ಶಿವಕುಮಾರ ಕುಷ್ಟಗಿ
1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಹಾವುಗಳನ್ನು ಹಿಡಿಯುವುದು, ಹಾನಿ ಮಾಡುವುದು ಅಥವಾ ಸಾಗಿಸುವುದು ಶಿಕ್ಷಾರ್ಹ ಅಪರಾಧ. ಈ ಹಿನ್ನೆಲೆ ರಾಜ್ಯ ಅರಣ್ಯ ಇಲಾಖೆಯು 2022ರಲ್ಲಿ ನಿರ್ದಿಷ್ಟ ಕಾರ್ಯಾಚರಣಾ ವಿಧಾನ (ಎಸ್ಒಪಿ) ಜಾರಿಗೆ ತಂದಿತ್ತು.
ಈ ನಿಯಮದ ಪ್ರಕಾರ, ಇಲಾಖೆಯಿಂದ ತರಬೇತಿ ಪಡೆದು ಅಧಿಕೃತ ಗುರುತಿನ ಚೀಟಿ ಹೊಂದಿರುವ ಪ್ರಮಾಣಿತ ರಕ್ಷಕರು ಮಾತ್ರ ಕಾರ್ಯಾಚರಣೆ ನಡೆಸಬೇಕು. ಅನಧಿಕೃತ ವ್ಯಕ್ತಿಗಳು ಹಾವು ಸೆರೆಹಿಡಿದರೆ ವನ್ಯಜೀವಿ ಕಾಯ್ದೆಯ ಸೆಕ್ಷನ್ 9 ಮತ್ತು 12ರ ಅಡಿಯಲ್ಲಿ ಬೇಟೆ ಎಂದು ಪರಿಗಣಿಸಿ ಮೊಕದ್ದಮೆ ಹೂಡಲು ಅವಕಾಶವಿದೆ. ಆದರೆ, ನಿಯಮ ಜಾರಿಯಾಗಿ ವರ್ಷಗಳೇ ಉರುಳಿದರೂ ಅರ್ಹ ರಕ್ಷಕರಿಗೆ ಗುರುತಿನ ಚೀಟಿ ವಿತರಿಸುವ ಪ್ರಕ್ರಿಯೆ ಮಾತ್ರ ನನೆಗುದಿಗೆ ಬಿದ್ದಿದೆ.ಯಾರೂ ಹಿಡಿಯುತ್ತಿಲ್ಲ: ರಾಜ್ಯದಲ್ಲಿ ಹಾವು ರಕ್ಷಣೆಗೆ ನುರಿತ ಸಿಬ್ಬಂದಿಯ ಕೊರತೆಯಿದೆ. ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಹಾವು ಕಾಣಿಸಿಕೊಂಡಾಗ ಅರಣ್ಯ ಇಲಾಖೆಯ ಅಧಿಕಾರಿಗಳೇ ಖಾಸಗಿ ಉರಗ ರಕ್ಷಕರ ಮೊರೆ ಹೋಗುತ್ತಾರೆ. ಆದರೆ, ಅವರಿಗೆ ಅಧಿಕೃತ ಮಾನ್ಯತೆಯಾಗಲಿ, ಗುರುತಿನ ಚೀಟಿಯಾಗಲಿ ನೀಡುವುದಿಲ್ಲ. ತುರ್ತು ಸಂದರ್ಭದಲ್ಲಿ ಇವರ ಬೆನ್ನಿಗೆ ನಿಲ್ಲಬೇಕಾದ ಇಲಾಖೆಯೇ, ಅಚಾತುರ್ಯ ಅಥವಾ ಪ್ರಾಣಾಪಾಯ ಸಂಭವಿಸಿದಾಗ ಕಾನೂನು ಕ್ರಮದ ಅಸ್ತ್ರ ಪ್ರಯೋಗಿಸಬಹುದು ಎಂಬ ಭೀತಿಯಿಂದಾಗಿ ನುರಿತ ರಕ್ಷಕರೇ ರಾಜ್ಯದಲ್ಲಿ ಉರಗ ರಕ್ಷಣೆಗೆ ಮುಂದಾಗುತ್ತಿಲ್ಲ.ಕಾಗದದಲ್ಲಷ್ಟೇ ಯೋಜನೆಗಳು: ದೇಶದಲ್ಲೇ ಅತಿ ಹೆಚ್ಚು ಹಾವು ಕಡಿತ ಪ್ರಕರಣಗಳು ದಾಖಲಾಗುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ವಿಶ್ವ ಆರೋಗ್ಯ ಸಂಸ್ಥೆಯು 2030ರ ವೇಳೆಗೆ ಹಾವು ಕಡಿತದ ಸಾವುಗಳನ್ನು ಶೇ. 