ ನಡೆಸಿ ಅಪೌಷ್ಟಿಕತೆ ಹೋಗಲಾಡಿಸಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂಬ ವರದಿ ನೀಡಿತ್ತು. ಅದರಂತೆ ಕ್ರಮಗಳನ್ನು ಜರುಗಿಸಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ವಾಸ್ತವದಲ್ಲಿ ಮಕ್ಕಳ ಬೆನ್ನೇರಿರುವ ಅಪೌಷ್ಟಿಕತೆ ಕೆಳಗೆ ಇಳಿದೇ ಇಲ್ಲ!

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2023-24ರ ವರದಿ ಹೊರಬಿದ್ದಿದ್ದು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅಪೌಷ್ಟಿಕತೆಗೆ ಸಂಬಂಧಿಸಿದ ಆತಂಕಕಾರಿ ಅಂಕಿ ಅಂಶಗಳನ್ನು ಬಹಿರಂಗಪಡಿಸಿದೆ. ಬೀದರ್ ಹೊರತುಪಡಿಸಿ ಈ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ಶೇ.40ಕ್ಕಿಂತ ಹೆಚ್ಚು ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ.

ಕಲಬುರಗಿ ಜಿಲ್ಲೆಯಲ್ಲಿ ಶೇ. 44.6 (3,16,899 ಮಕ್ಕಳ ಪೈಕಿ), ಕೊಪ್ಪಳದಲ್ಲಿ ಶೇ. 44.1 (1,65,363 ಮಕ್ಕಳ ಪೈಕಿ), ಯಾದಗಿರಿಯಲ್ಲಿ ಶೇ. 43.1 (1,59,293 ಮಕ್ಕಳ ಪೈಕಿ), ಬಳ್ಳಾರಿಯಲ್ಲಿ ಶೇ. 42.7 (1,23,441 ಮಕ್ಕಳ ಪೈಕಿ) ಮತ್ತು ಬೀದರ್‌ನಲ್ಲಿ ಶೇ. 31.7 (1,79,116 ಮಕ್ಕಳ ಪೈಕಿ) ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ 5 ವರ್ಷದೊಳಗಿನ ಅರ್ಧದಷ್ಟು ಮಕ್ಕಳು, ಅಂದರೆ ಅಂಗನವಾಡಿಗಳಲ್ಲಿ ಕಲಿಯುತ್ತಿರುವ 2,38,903 ಮಕ್ಕಳ ಪೈಕಿ ಶೇ. 49.5ರಷ್ಟು ಮಕ್ಕಳು ಕಡಿಮೆ ತೂಕವನ್ನು ಹೊಂದಿದ್ದಾರೆ. ಇದರೊಂದಿಗೆ ಅತಿ ಹೆಚ್ಚು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಹೊಂದಿರುವ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಉಳಿಸಿಕೊಂಡಿದೆ. ಇತ್ತೀಚಿನ ವರದಿಯ ಪ್ರಕಾರ, ರಾಜ್ಯದ ಸರಾಸರಿ ಪ್ರಮಾಣವು ಶೇ. 27.8ರಷ್ಟಿದೆ.

ಕಿತ್ತೂರು ಕರ್ನಾಟಕ ಪ್ರದೇಶಕ್ಕೆ ಸೇರುವ ವಿಜಯಪುರ ಜಿಲ್ಲೆಯಲ್ಲಿ 5 ವರ್ಷ ವಯೋಮಾನದ ಮಕ್ಕಳಲ್ಲಿ ಶೇ. 45.3ರಷ್ಟು ಕಡಿಮೆ ತೂಕದ ಮಕ್ಕಳನ್ನು ಹೊಂದುವ ಮೂಲಕ ರಾಜ್ಯದಲ್ಲೇ 2ನೇ ಅತಿ ಹೆಚ್ಚು ಪ್ರಮಾಣವನ್ನು ದಾಖಲಿಸಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿಯ ಪ್ರಕಾರ, ಕಲಬುರಗಿ ವಿಭಾಗದಲ್ಲಿ ಶೇ. 43, ಬೆಳಗಾವಿ ವಿಭಾಗದಲ್ಲಿ ಶೇ. 33.8, ಮೈಸೂರು ವಿಭಾಗದಲ್ಲಿ ಶೇ. 22.36 ಮತ್ತು ಬೆಂಗಳೂರು ವಿಭಾಗದಲ್ಲಿ ಶೇ. 24.28 ರಷ್ಟು ಮಕ್ಕಳು ಕಡಿಮೆ ತೂಕವನ್ನು ಹೊಂದಿದ್ದಾರೆ.

