ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನುರಾಗ್ ಬಹರ್ ಅವರು ಒಡಂಬಡಿಕೆಗೆ ಸಹಿ ಹಾಕಿದರು.
ಒಡಂಬಡಿಕೆಯಂತೆ ಪ್ರತಿಷ್ಠಾನವು ಮುಂದಿನ ಐದು ವರ್ಷಗಳಲ್ಲಿ ರಾಜೀವ್‌ಗಾಂಧಿ ಆಸ್ಪತ್ರೆ ಆವರಣದಲ್ಲಿ ಒಂದು ಸಾವಿರ ಹಾಸಿಗೆ ಸಾಮರ್ಥ್ಯದ ಮಾನವ ಬಹು ಅಂಗಾಂಗ ಕಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಿದೆ.ಪ್ರತಿಷ್ಠಾನಕ್ಕೆ ಸರ್ಕಾರ ಆಭಾರಿ:
ಒಡಂಬಡಿಕೆ ಸಹಿ ನಂತರ ಮಾತನಾಡಿದ ಸಿದ್ದರಾಮಯ್ಯ, ಸಾವಿರ ಹಾಸಿಗೆಗಳ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆಗೆ ಪ್ರತಿಷ್ಠಾನ ಪ್ರತಿ ವರ್ಷ 350ರಿಂದ 400 ಕೋಟಿ ರು.ನಂತೆ 5 ವರ್ಷಕ್ಕೆ 4 ಸಾವಿರ ಕೋಟಿ ರು. ವೆಚ್ಚ ಮಾಡಲಿದೆ. ಅಜೀಂ ಪ್ರೇಮ್‌ಜಿ ಮತ್ತು ಅವರ ಹೆಸರಿನ ಪ್ರತಿಷ್ಠಾನದ ಕಾರ್ಯಕ್ಕೆ ಸರ್ಕಾರ ಆಭಾರಿಯಾಗಿರಲಿದ್ದು, ಅವರ ಕಾರ್ಯ ಶ್ರೇಷ್ಠ ಕಾರ್ಯ. ಈ ಕಾರ್ಯಕ್ಕೆ ಬೆಂಬಲವಾಗಿ ಸರ್ಕಾರ ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆ ಆವರಣದಲ್ಲಿ 10 ಎಕರೆ ಭೂಮಿಯನ್ನು 99 ವರ್ಷಗಳಿಗೆ ಗುತ್ತಿಗೆ ಆಧಾರದಲ್ಲಿ ನೀಡುತ್ತಿದೆ ಎಂದರು.==
ಪ್ರತಿಷ್ಠಾನವು ಕಳೆದ 25 ವರ್ಷಗಳಿಂದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಸೇವೆ ಸಲ್ಲಿಸುತ್ತಿದೆ. 2021ರಲ್ಲಿ ಶಿಕ್ಷಕರ ತರಬೇತಿಗೆ, 2024ರಲ್ಲಿ ಎಲ್‌ಕೆಜಿಯಿಂದ 10ನೇ ತರಗತಿವರೆಗೆ ವಾರದಲ್ಲಿ ನಾಲ್ಕು ದಿನ ಮೊಟ್ಟೆ ಕೊಡುವ ಕಾರ್ಯಕ್ಕೆ ಒಂದೂವರೆ ಕೋಟಿ ರು. ನೀಡುವ ಮೂಲಕ ಕೈ ಜೋಡಿಸಿದೆ. ಸರ್ಕಾರಿ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುವವರಿಗೆ ವರ್ಷಕ್ಕೆ 30 ಸಾವಿರ ವಿದ್ಯಾರ್ಥಿ ವೇತನವನ್ನು ದೀಪಿಕಾ ವಿದ್ಯಾರ್ಥಿ ವೇತನ ಯೋಜನೆ ಅಡಿ ನೀಡುತ್ತಿದೆ ಎಂದು ಸ್ಮರಿಸಿದರು.ಅಂಗಾಂಗ ಕಸಿಗೆ ಕಾಯುತ್ತಿರುವವರಿಗೆ ವರದಾನ:
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಾತನಾಡಿ, ನೂತನವಾಗಿ ನಿರ್ಮಾಣಗೊಳ್ಳಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಚಿಕಿತ್ಸಾ ವೆಚ್ಚದಲ್ಲಿ ಶೇ.70ರಷ್ಟನ್ನು ಅಜೀಂ ಪ್ರೇಮ್‌ಜಿ ಪ್ರತಿಷ್ಠಾನವೇ ಭರಿಸಲಿದೆ. ಉಳಿದ ವೆಚ್ಚವನ್ನು ಫಲಾನುಭವಿಗಳು ಭರಿಸಬೇಕಿದೆ. ಒಟ್ಟಾರೆ ಶೇ.75ರಷ್ಟು ಹಾಸಿಗೆಯನ್ನು ರೋಗಿಗಳಿಗೆ ಉಚಿತವಾಗಿ ಒದಗಿಸುವುದು ಮತ್ತು ಉಳಿದ ಹಾಸಿಗೆಯನ್ನು ತೃತೀಯ ಹಂತದ ಆರೈಕೆ ಒದಗಿಸುವ ಸರ್ಕಾರ ಆಸ್ಪತ್ರೆಗಳ ದರಕ್ಕೆ ಸಮನಾದ ದರ ವಿಧಿಸಲಾಗುತ್ತದೆ. ಇದು ದೇಶದಲ್ಲಿಯೇ ಅತ್ಯುತ್ತಮ ಕಾರ್ಯ. ರಾಜ್ಯದಲ್ಲಿ ಮೂತ್ರಪಿಂಡ ಕಸಿಗೆ 5 ಸಾವಿರ ಮಂದಿ, ಯಕೃತ್ ಕಸಿಗೆ 1 ಸಾವಿರ ಮಂದಿ ಕಾಯುತ್ತಿದ್ದಾರೆ. ಅವರಿಗೆಲ್ಲ ಈ ಆಸ್ಪತ್ರೆ ವರದಾನವಾಗಲಿದೆ ಎಂದರು.ವಿಧಾನಸಭೆ ಸರ್ಕಾರದ ಮುಖ್ಯಸಚೇತಕ ಅಶೋಕ್ ಪಟ್ಟಣ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಇತರರಿದ್ದರು.