ಶಿವಮೊಗ್ಗ ಜಿಲ್ಲೆಯಲ್ಲಿ ಮೂರು ತಿಂಗಳಲ್ಲಿ 43 ಬಾಲ್ಯವಿವಾಹ ಪ್ರಕರಣ

KannadaprabhaNewsNetwork |  
Published : Aug 23, 2024, 01:04 AM IST
ಪೋಟೋ: 21ಎಸ್ಎಂಜಿಕೆಪಿ03ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವಿವಿಧ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಜಿಲ್ಲಾ ಮಟ್ಟದ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿದರು. | Kannada Prabha

ಸಾರಾಂಶ

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿವಿಧ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಜಿಲ್ಲಾ ಮಟ್ಟದ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ 43 ಬಾಲ್ಯ ವಿವಾಹ ಪ್ರಕರಣ ದಾಖಲಾಗಿದ್ದು, ಬಾಲ್ಯ ವಿವಾಹ ತಡೆ ಕಾರ್ಯ ಚುರುಕುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿವಿಧ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಜಿಲ್ಲಾ ಮಟ್ಟದ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಏಪ್ರಿಲ್ ಮಾಹೆಯಿಂದ ಜೂನ್ ವರೆಗೆ ಜಿಲ್ಲೆಯಲ್ಲಿ 43 ಬಾಲ್ಯ ವಿವಾಹ ಪ್ರಕರಣ ದಾಖಲಾಗಿದೆ. ಶಿವಮೊಗ್ಗದಲ್ಲಿ 19 ಮತ್ತು ಭದ್ರಾವತಿ 12 ಸಂಖ್ಯೆಯಲ್ಲಿದ್ದು ಈ ಎರಡು ತಾಲೂಕುಗಳಲ್ಲೇ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳಿವೆ. ಹೆಚ್ಚಿನ ಪ್ರಕರಣ ದಾಖಲಾಗಿರುವಲ್ಲಿ ಸಮುದಾಯದಲ್ಲಿ ಸೇವೆ ಸಲ್ಲಿಸಿರುವ ಮುಖಂಡರ ಮುಂದಾಳತ್ವದಲ್ಲಿ, ಅವರನ್ನೊಳಗೊಂಡು ಆ ಪ್ರದೇಶದಲ್ಲಿ ಪರಿಣಾಮಕಾರಿ ಅರಿವು ಕಾರ್ಯಕ್ರಮ ಕೈಗೊಳ್ಳಬೇಕು ಹಾಗೂ ಬಾಲ್ಯ ವಿವಾಹ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

2022-23ನೇ ಸಾಲಿನಲ್ಲಿ ಒಟ್ಟು 247 ಬಾಲ ಗರ್ಭಿಣಿಯರ ಪ್ರಕರಣ ದಾಖಲಾಗಿದ್ದು, ಇದನ್ನು ತಡೆಯಲು ಸಿಡಿಪಿಒಗಳು ಶಾಲಾ-ಕಾಲೇಜು, ಹಾಸ್ಟೆಲ್‌ಗಳಲ್ಲಿ ಅರಿವು ಕಾರ್ಯಕ್ರಮ ಮಾಡುವುದರೊಂದಿಗೆ ಪೋಷಕರಿಗೆ ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ನೇಮಕಾತಿ, ಪದೋನ್ನತಿ ಮತ್ತು ವರ್ಗಾವಣೆಗೆ ಸಂಬಂಧಿಸಿದಂತೆ ವರ್ಗಾವಣೆ ಮತ್ತು ಪದೋನ್ನತಿ ಪ್ರಕ್ರಿಯೆಯನ್ನು ಮೊದಲ ಆದ್ಯತೆಯಲ್ಲಿ ಮುಗಿಸಿ ನಂತರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕು. ಜಿಲ್ಲೆಯಲ್ಲಿ 126 ಕಾರ್ಯಕರ್ತೆ ಮತ್ತು 448 ಸಹಾಯಕಿಯರ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅಧಿಕಾರಿಗಳು ನೇಮಕಾತಿ ವೇಳೆ ಯಾವುದೇ ರೀತಿಯ ಒತ್ತಡಕ್ಕೆ ಮಣಿಯದೇ, ಪಾರದರ್ಶಕವಾಗಿ ಮತ್ತು ಎಚ್ಚರಿಕೆಯಿಂದ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 2563 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, 2103 ಗ್ರಾಮೀಣ ಭಾಗದಲ್ಲಿ ಮತ್ತು 460 ನಗರ ಭಾಗದಲ್ಲಿವೆ. 471 ಅಂಗನವಾಡಿಗಳಿಗೆ ನಿವೇಶನದ ಅಗತ್ಯವಿದ್ದು, ಶೀಘ್ರದಲ್ಲೇ ಬಿಇಒ ಒಳಗೊಂಡ ಕಾರ್ಯಪಡೆ ರಚಿಸಿ ಜಾಗ ಹುಡುಕಲಾಗುವುದು. ಸರ್ಕಾರಿ ಜಾಗ ಲಭ್ಯವಿಲ್ಲದಿದ್ದರೆ ಸಿಎ ನಿವೇಶನಗಳನ್ನು ನೋಡಿ, ಜಾಗವನ್ನು ಒದಗಿಸಲಾಗುವುದು ಎಂದರು.

