- ಪ್ರಸ್ತುತ ಸಂಪುಟದಲ್ಲಿ ಒಳಚರಂಡಿಗೆ 292 ಕೋಟಿ ಮಂಜೂರು
-----ಕನ್ನಡಪ್ರಭ ವಾರ್ತೆ ಶಹಾಪುರ
ನಗರದ ನಾಗರಿಕರಿಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲು ಸರ್ಕಾರ ಅಭಿವದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿದೆ. ಸರ್ಕಾರದ ಕಾಮಗಾರಿಗಳು ನಡೆಯುವಾಗ ನಾಗರಿಕರು ಸಹಕರಿಸಬೇಕು. ನಗರ ಒಳಚರಂಡಿ ಕಾಮಗಾರಿ ಕೈಗೊಳ್ಳಲು ರಾಜ್ಯ ಸರ್ಕಾರ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ 292 ಕೋಟಿ ಅನುದಾನ ಮೀಸಲಿಟ್ಟಿದೆ. ಈ ಹಿಂದೆ ಭೀಮಾ ನದಿಯಿಂದ ನಗರಕ್ಕೆ ಶಾಶ್ವತ ಕುಡಿವ ನೀರಿನ ಕಾಮಗಾರಿ 87 ಕೋಟಿ ರು. ವೆಚ್ಚದಲ್ಲಿ ನಡೆಯುತ್ತಿದ್ದು, ಮುಗಿಯುವ ಹಂತದಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.ನಗರದ ಗಣೇಶ ನಗರದ ಅವರ ಗೃಹ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಅಮೃತ 2.0 ಯೋಜನೆ ಅಡಿಯಲ್ಲಿ ನಗರ ಪ್ರದೇಶಕ್ಕೆ ಮನೆ ಮನೆಗಳಿಗೆ ಕುಡಿವ ನೀರಿನ ನಳ ಸಂಪರ್ಕ ಕಲ್ಪಿಸುವ 86.82 ಕೋಟಿ ವೆಚ್ಚದಲ್ಲಿ ಕಾಮಗಾರಿ ಚಾಲನೆ ದೊರೆತಿದ್ದು, ಶೀಘ್ರದಲ್ಲಿ ಕಾರ್ಯಕ್ರಮ ಮಾಡುವ ಮೂಲಕ ಪ್ರಸ್ತುತ ಪಡಿಸಲಾಗುವುದು ಎಂದರು.
ನಗರದ ಜನರ ಬಹುದಿನದ ಬೇಡಿಕೆಯಾಗಿದ್ದ ಒಳಚರಂಡಿ ವ್ಯವಸ್ಥೆ ನನಸಾಗುವ ಕಾಲ ಕೂಡಿ ಬಂದಿದೆ. ಆ ನಿಟ್ಟಿನಲ್ಲಿ ಸಮಗ್ರ ವಿವರದೊಂದಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ರಾಜ್ಯ ಸರ್ಕಾರ ಒಳ ಚರಂಡಿ ಕಾಮಗಾರಿ ಕೈಗೊಳ್ಳಲು ಬೇಕಾದ 292 ಕೋಟಿ ಅನುದಾನ ಕಲ್ಪಿಸಿದ್ದು, ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿ ಕೈಗೊಳ್ಳಲಾಗುವುದು. 2009 ಕಿಲೋಮೀಟರ್ ಪೈಪ್ ಲೈನ್, 7500 ಮ್ಯಾನ್‌ವೆಲ್ ಸೇರಿದಂತೆ 13,500 ಹೋಸ್ ವಾಲ್ ನಿರ್ಮಾಣಗೊಳ್ಳಲಿವೆ. ಮುಂದಿನ 40 ವರ್ಷಗಳ ಗುರಿ ಇಟ್ಕೊಂಡು ಅನುಷ್ಠಾನಕ್ಕೆ ತರಲಾಗಿದೆ ಎಂದು ಸಚಿವರು ವಿವರಿಸಿದರು.ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನಗರದ ಮಿನಿಸೌಧ ಕಟ್ಟಡವನ್ನು ನಗರಸಭೆ ಕಾರ್ಯನಿರ್ವಹಿಸಲು ಅನುಕೂಲ ಕಲ್ಪಿಸಲಾಗುವದು. ಹಳೇ ತಹಸೀಲ್ ಕಚೇರಿ ಜಾಗದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ 50 ಹಾಸಿಗೆಯ ಆಸ್ಪತ್ರೆ ನಿರ್ಮಿಸಲಾಗುವುದು. ಶಾಶ್ವತ ಕುಡಿವ ನೀರಿನ ಯೋಜನೆ, ಒಳಚರಂಡಿ ಸೇರಿದಂತೆ ಆಡಳಿತ ಕಚೇರಿಗೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. ನೋಂದಣಿ ಕಚೇರಿ ಪ್ರಸ್ತುತ ಎಪಿಎಂಸಿ ಕಟ್ಟಡದವೊಂದರಲ್ಲಿ ಸರ್ಕಾರಿ ಕಟ್ಟಡವಾಗಿದ್ದರಿಂದ ಕಡಿಮೆ ಬಾಡಿಗೆ ದರದಲ್ಲಿ ನೋಂದಣಿ ಕಚೇರಿ ಆರಂಭಿಸಲಾಗುತ್ತಿದೆ. ನಗರಾಭಿವೃದ್ಧಿಗೆ ಬೇಕಾದ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಹಂತ ಹಂತವಾಗಿ ಮಾಡಲಾಗುತ್ತಿದೆ ಎಂದರು.