50ರಷ್ಟು ತಗ್ಗಿಸುವ ಗುರಿ ಹೊಂದಿದೆ. ರಾಜ್ಯ ಸರ್ಕಾರವು ಹಾವು ಕಡಿತವನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಿಸಿ, ಸಾವುಗಳ ವೈದ್ಯಕೀಯ ತನಿಖೆ ಕಡ್ಡಾಯಗೊಳಿಸಿದೆ. ಆದರೂ, ಆರೋಗ್ಯ ಮತ್ತು ಅರಣ್ಯ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಮೂಲ ಸಮಸ್ಯೆ ಇಂದಿಗೂ ಜೀವಂತವಾಗಿದೆ.3 ವರ್ಷಗಳಲ್ಲಿ 280 ಜನ ಬಲಿ: ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ರಾಜ್ಯ ಆರೋಗ್ಯ ಇಲಾಖೆಯ ಸಂಯೋಜಿತ ರೋಗ ಕಣ್ಗಾವಲು ಕಾರ್ಯಕ್ರಮದ (ಐಡಿಎಸ್ಪಿ) ಅಧಿಕೃತ ಅಂಕಿ, ಅಂಶಗಳ ಪ್ರಕಾರ, ಹಾವು ಕಡಿತದಿಂದ ಸಂಭವಿಸುವ ಸಾವುಗಳಲ್ಲಿ ಕರ್ನಾಟಕವೇ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ 2023ರಲ್ಲಿ 6,596 ಹಾವು ಕಡಿತ ಪ್ರಕರಣಗಳು ದಾಖಲಾಗಿ 19 ಜನ, 2024ರಲ್ಲಿ 13,235 ಜನರಿಗೆ ಹಾವು ಕಡಿತವಾಗಿದ್ದು 101 ಜನ, 2025ರ ಅಂತ್ಯಕ್ಕೆ 16,805 ಜನರಿಗೆ ಹಾವು ಕಡಿತವಾಗಿದ್ದು, 160 ಜನ ಮರಣ ಹೊಂದಿದ್ದಾರೆ. ಅಂದರೆ ಕಳೆದ 3 ವರ್ಷಗಳಲ್ಲಿ 280ಕ್ಕೂ ಅಧಿಕ ಜನ ಹಾವು ಕಡಿತದಿಂದ ಪ್ರಾಣ ಕಳೆದುಕೊಂಡಿದ್ದಾರೆ.
ನೆರೆಯ ರಾಜ್ಯಗಳಲ್ಲಿ ವೈಜ್ಞಾನಿಕ ವಿಧಾನದ ಮೂಲಕ ಹಾವು ರಕ್ಷಿಸುವವರಿಗೆ ಅಧಿಕೃತ ಗುರುತಿನ ಚೀಟಿ, ಗುಂಪು ವಿಮೆ ಮತ್ತು ಕಾರ್ಯಾಚರಣೆ ವೇಳೆ ಕಡಿತಕ್ಕೊಳಗಾದರೆ ಉಚಿತ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ರಾಜ್ಯದಲ್ಲಿ ಉರಗ ರಕ್ಷಕರಿಗೆ ಅಂತಹ ಯಾವುದೇ ಸುರಕ್ಷತೆ ನೀಡುತ್ತಿಲ್ಲ ಎಂದು ವನ್ಯಜೀವಿ ತಜ್ಞ ಮಂಜುನಾಥ ನಾಯ್ಕರ ಹೇಳಿದರು.