ಅಂಗನವಾಡಿ ಕೇಂದ್ರಗಳ ತಕ್ಕಡಿಗಳ ತೂಕ ಮತ್ತು ಅಳತೆಯನ್ನು ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ಸತ್ಯಾಪನೆ ಮತ್ತು ದುರಸ್ತಿ ಮಾಡಿಸುವ ಅವಶ್ಯಕತೆ ಇರುತ್ತದೆ. ಆದರೆ, ಸದರಿ ಇಲಾಖೆಯವರು ಸಂಪೂರ್ಣ ರಿಪೇರಿ ಅಗತ್ಯವಿದೆ ಎಂದು ತಿಳಿಸಿದ್ದು, ಅದರ ಶುಲ್ಕವೇ ಹೆಚ್ಚಿರುವ ಕಾರಣ ಈ ಕುರಿತು ಪರಿಶೀಲಿಸಿ ಇನ್ನು 15 ದಿನಗಳ ಒಳಗಾಗಿ ತೂಕದ ಸಾಧನಗಳ ಸತ್ಯಾಪನೆ ಮತ್ತು ದುರಸ್ತಿ ಮಾಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.ಅನಧಿಕೃತ ಸ್ಪಾ ವಿರುದ್ಧ ಕ್ರಮ:

ಸ್ಪಾಗಳು ಪಾಲಿಕೆ ಮತ್ತು ಎಸ್‌ಪಿ ಕಚೇರಿಯಿಂದ ಪರವಾನಗಿ ಮತ್ತು ಅನುಮತಿ ಪಡೆಯಬೇಕು. ಪರವಾನಗಿ ಪಡೆಯದೇ ಹಾಗೂ ನಿಯಮ ಅನುಸರಿಸದೇ ಅನಧಿಕೃತವಾಗಿ ನಡೆಸುತ್ತಿರುವ ಸ್ಪಾ ಮೇಲೆ ದಾಳಿ ನಡೆಸಿ, ಮುಚ್ಚಲು ಕ್ರಮ ವಹಿಸಲಾಗುವುದು. ದಾಳಿ ವೇಳೆ ಸಿಡಿಪಿಒ ಮತ್ತು ಮಕ್ಕಳ ಕಲ್ಯಾಣ ಸಮಿತಿಯವರು ಸಹ ಹಾಜರಾಗಬೇಕು. ನಿಯಮಿತವಾಗಿ ಸ್ಪಾಗಳ ಚಟುವಟಿಕೆ ಬಗ್ಗೆ ಪರಿಶೀಲಿಸುತ್ತಿರುಬೇಕು ಎಂದು ತಿಳಿಸಿದರು.

ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ನ್ಯಾಯಾಲಯಕ್ಕೆ ಸಲ್ಲಿಸುವ ಡಿಐಆರ್‌ಗಳಿಗೆ ನ್ಯಾಯಾಲಯಗಳಿಂದ ಮಧ್ಯಂತರ ಆದೇಶ ಮತ್ತು ಆದೇಶ ನೀಡುವುದು ವಿಳಂಬವಾಗುತ್ತಿದ್ದು, ಸಂರಕ್ಷಣಾಧಿಕಾರಿಗಳು, ಪೊಲೀಸ್ ಇಲಾಖೆ ಮತ್ತು ನ್ಯಾಯವಾದಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಮಧ್ಯಂತರ ಆದೇಶದ ನೀಡುವ ಕುರಿತು ನ್ಯಾಯಾಲಯ ಸೂಕ್ತ ಕ್ರಮ ವಹಿಸಬೇಕೆಂದು ಕೋರಿದರು.

2022 ರಿಂದ 2024 ರವರೆಗೆ ಜಿಲ್ಲೆಯಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಯಡಿ 249 ಪ್ರಕರಣ ದಾಖಲಾಗಿದ್ದು, ವಿಚಾರಣೆ, ತನಿಖೆ ಹಂತದಲ್ಲಿ ಪ್ರಕರಣಗಳು ಇವೆ. ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕಿನಲ್ಲೆ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಸಿಡಿಪಿಒ ಇತರೆ ಅಧಿಕಾರಿಗಳ ಸಹಯೋಗದೊಂದಿಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಕೈಗೊಳ್ಳಬೇಕು. ಮಹಿಳಾ ಗ್ರಾಮಸಭೆಗಳು, ಸ್ತ್ರೀಶಕ್ತಿ ಗುಂಪುಗಳಲ್ಲಿ ಅರಿವು ಮೂಡಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ ಮಾತನಾಡಿ, ವಿವಿಧ ಕಾರ್ಯಕ್ರಮಗಳ ಪ್ರಗತಿ ಬಗ್ಗೆ ಮಾಹಿತಿ ನೀಡಿ, ಲೈಂಗಿಕ ಕಾರ್ಯಕರ್ತರು, ಎಚ್‌ಐವಿ ಪೀಡಿತರಿಗೆ ಗೋಪಿಶೆಟ್ಟಿಕೊಪ್ಪ ಆಶ್ರಯ ಮನೆ ಒದಗಿಸುವಂತೆ ಹಾಗೂ ಮಹಿಳಾ ನಿಲಯದ ದುರಸ್ತಿಗೆ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಬಿಡುಗಡೆಗೆ ಕ್ರಮ ವಹಿಸುವಂತೆ ಕೋರಿದರು.

ಸಭೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ ಮಾತನಾಡಿ, ಶಿವಮೊಗ್ಗ ನಗರದಲ್ಲಿ ಸ್ಪಾ ಸಂಖ್ಯೆ ಹೆಚ್ಚುತ್ತಿದ್ದು, ಇಲ್ಲಿ ವೇಶ್ಯಾವಾಟಿಕೆಯಂತಹ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಕೋರಿದರು.

ಸಭೆಯಲ್ಲಿ ಐಎಎಸ್ ಪ್ರೊಬೇಷನರಿ ಅಧಿಕಾರಿ ದೃಷ್ಟಿ ಜೈಸ್ವಾಲ್, ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೊಷ್ ಕುಮಾರ್, ಜಿ.ಪಂ ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಯೋಜನಾ ನಿರ್ದೇಶಕರಾದ ನಂದಿನಿ, ಡಿಎಚ್‌ಒ ಡಾ.ನಟರಾಜ್‌, ಡಿಡಿಪಿಯು ಪರಮೇಶ್ವರಪ್ಪ, ನಿರೂಪಣಾಧಿಕಾರಿ ಡಾ.ಸಂತೋಷ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಶಶಿರೇಖಾ, ತಾಲೂಕುಗಳ ಸಿಡಿಪಿಒ ಗಳು, ವಿವಿಧ ಕಾರ್ಯಕ್ರಮಗಳ ಅನುಷ್ಟಾನ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅ.13ರಿಂದ 5 ದಿನ ಯುವ ದಸರಾ: ನಟ ಪ್ರಭುದೇವರಿಂದ ಉದ್ಘಾಟನೆ
ದರ್ಶನ್‌ ಕೇಸ್‌: ಮಾಫಿ ಸಾಕ್ಷಿ ಪ್ರದೂಷ್‌ ಹೇಳಿಕೆ