ಬೆಂಗಳೂರಿನ ‘ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಅಂಡ್ ಎಕನಾಮಿಕ್ ಚೇಂಜ್’ ಮತ್ತು ‘ವೋನ್ ಇಂಡಿಯಾ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಗಳು 2024ರ ಫೆ.23ರಿಂದ ಅ.24ರವರೆಗೆ ಈ ಸಮೀಕ್ಷೆ ನಡೆಸಿದ್ದವು.ಪೌಷ್ಟಿಕ ಆಹಾರ ಲಭ್ಯವಿದ್ರೂ ಬಿಡದ ಗುಮ್ಮ!:

ಕೆಲವು ವರ್ಷಗಳ ಹಿಂದೆ ರಾಯಚೂರು ಜಿಲ್ಲೆಯಲ್ಲಿ ಅಪೌಷ್ಟಿಕತೆಯ ಸಮಸ್ಯೆಯನ್ನು ಪ್ರಾಯೋಗಿಕವಾಗಿ ಅಧ್ಯಯನ ಮಾಡಲು ಕರ್ನಾಟಕ ಸರ್ಕಾರವು ನಿವೃತ್ತ ಹೈಕೋರ್ಟ್ ನ್ಯಾ.ದಿವಂಗತ ಎನ್.ಕೆ.ಪಾಟೀಲ್ ಅವರನ್ನು ನೇಮಿಸಿತ್ತು. ಮಧ್ಯಾಹ್ನದ ಬಿಸಿಯೂಟದೊಂದಿಗೆ ಮೊಟ್ಟೆ ಮತ್ತು ಬಾಳೆಹಣ್ಣು ನೀಡುವಂತೆ ಅವರ ವರದಿ ಶಿಫಾರಸು ಮಾಡಿತ್ತು. ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರದೊಂದಿಗೆ ವಾರಕ್ಕೆ 2 ಸಲ ಮೊಟ್ಟೆ ನೀಡಲಾಗುತ್ತಿದೆ. ಕಡಿಮೆ ತೂಕವಿರುವ ಮಕ್ಕಳಿಗೆ ವಾರಕ್ಕೆ 3-4 ದಿನಗಳ ಕಾಲ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಆದರೂ ಅಪೌಷ್ಚಿಕತೆ ಇಲ್ಲಿನ ಮಕ್ಕಳನ್ನು ಬಿಟ್ಟಿಲ್ಲ. ಇದರ ಜೊತೆಗೆ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ 15 ವರ್ಷದೊಳಗಿನ ಮಕ್ಕಳು ಒಟ್ಟು ಜನಸಂಖ್ಯೆಯ ಶೇ. 27.8ರಷ್ಟಿದ್ದರೇ, ಯಾದಗಿರಿ ಜಿಲ್ಲೆಯಲ್ಲಿ ಶೇ. 27.6, ವಿಜಯಪುರದಲ್ಲಿ ಶೇ. 27.1, ಕಲಬುರಗಿಯಲ್ಲಿ ಶೇ. 27 ಮತ್ತು ಬೀದರ್ ಜಿಲ್ಲೆಯಲ್ಲಿ ಶೇ. 25.8ರಷ್ಟಿದ್ದಾರೆ ಎಂದು ಸಮೀಕ್ಷೆಯು ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸ್ತೂರಿರಂಗನ್ ವರದಿಯ ಸಮಗ್ರ ಚರ್ಚೆಯಾಗಲಿ: ಮಾರುತಿ ಗುರೂಜಿ
ಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ನಿಂದ ಗೊಂದಲ ಸೃಷ್ಟಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