*19.50 ಕೋಟಿ ರು. ವೆಚ್ಚದಲ್ಲಿ ಪ್ರಜಾ ಸೌಧ : ತಾಲೂಕು ಮಟ್ಟದ ಆಡಳಿತ ಕಚೇರಿ ಮಿನಿಸೌಧ ಬದಲಿಗೆ ಪ್ರಜಾಸೌಧವೆಂದು ನಿರ್ಮಿಸಲಾಗುತ್ತಿದ್ದು, ಅದರಲ್ಲಿ ಎ.ಬಿ.ಸಿ ಮೂರು ವಿಭಾಗಗಳನ್ನು ಮಾಡಲಾಗಿದೆ. ಎ ಮಾದರಿ ಪ್ರಜಾಸೌಧಕ್ಕೆ 8.60 ಕೋಟಿ ರು., ಬಿ ಮಾದರಿ ಕಟ್ಟಡಕ್ಕೆ 10.70 ಕೋಟಿ, ಸಿ ಮಾದರಿ ಕಟ್ಟಡಕ್ಕೆ 16 ಕೋಟಿ ಅಂದಾಜು ಮೊತ್ತದಲ್ಲಿ ನಿರ್ಮಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಶಹಾಪುರದಲ್ಲೂ ಟೌನ್ ಹಾಲ್ ಬಳಿ ನಾಲ್ಕು ಎಕರೆ ಜಾಗದಲ್ಲಿ ಪ್ರಜಾಸೌಧ ನಿರ್ಮಿಸಲಾಗುವುದು ಎಂದು ತಿಳಿಸಿದರು.--- ಬಾಕ್ಸ್---
* ಶೀಘ್ರ ಬ್ಯಾಡ್ಮಿಂಟನ್ ಮೈದಾನ, ಜಿಮ್ ಸೌಲಭ್ಯಪ್ರತಿಭೆಯನ್ನು ಪೋಷಿಸಲು ತಳಮಟ್ಟದಿಂದ ಮಾನಸಿಕವಾಗಿ ಸುರಕ್ಷಿತ ವಾತಾವರಣ ಸೃಷ್ಟಿಸುವುದು ಅತ್ಯಗತ್ಯ. ಕ್ರೀಡಾ ಚಟುವಟಿಕೆಯಿಂದ ಮಾನವನ ಆರೋಗ್ಯ ಬಲವರ್ಧನೆಗೊಳ್ಳಲಿದೆ. ಬದುಕುವ ಆಯಸ್ಸಿನ ಪ್ರಮಾಣ ಹೆಚ್ಚಾಗಲಿದೆ. ಶಿಕ್ಷಣ ಮತ್ತು ಕ್ರೀಡೆ ಎನ್ನುವುದು ಎರಡು ಕಣ್ಣುಗಳಿದ್ದಂತೆ. ಇವುಗಳನ್ನು ಸಮಪಾಲಿನಲ್ಲಿ ತೆಗೆದುಕೊಂಡುಹೋದಲ್ಲಿ ಉತ್ತಮ ವ್ಯಕ್ತಿತ್ವ, ಜೀವನ, ಹೊಸ ಉಲ್ಲಾಸದ ಬದುಕನ್ನು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ. ಕ್ರೀಡಾಂಗಣಗಳು ಇರುವುದು ಕ್ರೀಡೆಗಾಗಿ. ಕ್ರೀಡೆಗೆ ಉತ್ತೇಜನ ನೀಡುವುದು ಸರ್ಕಾರದ ಕರ್ತವ್ಯ. ನಗರದ ಕ್ರೀಡಾಂಗಣ ಬಳಿ ಬ್ಯಾಟ್ಮಿಂಟನ್ ಮೈದಾನ ಜತೆಗೆ ಹೊರಗಡೆ ಯುವಕರಿಗೆ ವ್ಯಾಯಮ ಮಾಡಲು ಹೊರಾಂಗಣ ಜಿಮ್ ಕಸರತ್ತು ನಡೆಸಲು ಬೇಕಾದ ಜಿಮ್‌ನ 19 ಸಲಕರಣೆಗಳು ಸ್ಥಾಪಿತಗೊಳಿಸುವ ಮೂಲಕ ಮಕ್ಕಳಿಗೆ, ಯುವಕರಿಗೆ ವ್ಯಾಯಾಮ ಮಾಡಲು ಅನುಕೂಲಕರ ರೀತಿಯ ಹೊರಾಂಗಣ ಜಿಮ್ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ ಬ್ಯಾಟ್ಮಿಂಟನ್ ಮೈದಾನ ನಿರ್ಮಿಸುವ ಗುರಿ ಹೊಂದಿದ್ದು, ಇವೆರಡು ವ್ಯವಸ್ಥೆ ಕಲ್ಪಿಸುವ ಯೋಜನೆ ರೂಪಿಸಿದ್ದು, ಕೂಡಲೇ ಕಾರ್ಯಗತಗೊಳಿಸಲಾಗುವದು ಎಂದು ಸಚಿವರು ತಿಳಿಸಿದ್ದಾರೆ.
----19ವೈಡಿಆರ್2: ಶರಣಬಸಪ್ಪಗೌಡ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವರು, ಯಾದಗಿರಿ.