ಅಪಘಾತದಲ್ಲಿ ಮೃತ ಕ್ಷೌರಿಕನ ಕುಟುಂಬಕ್ಕೆ 44 ಲಕ್ಷ ಪರಿಹಾರ

KannadaprabhaNewsNetwork |  
Published : Apr 15, 2026, 04:00 AM IST
High Court

ಸಾರಾಂಶ

ರಸ್ತೆ ಅಪಘಾತದಲ್ಲಿ ಮೃತಪಟ್ಟ ಕ್ಷೌರಿಕ ವೃತ್ತಿಯಲ್ಲಿ ತೊಡಗಿದ್ದ ವ್ಯಕ್ತಿಯ ಕುಟುಂಬದವರಿಗೆ 44.47 ಲಕ್ಷ ರು. ಪರಿಹಾರ ಪಾವತಿಸುವಂತೆ ವಿಮಾ ಕಂಪೆನಿಗೆ ಹೈಕೋರ್ಟ್‌ ಆದೇಶಿಸಿದೆ. ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

 ಬೆಂಗಳೂರು :  ರಸ್ತೆ ಅಪಘಾತದಲ್ಲಿ ಮೃತಪಟ್ಟ ಕ್ಷೌರಿಕ ವೃತ್ತಿಯಲ್ಲಿ ತೊಡಗಿದ್ದ ವ್ಯಕ್ತಿಯ ಕುಟುಂಬದವರಿಗೆ 44.47 ಲಕ್ಷ ರು. ಪರಿಹಾರ ಪಾವತಿಸುವಂತೆ ವಿಮಾ ಕಂಪೆನಿಗೆ ಹೈಕೋರ್ಟ್‌ ಆದೇಶಿಸಿದೆ.

ಘಟನೆ ಸಂಬಂಧ ರಸ್ತೆ ಅಪಘಾತ ಪರಿಹಾರ ಕ್ಲೇಮು ನ್ಯಾಯಾಧೀಕರಣ ನಿಗದಿಪಡಿಸಿದ್ದ 32 ಲಕ್ಷ ರು. ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ಕೋರಿ ಮೃತ ಮಂಜುನಾಥ್‌ ಎಂಬಾತನ ಕುಟುಂಬದವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಮೃತ ವ್ಯಕ್ತಿ ಕ್ಷೌರಿಕ ವೃತ್ತಿಯಲ್ಲಿ ತೊಡಗಿದ ಹಾಗೂ ಮಾಸಿಕ 14 ಸಾವಿರು. ಸಂಪಾದಿಸುತ್ತಿದ್ದ ಅಂಶವನ್ನು ಪರಿಗಣಿಸಿದ ಹೈಕೋರ್ಟ್‌, ನ್ಯಾಯಾಧೀಕರಣ ನಿಗದಿಪಡಿಸಿದ್ದ 32.56 ಲಕ್ಷ ರು. ಪರಿಹಾರ ಮೊತ್ತವನ್ನು 44.47,100 ರು.ಗೆ ಹೆಚ್ಚಿಸಿದೆ. ಹೆಚ್ಚುವರಿಯಾಗಿರುವ 11.91 ಲಕ್ಷ ರು. ಪರಿಹಾರ ಮೊತ್ತವನ್ನು ಶೇ.6 ರಷ್ಟು ಬಡ್ಡಿಯೊಂದಿಗೆ ಮುಂದಿನ ಆರು ವಾರಗಳಲ್ಲಿ ಹಣ ಜಮೆ ಮಾಡಬೇಕು ಎಂದು ವಿಮಾ ಕಂಪನಿಗೆ ನ್ಯಾಯಪೀಠ ಆದೇಶಿಸಿದೆ.

ಪ್ರಕರಣವೇನು?:  

ಮಂಜುನಾಥ್ 2018ರ ಸೆ.4ರಂದು ತಮ್ಮ ಸಂಬಂಧಿಕರೊಬ್ಬರ ಬೈಕ್‌ನಲ್ಲಿ ಹಿಂಬದಿ ಸವಾರನಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್ ಪೇಟೆಯಿಂದ ಮಾಗಡಿ ರಸ್ತೆಯ ಶ್ರೀಗಿರಿಪುರಕ್ಕೆ ತೆರಳುತ್ತಿದ್ದರು. ಪ್ರಯಾಣದ ವೇಳೆ ನೆಲಮಂಗಲ ತಾಲ್ಲೂಕಿನ ಹೊನ್ನೇನಹಳ್ಳಿ ತಾಂಡ್ಯ ಬಳಿ ಬಂದ ರಸ್ತೆಯ ಹಂಪ್​ ನೋಡದೆ ಸವಾರ ಬೈಕ್‌ ಚಲಾಯಿಸಿದ ಪರಿಣಾಮ ನಿಯಂತ್ರಣಕ್ಕೆ ಸಿಗದೆ ಮಂಜುನಾಥ್‌ ಕೆಳಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದರು.

ಚಿಕಿತ್ಸೆ ಫಲಕಾರಿಯಾಗದೆ 2019ರ ಫೆ.23ರಂದು ಮೃತ

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಪಡೆಯುತ್ತಿದ್ದ ಸಂದರ್ಭದಲ್ಲಿ ಚಿಕಿತ್ಸೆ ಫಲಕಾರಿಯಾಗದೆ 2019ರ ಫೆ.23ರಂದು ಮಂಜುನಾಥ್‌ ಮೃತಪಟ್ಟಿದ್ದರು. ಘಟನೆ ಸಂಬಂಧ ಮೃತರ ಸಂಬಂಧಿಕರು ಪರಿಹಾರ ಕೋರಿದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ, ಘಟನೆ ನಡೆದ ದಿನದಿಂದ ಶೇ.7ರ ಬಡ್ಡಿ ದರ ಸೇರಿಸಿ 32,56,100 ರು.ಗಳ ಪರಿಹಾರ ಪಾವತಿಸಲು ಬೈಕ್‌ಗೆ ವಿಮಾ ಪಾಲಿಸಿ ವಿತರಿಸಿದ್ದ ವಿಮಾ ಕಂಪನಿಗೆ ಆದೇಶಿಸಿತ್ತು. ಈ ಮೊತ್ತ ಹೆಚ್ಚಿಸಲು ಕೋರಿ ಮೃತನ ಕುಟುಂಬದವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮಹಿಳಾ ಮೀಸಲಿಂದ ರಾಜಕೀಯ ಚಿತ್ರಣವೇ ಬದಲು : ಕುಮಾರಸ್ವಾಮಿ
ಬೀದಿಗಳಲ್ಲಿ ಇಲಿಗಳ ಕಾಟ : ಆರೋಗ್ಯ ಸಮಸ್ಯೆ ಭೀತಿ