ಕನ್ನಡಪ್ರಭ ವಾರ್ತೆ ಕಲಬುರಗಿ
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಜಿಲ್ಲೆಯಲ್ಲಿ ಕಳೆದ 2021ರಿಂದ ಒಟ್ಟು 46 ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಅಧಿಕಾರಿಗಳ ನಿಷ್ಕಾಳಜಿಯಿಂದ ಅನುದಾನ ಬಂದಿಲ್ಲ. ಹೀಗಾಗಿ ಕೂಡಲೇ ಆ ರೈತರ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ದೇಶದ ಬೆನ್ನೆಲುಬು ರೈತರು ಎಂದು ಹೇಳುತ್ತಲೇ ಅವರ ಬದುಕೇ ಅಸ್ಥಿರ ಮಾಡಲಾಗುತ್ತಿದೆ. ಆಳುವ ಸರ್ಕಾರಗಳು ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದವರು ಸಾಲ ಬಾಧೆ, ಬರ ಪರಿಸ್ಥಿತಿ ಕಾರಣಕ್ಕೆ ರೈತರು ಆತ್ಮಹತ್ಯೆಗೆ ಶರಣಾಗಿ ಹಲವು ವರ್ಷಗಳು ಕಳೆದರೂ ಸಹ ಪರಿಹಾರ ಧನ ನೀಡುವಲ್ಲಿ ವಿಳಂಬ ನೀತಿ ಅನುಸರಿಸುವ ಮೂಲಕ ಸರ್ಕಾರವು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಅವರು ಟೀಕಿಸಿದರು.ರೈತರು ಆತ್ಮಹತ್ಯೆ ಅಥವಾ ಆಕಸ್ಮಿಕ ಮರಣ ಹೊಂದಿದರೆ ಎಫ್‍ಎಸ್‍ಎಲ್ ಹಾಕಲು ವಿಳಂಬ, ಕೃಷಿ, ಕಂದಾಯ ಇಲಾಖೆ ವರದಿ ನೀಡುವಿಕೆಯಲ್ಲಿ ವಿಳಂಬ, ಸಹಾಯಕ ಆಯುಕ್ತರ ಕಚೇರಿಯಲ್ಲಿ ಬರುಬರುತ್ತಾ ಮತ್ತಷ್ಟು ವಿಳಂಬ ಧೋರಣೆಗಳಿಂದಾಗಿ ಜಿಲ್ಲೆಯಲ್ಲಿ ಈಗಲೂ ಸಹ 46 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಧನ ಕೊಟ್ಟಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲ ಯಾವುದೇ ನೀರಾವರಿ ಯೋಜನೆಗಳು ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಪೂರ್ಣಗೊಂಡಿಲ್ಲ. ಎಲ್ಲವೂ ನೀರು ಹರಿದಷ್ಟು ಹಣ ಹರಿದಿದೆ. ಆದಾಗ್ಯೂ, ರೈತರ ಜಮೀನಿಗೆ ನೀರು ಹರಿಯಲಿಲ್ಲ. ಮಳೆಯಾಶ್ರಿತ ಪ್ರದೇಶ ಹೊಂದಿದೆ. ಮೂರ್ನಾಲ್ಕು ವರ್ಷಗಳಿಂದ ಸರಿಯಾದ ಮಳೆ ಇಲ್ಲದೇ ಇರುವುದು, ಒಮ್ಮೆ ಅತಿವೃಷ್ಟಿ, ಇನ್ನೊಮ್ಮೆ ಅನಾವೃಷ್ಟಿಯಿಂದಾಗಿ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ರೈತರ ಆದಾಯ ಎರಡು ಪಟ್ಟು ಅಧಿಕ ಮಾಡುವುದಾಗಿ ಹೇಳಿದವರು ಎಂಎಸ್‍ಪಿ ನಿಗದಿ ಮಾಡುತ್ತಿಲ್ಲ. ರಸಗೊಬ್ಬರ ಮತ್ತು ಕೀಟನಾಶಕಗಳ ಬೆಲೆ ಏರಿಕೆ ಕಂಡಿದೆ. ರೈತರಿಗೆ ಸಹಾಯಧನ ಕಡಿತ ಮಾಡಿ ಬೆನ್ನಿಗೆ ಬರೆ ಹಾಕಿದ್ದಾರೆ ಎಂದು ಆಕ್ರೋಶ ಹೊರಹಾಕಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಾಕಿ ಉಳಿದಿರುವ ರೈತರ ಆತ್ಮಹತ್ಯೆ ಮಾಡಿಕೊಂಡ ಸಂತ್ರಸ್ತ ಕುಟುಂಬಗಳಿಗೆ ಕೂಡಲೇ ಪರಿಹಾರ ನೀಡದೇ ಇದ್ದರೆ ಕುಟುಂಬಕ್ಕೆ ಆಧಾರವಾಗಿದ್ದ ರೈತರ ಜೀವ ಕಳೆದುಕೊಂಡ ಬಳಿಕ ಅವಲಂಬಿತರು ಬೀದಿ ಪಾಲಾಗುತ್ತಿದ್ದಾರೆ.
ಸಾಲ ಮರುಪಾವತಿ ಜೊತೆಗೆ ಕುಟುಂಬ ನಿರ್ವಹಣೆ ಅವರಿಗೆ ಕಷ್ಟ ಸಾಧ್ಯವಾಗುತ್ತಿದೆ. ಹೀಗಾಗಿ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಪ್ರಮುಖವಾಗಿ ಎರಡ್ಮೂರು ವರ್ಷಗಳ ಕಾಲ ವಿಳಂಬ ಧೋರಣೆ ಅನುಸರಿಸಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.ಶಾಂತಪ್ಪ ಪಾಟೀಲ್ ಸವಣೂರ್, ಚಂದು ಜಾಧವ್, ಮಹಾನಿಂಗಪ್ಪ ಪಾಟೀಲ್ ಬೇನೂರು, ವಿಠ್ಠಲ್ ಪೂಜಾರಿ, ಸುನೀಲ್ ಮಾರುತಿ ಮಾನಪಡೆ, ಸೋಮಶೇಖರ್ ಸಿಂಗೆ, ಜಲೀಲ್ ಸಾಬ್ ಮಡಕಿ, ಸುರೇಶ್ ಹೊಡಲ್, ಮೈಲಾರಿ ದೊಡ್ಡಮನಿ, ಅನಿಲ್ ಕೊಳ್ಳೂರೆ, ಕಿರಣ್ ಬಣಗಾರ್, ಹನುಮಂತ್ ಚವ್ಹಾಣ್, ಸಂಗಮೇಶ್ ಕಲಬುರ್ಗಿ, ಮನೋಜ್ ಜವಲಗೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.