ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ₹4500 ಕೋಟಿ: ಸಚಿವ ಜಮೀರ್ ಅಹ್ಮದ್ ಖಾನ್

KannadaprabhaNewsNetwork |  
Published : Jan 22, 2026, 02:45 AM IST
ಕಾರ್ಯಕ್ರಮವನ್ನ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಪ್ರಸ್ತುತ 2.38 ಲಕ್ಷಕ್ಕೂ ಅಧಿಕ ಮಕ್ಕಳು ವಸತಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಹಿಂದಿನ ಅವಧಿಯಲ್ಲಿ ಅನೇಕ ವಸತಿ ಶಾಲೆಗಳು ಆರಂಭಗೊಂಡಿದ್ದು, ಇದೀಗ ಮತ್ತಷ್ಟು 100 ಹೊಸ ವಸತಿ ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ.

ಗದಗ: ರಾಜ್ಯದ ಅಲ್ಪಸಂಖ್ಯಾತ ಇಲಾಖೆಯ ಎಲ್ಲ ವಸತಿ ಶಾಲೆಗಳಿಗೂ ಡಿಜಿಟಲ್ ಕ್ಲಾಸ್ ರೂಮ್ ಸೌಲಭ್ಯ ಕಲ್ಪಿಸಲಾಗುವುದು ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ತಾಲೂಕಿನ ಹರ್ತಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಅಲ್ಪಸಂಖ್ಯಾತರ ಹೆಣ್ಣುಮಕ್ಕಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೂತನ ಕಟ್ಟಡವನ್ನು ಮಂಗಳವಾರ ಸಂಜೆ ಲೋಕಾರ್ಪಣೆಗೊಳಿಸಿ ಮಾತನಾಡಿ, ರಾಜ್ಯ ಸರ್ಕಾರವು ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಈ ಉದ್ದೇಶಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ₹4,500 ಕೋಟಿ ಬಜೆಟ್ ಒದಗಿಸಲಾಗಿದೆ. ಈ ಅನುದಾನದ ಪ್ರಮುಖ ಭಾಗವನ್ನು ಮಕ್ಕಳ ಶಿಕ್ಷಣಕ್ಕೆ ಬಳಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಪ್ರಸ್ತುತ 2.38 ಲಕ್ಷಕ್ಕೂ ಅಧಿಕ ಮಕ್ಕಳು ವಸತಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಹಿಂದಿನ ಅವಧಿಯಲ್ಲಿ ಅನೇಕ ವಸತಿ ಶಾಲೆಗಳು ಆರಂಭಗೊಂಡಿದ್ದು, ಇದೀಗ ಮತ್ತಷ್ಟು 100 ಹೊಸ ವಸತಿ ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.

ಹರ್ತಿ ವಸತಿ ಶಾಲೆಗೆ ಡಿಜಿಟಲ್ ಗ್ರಂಥಾಲಯ, ಕ್ರಿಕೆಟ್ ಟರ್ಫ್ ಕೋಚಿಂಗ್ ಗ್ರೌಂಡ್, ಚೆಸ್, ಕೇರಂ ಹಾಗೂ ಟೇಬಲ್ ಟೆನ್ನಿಸ್ ಒಳಾಂಗಣ ಕ್ರೀಡಾ ಸೌಲಭ್ಯಗಳನ್ನು ಒದಗಿಸುವುದಾಗಿ ಸಚಿವ ಎಚ್.ಕೆ. ಪಾಟೀಲ ಅವರ ಮನವಿಗೆ ಸ್ಪಂದಿಸಿ ಸಚಿವ ಜಮೀರ್ ಅಹ್ಮದ್ ಖಾನ್ ಘೋಷಿಸಿದರು.

ಕಠಿಣ ಕ್ರಮ:

ವಿವಿಧ ಜಿಲ್ಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದ ವೇಳೆ ನೌಕರರ ಬೇಜವಾಬ್ದಾರಿ ಕಂಡು ಬಂದ ಹಿನ್ನೆಲೆಯಲ್ಲಿ ಇದುವರೆಗೆ 9 ನೌಕರರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ರಾಜ್ಯದ ಎಲ್ಲಾ ವಸತಿ ಶಾಲೆಗಳಲ್ಲಿ ಮಕ್ಕಳ ಆರೋಗ್ಯ, ವಸತಿ ಹಾಗೂ ಆಹಾರದ ಗುಣಮಟ್ಟ ಉತ್ತಮವಾಗಿರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಮಾತನಾಡಿ, ಹರ್ತಿ ನೂತನ ವಸತಿ ಶಾಲೆ ಪ್ರದೇಶ ಅತ್ಯಂತ ಆಕರ್ಷಕ ಕೇಂದ್ರವಾಗಿದ್ದು, ಇಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳು ದೇವರಂತೆ ಕಾಣುತ್ತಿದ್ದಾರೆ. ನಿಮ್ಮೆಲ್ಲರ ಬಾಳು ಅಂದವಾಗಿ ರೂಪುಗೊಳ್ಳಲಿ ಎಂದರು.

ಮಕ್ಕಳೊಂದಿಗೆ ಸಂವಾದ: ನಂತರ ಸಚಿವರು ವಸತಿ ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿ, ಅವರಿಗೆ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಮಕ್ಕಳು ಕುತೂಹಲದಿಂದ ತಮ್ಮ ಅಗತ್ಯಗಳನ್ನು ಸಚಿವರ ಮುಂದೆ ಮಂಡಿಸಿದ್ದು, ಅವುಗಳನ್ನು ಪೂರೈಸುವ ಭರವಸೆಯನ್ನು ಸಚಿವರು ನೀಡಿದರು.

ಈ ವೇಳೆ ಹೆಸ್ಕಾಂ ಅಧ್ಯಕ್ಷ ಅಜ್ಜಿಂಪೀರ್ ಖಾದ್ರಿ, ಎ.ಎಂ. ಹಿಂಡಸಗೇರಿ, ಗ್ರಾಪಂ ಅಧ್ಯಕ್ಷೆ ಹಾಲವ್ವ ಕುಬೇರಪ್ಪ ಕುರಿ, ಅಶೋಕ ಮಂದಾಲಿ, ಸಿದ್ದು ಪಾಟೀಲ, ರಾಮಕೃಷ್ಣ ರೊಳ್ಳಿ, ಅನ್ವರ ಭಾಷಾ, ಶರಣಬಸನಗೌಡ ಪಾಟೀಲ, ಪ್ರಭು ಹುಡೇದ, ನಿಂಗಪ್ಪ ಛಲವಾದಿ, ಬಾಪು ಕಿಲ್ಲೇದಾರ, ಪರಪ್ಪ ಕೋಳಿವಾಡ, ಗಂಗಪ್ಪ ಗಡಾದ, ಬಿ.ಟಿ. ಸೋಮರಡ್ಡಿ, ಮಹೇಶ ಪಟ್ಟಣಶೆಟ್ಟಿ, ಎಸ್.ವಿ. ಪಾಟೀಲ, ಮರಿದೇವರಮಠ, ಗೂಳಪ್ಪ ಗುಡದೂರ, ಶ್ರೀನಿವಾಸಮೂರ್ತಿ ಕುಲಕರ್ಣಿ, ಅಮಿತ್ ಬಿದರಿ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