ಬೆಂಗಳೂರು : ನಗರದ ಬನಶಂಕರಿ ದೇವಾಲಯದಲ್ಲಿ ಸೋಮವಾರ ಹುಂಡಿಗಳ ಎಣಿಕೆ ಕಾರ್ಯ ನಡೆದಿದ್ದು, ಏಪ್ರಿಲ್ ತಿಂಗಳಲ್ಲಿ 44.04 ಲಕ್ಷ ರು.ಗಳಿಗೂ ಅಧಿಕ ಕಾಣಿಕೆ ಸಂಗ್ರಹವಾಗಿದೆ.
ಇತ್ತೀಚಿನ ದಿನಗಳಲ್ಲಿ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳದಿಂದಾಗಿ ಈ ಬಾರಿ ಒಂದು ತಿಂಗಳು ಎಂಟು ದಿನಗಳಲ್ಲೇ ದೇವಾಲಯದ 13 ಹುಂಡಿಗಳು ಭರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ಹುಂಡಿಗಳನ್ನು ತೆರೆದು ಕಾಣಿಕೆ ಹಣ ಎಣಿಕೆ ಮಾಡಲಾಯಿತು.
ಕಳೆದ ಮಾರ್ಚ್ 27ರಂದು ಹುಂಡಿಗಳನ್ನು ತೆರೆಯಲಾಗಿತ್ತು. ಆಗ 25.64 ಲಕ್ಷಕ್ಕೂ ಅಧಿಕ ಕಾಣಿಕೆ ಸಂಗ್ರಹವಾಗಿತ್ತು. ಇದೀಗ ಹುಂಡಿ ತೆರೆದು ಎಣಿಕೆ ಮಾಡಿದಾಗ ನೋಟುಗಳು 42,38,4,465 ರು. ಹಾಗೂ ನಾಣ್ಯಗಳು 1,66,375 ರು. ಸೇರಿ ಒಟ್ಟು 44,04,840 ರು. ಕಾಣಿಕೆ ಸಂಗ್ರಹವಾಗಿದೆ ಎಂದು ಬನಶಂಕರಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ತಿಳಿಸಿದ್ದಾರೆ.
96 ಗ್ರಾಂ ಚಿನ್ನ ಸಂಗ್ರಹ:
ಹುಂಡಿಗಳಿಂದ 500 ರೂ. ಮುಖಬೆಲೆಯ 16,41,500 ನೋಟುಗಳು, 200 ರು.ನ 1076 ನೋಟುಗಳು, 100 ರು.. 12,29,700 ಹಾಗೂ 50 ರು.ಗಳ 7775 ನೋಟುಗಳು, 20 ರೂ. ಮುಖಬೆಲೆ 21,439 ನೋಟುಗಳು ಸೇರಿ 10, 5, 2 ಹಾಗೂ 1 ರು. ನೋಟು ಹಾಗೂ ನಾಣ್ಯಗಳು ಸಂಗ್ರಹವಾಗಿವೆ. ಜತೆಗೆ, 96 ಗ್ರಾಂ 100 ಮಿಲಿ ಚಿನ್ನ ಹಾಗೂ 573 ಗ್ರಾಂ ಬೆಳ್ಳಿ ಕಾಣಿಕೆ ಸಂಗ್ರಹವಾಗಿದೆ.
ವಿದೇಶಿ ಕರೆನ್ಸಿಗಳು: ಕೇವಲ ನೋಟು, ನಾಣ್ಯಗಳೇ ಅಲ್ಲದೆ, ಈ ಬಾರಿ 5 ವಿಯೆಟ್ನಾಂ, ಮಲೇಷಿಯಾ, ಯುಎಸ್‍ಎ, ನೇಪಾಳ, ಭೂತಾನ್, ಥೈಲ್ಯಾಂಡ್ ಕರೆನ್ಸಿಗಳು ಕೂಡ ಸಂಗ್ರಹವಾಗಿವೆ.