ಕೊಪ್ಪಳ: ಬಲ್ಡೋಟ ಸೇರಿದಂತೆ ಕಾರ್ಖಾನೆಗಳ ವಿಸ್ತರಣೆ ಹಾಗೂ ಮಾಲಿನ್ಯ ವಿರೋಧಿಸಿ, ತುಂಗಭದ್ರಾ ನೀರಿನ ರಕ್ಷಣೆಗಾಗಿ ಕೊಪ್ಪಳ-ಭಾಗ್ಯನಗರದಲ್ಲಿ ಅ. 31ರಿಂದ 48 ಗಂಟೆಗಳ ಬಂದ್ ಆಚರಿಸಲು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ನಿರ್ಧರಿಸಿದೆ.
ಅವಳಿ ನಗರ ಉಳಿಯಬೇಕಾದರೆ ವಿಸ್ತರಣೆ ನಿಲ್ಲಲಿ: ವಾಣಿಜ್ಯೋದ್ಯಮಿ ಬಸವರಾಜ ಬಳ್ಳೊಳ್ಳಿ ಮಾತನಾಡಿ, ಭಾಗ್ಯನಗರ-ಕೊಪ್ಪಳ ಅವಳಿ ನಗರಗಳು ಉಳಿಯಬೇಕಾದರೆ ಬಲ್ಡೋಟ ಕಾರ್ಖಾನೆ ವಿಸ್ತರಣೆ ತಡೆಯುವುದು ಅನಿವಾರ್ಯ. ಕಂಪನಿಗಳು ತಮ್ಮ ಏಜೆಂಟರ ಮೂಲಕ ಹೋರಾಟಗಾರರ ಒಗ್ಗಟ್ಟು ಒಡೆಯುವ ಪ್ರಯತ್ನ ಮಾಡುತ್ತಿವೆ. ಆದರೆ ಇದಕ್ಕೆ ಎದೆಗುಂದುವ ಪ್ರಶ್ನೆಯೇ ಇಲ್ಲ ಎಂದರು.
ಬಲ್ಡೋಟ ಕಂಪನಿ ತನ್ನ ಪರವಾಗಿ ನಗರದ ಪ್ರಮುಖರಿಂದ ಹೇಳಿಕೆ ಕೊಡಿಸುವ ಪ್ರಯತ್ನ ಮಾಡುತ್ತಿದೆ. ಇಂತಹ ಪ್ರಯತ್ನಗಳು ವಿಫಲವಾಗಲಿವೆ. ರಾಜಕಾರಣಿಗಳು ಈ ವಿಚಾರದಲ್ಲಿ ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕು. ಜನಪ್ರತಿನಿಧಿಗಳನ್ನು ಒಟ್ಟಾಗಿ ಪ್ರಶ್ನಿಸಬೇಕಿದೆ ಎಂದು ಹೇಳಿದರು.ಆರೋಗ್ಯ, ಗಾಳಿ, ನೀರು ನಮ್ಮ ಹಕ್ಕು: ಪುರ ಪ್ರಮುಖ ಗವಿಸಿದ್ದಪ್ಪ ಕೊಪ್ಪಳ ಮಾತನಾಡಿ, ಅ. 31ರಂದು ಕೊಪ್ಪಳ ಬಂದ್ ನಡೆಸುವುದು ಸೂಕ್ತ. ನಮ್ಮ ಆರೋಗ್ಯ, ಗಾಳಿ ಮತ್ತು ನೀರನ್ನು ಹಾಳು ಮಾಡುವ ಅಧಿಕಾರ ಯಾರಿಗೂ ಇಲ್ಲ. ಕಾರ್ಖಾನೆಗಳು ವಿಸ್ತರಣೆಗೆ ಮುಂದಾಗುತ್ತಿರುವುದನ್ನು ಜನರು ಒಗ್ಗಟ್ಟಿನಿಂದ ವಿರೋಧಿಸಬೇಕು ಎಂದರು.
48 ಗಂಟೆ ಬಂದ್‌ಗೆ ನಿರ್ಣಯ: ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಸಭೆಯ ನಿರ್ಣಯಗಳನ್ನು ಮಂಡಿಸಿದರು. ಅ. 31ರಿಂದ 48 ಗಂಟೆಗಳ ಕೊಪ್ಪಳ-ಭಾಗ್ಯನಗರ ಬಂದ್ ಆಚರಿಸುವುದು, ಜಿಲ್ಲೆಯ ಎಲ್ಲ ಸಂಘಟನೆಗಳು, ವರ್ತಕರು, ವ್ಯಾಪಾರಿಗಳು ಹಾಗೂ ವಿವಿಧ ಸಂಸ್ಥೆಗಳ ಬೆಂಬಲ ಕೋರುವುದು ಎಂದು ನಿರ್ಣಯಿಸಲಾಯಿತು.
ಅ. 29ರಂದು ಕನಕಾಪುರದಲ್ಲಿ ಪ್ರತಿಭಟನೆ: ಕನಕಾಪುರದಲ್ಲಿ ಮುಕುಂದ್ ಸುಮಿ ಸ್ಟೀಲ್ ಕಾರ್ಖಾನೆ ವಿಸ್ತರಣೆಗೆ ಮುಂದಾಗಿರುವುದನ್ನು ಖಂಡಿಸಿ ಅ. 29ರಂದು ಪ್ರತಿಭಟನೆ ನಡೆಸಲು ಸಭೆ ನಿರ್ಧರಿಸಿತು. ಜಿಲ್ಲಾಧಿಕಾರಿ ಹಾಗೂ ಪರಿಸರ ಇಲಾಖೆ ಅಧಿಕಾರಿಗಳು ನಡೆಸಲು ಉದ್ದೇಶಿಸಿರುವ ಸಾರ್ವಜನಿಕ ಆಲಿಕೆಯ ವಿರುದ್ಧವೂ ಪ್ರತಿಭಟನೆ ನಡೆಸುವುದಾಗಿ ವೇದಿಕೆ ತಿಳಿಸಿದೆ.
ಸಭೆಯಲ್ಲಿ ಡಿ.ಎಚ್. ಪೂಜಾರ, ಮಂಜುನಾಥ ಗೊಂಡಬಾಳ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ, ರೈತ ಸಂಘದ ಜಿಲ್ಲಾಧ್ಯಕ್ಷ ಸುಖಮುನಿ ಬಡಿಗೇರ ಪಾಲ್ಗೊಂಡಿದ್ದರು.